ದಸರಾ ಉದ್ಘಾಟಕರ ಆಯ್ಕೆ, ಸರ್ಕಾರದ ಹಕ್ಕು: ಸಚಿವ ಸತೀಶ ಜಾರಕಿಹೊಳಿ

| Published : Sep 15 2025, 01:00 AM IST

ಸಾರಾಂಶ

ಕಾಂಗ್ರೆಸ್‌ ಯಾವತ್ತೂ ಧರ್ಮ ರಾಜಕಾರಣ ಮಾಡುವುದಿಲ್ಲ. ಬಿಜೆಪಿಯವರು ಎಲ್ಲದಕ್ಕೂ ವಿರೋಧ ಮಾಡುತ್ತಾರೆ. ಅವರು ರಾಜಕೀಯ ಮಾಡಲಿ. ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಆಯ್ಕೆ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಹಾವೇರಿ: ದಸರಾ ಉದ್ಘಾಟನೆ ಯಾರು ಮಾಡಬೇಕು ಎಂಬುದನ್ನು ಸರ್ಕಾರ ಆಯ್ಕೆ ಮಾಡುತ್ತದೆ. ಅದು ಸರ್ಕಾರದ ಅಧಿಕಾರ ಮತ್ತು ಹಕ್ಕು. ಕೋರ್ಟ್‌ಗೆ ಹೋದರೂ ಸರ್ಕಾರದ ನಿರ್ಧಾರವೇ ಅಂತಿಮ ಅಂತ ಬರುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಯಾವತ್ತೂ ಧರ್ಮ ರಾಜಕಾರಣ ಮಾಡುವುದಿಲ್ಲ. ಬಿಜೆಪಿಯವರು ಎಲ್ಲದಕ್ಕೂ ವಿರೋಧ ಮಾಡುತ್ತಾರೆ. ಅವರು ರಾಜಕೀಯ ಮಾಡಲಿ. ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಆಯ್ಕೆ ಮಾಡಲಾಗಿದೆ. ಯಾರು ದಸರಾ ಉದ್ಘಾಟನೆ ಮಾಡಬೇಕು ಅಂತ ಸರ್ಕಾರ ಆಯ್ಕೆ ಮಾಡುತ್ತದೆ. ಇದು ಸರ್ಕಾರದ ಅಧಿಕಾರ. ಕನ್ನಡಾಂಬೆ ಬಗ್ಗೆ ಬಾನು ಮುಸ್ತಾಕ್ ಅವರು ಯಾವಾಗ ಏನು ಹೇಳಿದರೋ ಗೊತ್ತಿಲ್ಲ. ಅದನ್ನು ಈಗ ಕನೆಕ್ಟ್ ಮಾಡುವುದಕ್ಕೆ ಆಗುವುದಿಲ್ಲ ಎಂದರು.

ಜಾತಿಗಣತಿ ಗಂಭೀರವಾಗಿ ಮಾಡುತ್ತಿಲ್ಲ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಬದಲಾವಣೆ, ತಿದ್ದುಪಡಿಗೆ ಅವಕಾಶವಿದೆ. ಜಾತಿ ಗಣತಿ ವಿಚಾರದಲ್ಲಿ ನಮ್ಮದೂ ಲೋಪ ಇದೆ. ಆಯಾ ಜಾತಿಯವರಿಗೆ ಇನ್ನೊಂದು ಸಲ ಮನವರಿಕೆ ಮಾಡಿಕೊಡುತ್ತೇವೆ. ನಿಮ್ಮ ಜಾತಿಯನ್ನು ಸರಿಯಾಗಿ ಬರೆಸಿ ಎಂದು ಮನವರಿಕೆ ಮಾಡುತ್ತೇವೆ ಎಂದರು.

ಕಾಂಗ್ರೆಸ್‌ನಿಂದ ಮುಸ್ಲಿಂ ತುಷ್ಟೀಕರಣ ಹೆಚ್ಚಾಗಿದೆ ಎಂಬ ಬಸವರಾಜ ಬೊಮ್ಮಾಯಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಮುಸ್ಲಿಮರು ಇನ್ನೂ ಗುಡಿಸಲಿನಲ್ಲಿ ಇದ್ದಾರೆ. ಅನೇಕರಿಗೆ ಕುಡಿಯಲು ನೀರಿಲ್ಲ, ಶೌಚಾಲಯವಿಲ್ಲ. ನಾವು ಅವರಿಗೆ ಬಹಳ ದೊಡ್ಡದಾಗಿ ಏನೂ ಮಾಡಿಲ್ಲ. ಪಾಕಿಸ್ತಾನದ ಜಿಂದಾಬಾದ್ ಅಂತ ಕೂಗಿದವರನ್ನು ಸಮರ್ಥನೆ ಮಾಡುವುದಿಲ್ಲ. ಹಾಗೆ ಕೂಗಿದವರನ್ನು ಈಗಾಗಲೇ ಬಂಧಿಸಿದ್ದಾರೆ. ಓಲೈಕೆ ಮಿತಿ ಮೀರಿಲ್ಲ. ಬಿಜೆಪಿಯವರು ಹಾಗೆ ತೋರಿಸುತ್ತಿದ್ದಾರೆ. ಗಣೇಶೋತ್ಸವ ಸಂದರ್ಭದಲ್ಲಿ ಪ್ರಚೋದನೆಕಾರಿಯಾಗಿ ಮಾತಾಡಿದರೆ ಎಲ್ಲ ಕಡೆ ಕೇಸ್ ಹಾಕುತ್ತಾರೆ ಎಂದರು.

ಡಿಜೆ ಮುಂದೆ ಎರಡು ನಿಮಿಷ ನಿಂತರೆ ಅದರ ಅಪಾಯ ಗೊತ್ತಾಗುತ್ತದೆ. ಎಷ್ಟು ಡೆಸಿಬಲ್‌ ಇರಬೇಕು ಎಂಬ ನಿಯಮವಿದೆ. ಆದರೆ, ಅವರು ಹೆಚ್ಚು ಸೌಂಡ್‌ ಕೊಡುತ್ತಾರೆ. ಇದರಲ್ಲಿ ಹಿಂದೂ ಮುಸ್ಲಿಂ ಅಂತ ಮಾಡಲಿಕ್ಕೆ ಆಗುವುದಿಲ್ಲ. ಗಲಾಟೆಗೆ ಪ್ರಚೋದನೆ ಆಗಬಾರದು ಎಂಬ ಕಾರಣಕ್ಕೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ನಾವು ಬೆಳಗಾವಿಯಲ್ಲಿ ಡಿಜೆಗೆ ಅನುಮತಿ ಕೊಟ್ಟಿದ್ದೇವೆ. ಹಾವೇರಿಯಲ್ಲಿ ಎಸ್ಪಿ ಅವರನ್ನೇ ಕೇಳಿ ಎಂದರು.ಆಪರೇಷನ್ ಸಿಂದೂರ ನಂತರ ಇಂಡಿಯಾ- ಪಾಕ್ ಕ್ರಿಕೆಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ಅನುಮತಿ ಕೊಟ್ಟವರು ಯಾರು? ಗೋಮಾಂಸ ಸಾಗಿಸುವುದರಲ್ಲಿ ಭಾರತ ನಂಬರ್ 2 ಇದೆ. ಗೋಹತ್ಯೆ ನಿಷೇಧ ಮಾಡಬೇಕು ಎಂದು ಹೇಳುವವರು ಇವರೇ, ಆದರೆ, ಹೆಚ್ಚಾಗಿ ಗೋಮಾಂಸವನ್ನು ರಫ್ತು ಮಾಡುತ್ತಾರೆ. ಅವರೇ ಅನುಮತಿ ಕೊಟ್ಟು ಅವರೇ ವಿರೋಧ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ಸೆಪ್ಟೆಂಬರ್ ಕ್ರಾಂತಿ ಠುಸ್ ವಿಚಾರದ ಬಗ್ಗೆ ಮಾತನಾಡಿ, ಸರ್ಕಾರದಲ್ಲಿ ಶಾಂತಿ ಇದ್ದರೆನೇ ಆರಾಮ ಇರುತ್ತದೆ. ಪ್ರತಿದಿನ ಕ್ರಾಂತಿ ಇದ್ದರೆ ಸರ್ಕಾರ ನಡೆಯುವುದು ಹೇಗೆ? ಸಚಿವ ಸಂಪುಟ ವಿಸ್ತರಣೆಗೆ ಸಚಿವಾಕಾಂಕ್ಷಿಗಳ ಒತ್ತಾಯ ಸಹಜ. ಎಲ್ಲರಿಗೂ ಮಂತ್ರಿ ಆಗಬೇಕು ಅಂತ ಇರುತ್ತೆ. ನಮ್ಮಲ್ಲಿ ಅನೇಕರು ಹಿರಿಯರಿದ್ದಾರೆ. ಮಾಡುವುದು ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು ಎಂದು ಚುಟುಕಾಗಿ ಉತ್ತರಿಸಿದರು.