ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರದ ಗಮನ ಅಗತ್ಯ: ಡಾ.ಹೆಗ್ಗಡೆ

| Published : Nov 20 2023, 12:45 AM IST

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನ.19 ರಂದು ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ. ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡ ಬೆಂಗಳೂರು ಮತ್ತು ಮೈಸೂರು ವಿಭಾಗ ಮಟ್ಟದ ಚಿಂತನ-ಮಂಥನ, ದ.ಕ. ಜಿಲ್ಲಾ ಮಟ್ಟದ ಕ್ಷ-ಕಿರಣ ಹಾಗೂ ನಿವೃತ್ತ ಪದಾಧಿಕಾರಿಗಳ ಸಮ್ಮಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಅನುದಾನಿತ ಶಾಲೆಗಳ ಕೊರೆತೆಯನ್ನು ತುಂಬಿಕೊಡಲು ಸಂಬಂಧಪಟ್ಟ ಕ್ಷೇತ್ರದ ಸಂಸ್ಥೆ ಸಿದ್ಧವಿದೆ. ಆದರೆ ಸರ್ಕಾರವೂ ಗಮನಹರಿಸಿ ಮಕ್ಕಳ ಭವಿಷ್ಯ ರೂಪಿಸಬೇಕಿದೆ. ಎಂದು ರಾಜ್ಯಸಭಾ ಸದಸ್ಯ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನ.19 ರಂದು ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ. ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡ ಬೆಂಗಳೂರು ಮತ್ತು ಮೈಸೂರು ವಿಭಾಗ ಮಟ್ಟದ ಚಿಂತನ-ಮಂಥನ, ದ.ಕ. ಜಿಲ್ಲಾ ಮಟ್ಟದ ಕ್ಷ-ಕಿರಣ ಹಾಗೂ ನಿವೃತ್ತ ಪದಾಧಿಕಾರಿಗಳ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕರಿಗೆ ನೆಮ್ಮದಿ, ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಬೇಕಾದ ಜವಾಬ್ದಾರಿಯಿದೆ. ಮಠ, ಚರ್ಚ್ ನಿಂದ ನಡೆಸುತ್ತಿರುವ ಅನುದಾನಿತ ಶಾಲೆಗಳು ಕಟ್ಟಡ ಸಹಿತ ನೇಮಕಾತಿಯಲ್ಲಿ ಅನುಕೂಲ ಕಲ್ಪಿಸಿಕೊಡುತ್ತಿವೆ. ಇಲ್ಲದೇ ಹೋದಲ್ಲಿ ಶಾಲೆಗಳು ಮುಚ್ಚುತ್ತಾ ಬಂದರೆ ಭವಿಷ್ಯ ಹಾಳಾಗುತ್ತದೆ. ಈ ನೆಲೆಯಲ್ಲಿ ವರ್ಷಕ್ಕೆ 300 ಶಿಕ್ಷಕರನ್ನು ನೀಡುವ ಕಾರ್ಯ ಧರ್ಮಸ್ಥಳದಿಂದಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳ ಉಳಿಸಿ ಪ್ರೋತ್ಸಾಹ ನೀಡುತ್ತಿದ್ದೇವೆ. ವರ್ಷಕ್ಕೆ 3 ಕೋಟಿ ರು. ಸಹಾಯಧನದ ಮೂಲಕ ಪೀಠೋಪಕರಣ ನೀಡುತ್ತಿದ್ದೇವೆ. ಕುಳಿತು ಗೌರವದಿಂದ ಅಧ್ಯಯನ ಮಾಡುವ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಓದಿ ಬಂದು ಅನೇಕರು ವ್ಯಕ್ತಿತ್ವ ನಿರ್ಮಿಸಿಕೊಂಡವರಿದ್ದಾರೆ. ಸರ್ಕಾರಕ್ಕೆ ಗಮನ ಸೆಳೆಯುತ್ತೇನೆ. ಶಿಕ್ಷಕರಿಗೆ ನೀಡುವ ಸವಲತ್ತು ವಿದ್ಯಾರ್ಥಿಗಳಿಗೆ ತಲುಪುವುದರಿಂದ ನಾಡಿನಾದ್ಯಂತ ಶಿಕ್ಷಕರ ಕೊರತೆಯಿದ್ದಲ್ಲಿ ಶಿಕ್ಷರನ್ನು ನೇಮಿಸಲು ಸರ್ಕಾರ ಪರಿಗಣಿಸಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಸಮ್ಮಾನಿಸಲಾಯಿತು ರಾ.ಅ.ಪ್ರಾ.ಶಾ.ಶಿ.ಸಂಘದ ಪದಾಧಿಕಾರಿಗಳು ಹಾಗೂ ದ.ಕ.ಜಿಲ್ಲಾ ನಿವೃತ್ತ ಪದಾಧಿಕಾರಿಗಳನ್ನು ಡಾ.ಹೆಗ್ಗಡೆ ಸಮ್ಮಾನಿಸಿದರು.ಪ್ರಧಾನ ಕಾರ್ಯದರ್ಶಿ ಎಂ.ಕೆ.ರಾಜು ಅವರು ಅನುದಾನಿತ ಶಾಲೆಗಳು ಹಾಗೂ ಶಿಕ್ಷಕರ ಸಮಸ್ಯೆಗಳನ್ನು ಶೀಘ್ರವಾಗಿ ಈಡೇರಿಸಬೇಕೆಂಬ ಮನವಿ ಪತ್ರವನ್ನು ಡಾ.ಹೆಗ್ಗಡೆ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಡಾ.ಹನುಮಂತಪ್ಪ, ನಿಕಟಪೂರ್ವ ಕಾರ್ಯದರ್ಶಿ ಟಿ.ರವಿಕುಮಾರ್, ರಾಜ್ಯ ಉಪಾಧ್ಯಕ್ಷ ಮುತ್ತಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಕೆ.ರಾಜು, ಜಿಲ್ಲಾ ಕೋಶಾಧಿಕಾರಿ ಶಶಿಕಾಂತ್ ಜೈನ್, ಮೈಸೂರು ವಿಭಾಗೀಯ ಕಾರ್ಯದರ್ಶಿ ಅರುಣ್ ಕುಮಾರ್ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಎಚ್.ಎನ್.ರಮೇಶ್ ಹಾಗೂ ಬೆಳ್ತಂಗಡಿ ಬಿಇಒ ತಾರಕೇಸರಿ ಭಾಗವಹಿಸಿದರು.ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ದ.ಕ. ಜಿಲ್ಲಾಧ್ಯಕ್ಷ ಕೆ.ಎಂ.ಕೆ. ಮಂಜನಾಡಿ ಸ್ವಾಗತಿಸಿದರು. ಅ.ಪ್ರಾ.ಶಾ.ಶಿ.ಸಂಘ ದ.ಕ.ಜಿಲ್ಲಾ ಉಪಾಧ್ಯಕ್ಷ ಸುಬ್ರಹ್ಮಣ್ಯರಾವ್ ವಂದಿಸಿದರು. ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಲ್ವೀನ್ ಲ್ಯಾನ್ಸಿ ರೋಡ್ರಿಗಸ್ ನಿರೂಪಿಸಿದರು.