ಸಾರಾಂಶ
ನರಗುಂದ: ಸಾವಿತ್ರಿಬಾಯಿ ಫುಲೆಯವರು ಆಗಿನ ಕಾಲದಲ್ಲಿಯೇ ರಾತ್ರಿ ಶಾಲೆಗಳನ್ನು ಪ್ರಾರಂಭಿಸಿ ಸಮಾನ ಶಿಕ್ಷಣದ ಕಲ್ಪನೆಯನ್ನು ಕೊಟ್ಟ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಿರಿದಾದುದು ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.ಸ್ತ್ರೀಯರು ಕೂಡಾ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂದು ೧೨ನೇ ಶತಮಾನದ ಬಸವಾದಿ ಶಿವಶರಣರ ಕನಸನ್ನು ನನಸಾಗಿಸಲು ಹೆಣ್ಣು ಮಕ್ಕಳಿಗಾಗಿಯೇ ವಿಶೇಷ ಶಾಲೆಗಳನ್ನು, ಶಿಶು ಕೇಂದ್ರಗಳನ್ನು ಸ್ಥಾಪಿಸಿ ಆಮೂಲಕ ಮಹಿಳೆಯರ ಮತ್ತು ಮಕ್ಕಳ ಬದುಕಿಗೆ ಭದ್ರವಾದ ನೆಲೆಕೊಟ್ಟ ದಿಟ್ಟ ಸಾಮಾಜಿಕ ಹೋರಾಟಗಾರ್ತಿ ಫುಲೆಯವರು ವಿವಾಹ ಬಾಹೀರ ಸಂಬಂಧದಿಂದ ಹುಟ್ಟಿದ ಮಕ್ಕಳಿಗೂ ಸಹಿತ ಅವರ ಶಿಕ್ಷಣಕ್ಕೆ ರಹದಾರಿಯನ್ನು ಕಲ್ಪಿಸಿದ ಶಿಕ್ಷಣ ಮಾತೆ ಎಂದರು.ಸ್ನೇಹ ಜೀವಿ ವಿದ್ಯಾಲಯದ ಮುಖ್ಯಶಿಕ್ಷಕಿ ಮಾಲಾ ಪಾಟೀಲ ಮಾತನಾಡಿ, ಸತ್ಯಶೋಧಕ ಸಮಾಜದ ಅಧ್ಯಕ್ಷೆಯಾಗಿ ೧೯ನೇ ಶತಮಾನದಲ್ಲಿ ಬಾಲ್ಯವಿವಾಹ, ಸತಿಸಹಗಮನ ಪದ್ಧತಿಯಂತ ಅನಿಷ್ಟ ಪದ್ಧತಿಗಳ ವಿರುದ್ಧ ದ್ವನಿ ಎತ್ತಿದ ವೀರ ಮಹಿಳೆ ಸಾವಿತ್ರಿಬಾಯಿ ಫುಲೆಯವರು. ಬ್ರಾಹ್ಮಣ ವಿಧವೆಯ ಮಗುವೊಂದನ್ನು ದತ್ತು ಪಡೆದು ಅದಕ್ಕೆ ಶಿಕ್ಷಣವನ್ನು ಕಲ್ಪಿಸಿ ಬದುಕನ್ನು ನೀಡಿದ ಅವರು ಈ ದೇಶಕ್ಕೆ ನೀಡಿದ ಕೊಡುಗೆ ಅಪಾರವಾದುದು. ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನುಗ್ಗುತ್ತಿರುವುದಕ್ಕೆ ಸಾವಿತ್ರಿಬಾಯಿ ಹೋರಾಟ ಬಹುಮುಖ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬ ಮಹಿಳೆಯರೂ ಅಕ್ಷರದಾತೆಯನ್ನು ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಸಾವಿತ್ರಿಬಾಯಿ ಫುಲೆಯವರ ಚಿಂತನೆಗಳು, ವಿಚಾರಧಾರೆಗಳು ಎಲ್ಲ ಶಿಕ್ಷಕ ಸಮುದಾಯಕ್ಕೆ ಹಾಗೂ ಮಕ್ಕಳಿಗೆ ಪ್ರೇರಣೆ ಅವರ ಇತಿಹಾಸವನ್ನು ಪ್ರತಿಯೊಬ್ಬರು ಅರಿಯಬೇಕಿದೆ. ಅವರಂತೆಯೇ ಎಲ್ಲರೂ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿಯರಾದ ಸಲ್ಮಾ ಎ. ಎಸ್. ಹಾಗೂ ಮಾಲಾ ಪಾಟೀಲ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಾದ ಶರಣಮ್ಮ ತೆಗ್ಗಿನಮನಿ, ರೇಣುಕಾ ಹುಜರತ್ತಿ , ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮೋಹನಕೃಷ್ಣ, ರೇಣಕ್ಕ ನರಸಾಪೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.