ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯುವಕರ ಸಂಘಟನೆ ಗುಂಪು ರಚಿಸಿ ಆ ಮೂಲಕ ಯುವಕರಿಗೆ ಆರ್ಥಿಕ ನೆರವಿನದೊಂದಿಗೆ ಅವರಲ್ಲಿ ದೇಶ ಪ್ರೇಮ ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಭಾರತ್ ಜೋಡೋ ಸಂಘಟನೆ ಮೂಲಕ ಯುವಕರನ್ನು ಸಂಘಟಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಬಿಎಲ್ಒ-2 ಹಾಗೂ ಗ್ರಾಪಂ ಮಟ್ಟದ ಗ್ಯಾರಂಟಿ ಸಮಿತಿ ಸದಸ್ಯರ ಮತ್ತು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯುವಕರ ಸಂಘಟನೆ ಗುಂಪು ರಚಿಸಿ ಆ ಮೂಲಕ ಯುವಕರಿಗೆ ಆರ್ಥಿಕ ನೆರವಿನದೊಂದಿಗೆ ಅವರಲ್ಲಿ ದೇಶ ಪ್ರೇಮ ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.

ದೇಶ ಪ್ರೇಮವನ್ನು ಯುವಕರಲ್ಲಿ ಸದೃಢಗೊಳಿಸಲು ಸರ್ಕಾರ ಗ್ರಾಪಂ ಮಟ್ಟದಲ್ಲಿ ಭಾರತ್ ಜೋಡೋ ಹೆಸರಿನಲ್ಲಿ ಸಂಘಟನೆ ಮಾಡಿ ಅವರಲ್ಲಿನ ಸಂಘಟನ್ಮಾತಕ ಮನೋಭಾವನೆ ಬೆಳೆಸಲಾಗುವುದು. ಸ್ಥಳೀಯವಾಗಿ ಮುಖಂಡರು ಯುವಕರನ್ನು ಆಯ್ಕೆ ಮಾಡಲು ಮುಂದಾಗಬೇಕು. ನವೆಂಬರ್ ನಲ್ಲಿ ಯುವಕರಿಗೆ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುವುದು ಎಂದು ಹೇಳಿದರು.

ತಾಲೂಕಿನಲ್ಲಿ ನಡೆದ ಎಸ್ಐಆರ್ ಪ್ರಕ್ರಿಯೆಯಲ್ಲಿ ಒಟ್ಟು 36,696 ಮಂದಿಯನ್ನು ವಿವಿಧ ಕಾರಣಗಳಿಂದ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅವರಲ್ಲಿ 11,397 ಮಂದಿ ಮರಣ ಹೊಂದಿದ್ದಾರೆ. ಅಲ್ಲದೇ 19 ಸಾವಿರ ಮತದಾರರು ಸ್ಥಳಾಂತರಗೊಂಡಿದ್ದಾರೆ. 3406 ಮಂದಿ ಎರಡು ಕಡೆ ಹೆಸರು ನೋಂದಾಯಿಸಿದ್ದಾರೆ. 2,711 ಮಂದಿ ವಿಳಾಸ ಪತ್ತೆಯಾಗಿಲ್ಲ. ಅವರಲ್ಲಿ ಬೇರೆಯೆಡೆ ಇರುವ 19 ಸಾವಿರ ಮಂದಿ ಮತದಾರರು ಉದ್ಯೋಗ ಹಾಗೂ ನಾನಾ ಕಾರಣಗಳಿಂದ ಸ್ಥಳಾಂತರಗೊಂಡಿದ್ದಾರೆ. ಅವರನ್ನು ಮತ್ತೆ ತಾಲೂಕಿಗೆ ಸೇರ್ಪಡೆ ಮಾಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ಮಾಜಿ ನಿರ್ದೇಶಕ ಆರ್.ಎನ್.ವಿಶ್ವಾಸ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸವಿತಾ, ಮುಖಂಡರಾದ ಪಿ.ಮಾದೇಶ್, ಎಂ.ಎನ್.ದಯಾಶಂಕರ್, ಎಂ.ಎನ್.ಜಯರಾಜು ಪಾಲ್ಗೊಂಡಿದ್ದರು.