ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ ಜಿಲ್ಲೆಯ ಮುಳುಗಡೆ ಸಂತ್ರಸ್ತರು, ಅರಣ್ಯಭೂಮಿ ವಾಸಿಗಳು, ಬಗರ್‌ಹುಕುಂ ರೈತರ ಸಮಸ್ಯೆಗಳು ಜನಪ್ರತಿನಿಧಿಗಳಿಗೆ ಲೆಕ್ಕಕ್ಕಿಲ್ಲದಂತೆ ಆಗಿದೆ. ತಕ್ಷಣ ಟಾಸ್ಕ್‌ಪೋರ್ಸ್ ರಚಿಸದಿದ್ದರೆ ಜಿಲ್ಲಾದ್ಯಂತ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ ಶಿರುವಾಳ ಕಿಡಿಕಾರಿದರು.
ರೈತರನ್ನು ನಿಷ್ಕಾಳಜಿಯಿಂದ ನೋಡುತ್ತಿರುವ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ಧೋರಣೆ ಖಂಡಿಸಿ ತಾಲೂಕು ರೈತ ಸಂಘದ ಡಾ. ಎಚ್.ಗಣಪತಿಯಪ್ಪ ಬಣ ವತಿಯಿಂದ ಗುರುವಾರ ತಾಳಗುಪ್ಪದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಶರಾವತಿ ಮುಳುಗಡೆ ಸಂತ್ರಸ್ತರ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅದಕ್ಕೊಂದು ತಾರ್ಕಿಕ ಅಂತ್ಯ ನೀಡಬೇಕು. ಸರ್ಕಾರ 1973ರಲ್ಲಿ ಟಾಸ್ಕ್‌ಫೋರ್ಸ್ ರಚನೆ ಮಾಡಲಾಗಿತ್ತು. ಆದರೆ, ಏಕಾಏಕಿ ಟಾಸ್ಕ್‌ಫೋರ್ಸ್ ರದ್ದು ಮಾಡಲಾಗಿದೆ. ಶರಾವತಿ, ಚಕ್ರಾ, ಸಾವೆಹಕ್ಲು, ವರಾಹಿ ಸೇರಿದಂತೆ ಬೇರೆ ಬೇರೆ ಮುಳುಗಡೆ ಸಂತ್ರಸ್ತರಿಗೆ ಟಾಸ್ಕ್ ಫೋರ್ಸ್ ರದ್ದು ಮಾಡಿದ್ದರಿಂದ ನ್ಯಾಯ ಸಿಗುತ್ತಿಲ್ಲ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ನಾವು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಸಿಎಂ ಗಂಭೀರವಾಗಿ ಪರಿಗಣಿಸಿಲ್ಲ, ತಕ್ಷಣ ಟಾಸ್ಕ್‌ಪೋರ್ಸ್ ರಚಿಸದಿದ್ದರೆ ಜಿಲ್ಲಾದ್ಯಂತ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ಕಾರ್ಯಕರ್ತ ತೀ.ನ.ಶ್ರೀನಿವಾಸ್ ಮಾತನಾಡಿ, ಸರ್ಕಾರ ತಕ್ಷಣ ಮುಳುಗಡೆ ಸಂತ್ರಸ್ತರಿಗೆ ನ್ಯಾಯಸಮ್ಮತ ಹಕ್ಕು ನೀಡಬೇಕು. ಇಲ್ಲದಿದ್ದರೆ ರೈತ ಸಂಘ ತೆಗೆದುಕೊಳ್ಳುವ ಎಲ್ಲ ಹೋರಾಟಕ್ಕೂ ಬೆಂಬಲ ನೀಡುವುದಾಗಿ ತಿಳಿಸಿದರು.ರಮೇಶ್ ಕೆಳದಿ, ಹೊಯ್ಸಳ ಗಣಪತಿಯಪ್ಪ, ಡಾ. ರಾಮಚಂದ್ರ ಮನೆಘಟ್ಟ, ವಿ.ಜಿ.ಶ್ರೀಕರ್ ಸಂಪೆಕಟ್ಟೆ, ಚೂನಪ್ಪ ಪೂಜೇರಿ, ರವಿಕುಮಾರ್ ಬಲ್ಲೂರ್, ಸುರೇಶ್, ರಾಜು ಪವಾರ್, ಶಶಿಕಾಂತ್, ಮಹಂತೇಶ್. ಪ್ರಕಾಶ್ ನಾಯ್ಕ್ ಇನ್ನಿತರರು ಹಾಜರಿದ್ದರು.
- - - -5ಕೆ.ಎಸ್.ಎ.ಜಿ.2:ತಾಳಗುಪ್ಪದಲ್ಲಿ ರೈತ ಸಂಘ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ದಿನೇಶ ಶಿರುವಾಳ ಮಾತನಾಡಿದರು.