ಸರ್ಕಾರದ ಚಿಂತನೆ ದಿಕ್ಕು ತಪ್ಪಿಸುವ ಕೆಲಸ: ಯದುವೀರ್

| Published : Oct 20 2025, 01:04 AM IST

ಸರ್ಕಾರದ ಚಿಂತನೆ ದಿಕ್ಕು ತಪ್ಪಿಸುವ ಕೆಲಸ: ಯದುವೀರ್
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಕಾರ್ಯಕ್ರಮ ನಿಷೇಧಿಸಲು ಸರ್ಕಾರ ಚಿಂತಿಸಿರುವುದು ದಿಕ್ಕು ತಪ್ಪಿಸುವ ಕೆಲಸ ಎಂದು ಸಂಸದ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ಎಸ್ ಕಾರ್ಯಕ್ರಮ ನಿಷೇಧಿಸಲು ಸರ್ಕಾರ ಚಿಂತಿಸಿರುವುದು ದಿಕ್ಕು ತಪ್ಪಿಸುವ ಕೆಲಸ ಎಂದು ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸೃಷ್ಟಿಸಿದೆ. ಈ ಸರ್ಕಾರಕ್ಕೆ ಒಂದು ರಸ್ತೆ ಮಾಡುವ ಶಕ್ತಿ ಇಲ್ಲ. ಇದನ್ನು ಮುಚ್ಚಿಕೊಳ್ಳಲು ಆರ್ ಎಸ್ಎಸ್ ಬ್ಯಾನ್ ವಿಷಯವನ್ನು ತೆಗೆದುಕೊಂಡಿದೆ. ಇದು ಆರ್ ಎಸ್ ಎಸ್ ನ ಶತಮಾನೋತ್ಸವ ಆಚರಣೆಗೆ ವಿರೋಧ ಅಂತಲ್ಲ. ಬದಲಾಗಿ ಏನೋ ಒಂದು ಸುದ್ದಿ ಸೃಷ್ಟಿಸಬೇಕಾಗಿದೆ. ಏನೋ ಒಂದು ಸುದ್ದಿ ಸೃಷ್ಟಿಸಿ ತನ್ನ ವೈಫಲ್ಯ ಮುಚ್ಚಿಕೊಳ್ಳಬೇಕಾಗಿದೆ. ಅದಕ್ಕಾಗಿ ಹೀಗೆ ಸೃಷ್ಟಿಸಿದೆ ಎಂದರು.

ಇದರ ವಿರುದ್ಧ ನಮ್ಮ ಪಕ್ಷ ಹೋರಾಟ ರೂಪಿಸುತ್ತದೆ. ಸಂಘ ಕೂಡ ಹೋರಾಟ ನಡೆಸುತ್ತದೆ ಎಂದು ಸರ್ಕಾರದ ವಿರುದ್ಧ ಸಂಸದ ಯದುವೀರ್ ಒಡೆಯರ್ ವಾಗ್ದಾಳಿ ನಡೆಸಿದ ಅವರು, ಆರ್ ಎಸ್ ಎಸ್ ಒಂದು ರಾಷ್ಟ್ರಭಕ್ತ ಸಂಘಟನೆ, ಭಾರತೀಯರ ಸಂಸ್ಕೃತಿ ಇರಬಹುದು ಧರ್ಮ ಇರಬಹುದು. ಅವುಗಳನ್ನು ರಕ್ಷಣೆ ಮಾಡುತ್ತಾ ಬಂದಿರುವ ಸಂಸ್ಥೆ ಅದು. ನೂರು ವರ್ಷ ಪೂರೈಸಿರುವಾಗ ಸೇವೆ ದೃಷ್ಟಿಯಿಂದ ಹಲವು ಚಟುವಟಿಕೆ ಮಾಡುತ್ತಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಎಸ್ಪಿ ಒಪ್ಪಿಗೆ ಪಡೆಯಬೇಕೆಂಬ ಸರ್ಕಾರದ ನಿಯಮ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ಆಸ್ತಿಗಳಲ್ಲಿ ಕಾರ್ಯಕ್ರಮಕ್ಕೆ ನಿಯಮ ಮಾಡಲಿ. ಆ ನಿಯಮಗಳ ಪ್ರಕಾರವೇ ಕಾರ್ಯಕ್ರಮಗಳ ಮಾಡುತ್ತೇವೆ. ಅದಕ್ಕೇನು ಸಮಸ್ಯೆ ಇಲ್ಲ. ಆದರೆ ಆ ನಿಯಮಗಳ ಫುಲ್ ಫಿಲ್ ಮಾಡಿದ ಮೇಲೆ ಅನುಮತಿ ಕೊಡಲೇ ಬೇಕು ಎಂದು ಹೇಳಿದರು.

ಗಣವೇಷಧಾರಿಯಾಗಿದ್ದ ಪಿಡಿಓ ಅನ್ನು ಅಮಾನತು ಮಾಡಿರುವುದಕ್ಕೆ ಪ್ರತಿಕ್ರಿಯಿಸಿ ಸಂಸದ ಯದುವೀರ್, ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಸಿದ್ಧಾಂತ, ಹೋರಾಟಕ್ಕೆ ಅವಕಾಶವಿದೆ. ಹಾಗೆಯೇ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ನಾವು ನಮ್ಮ ಚಟುವಟಿಕೆಯಲ್ಲಿ ಭಾಗವಹಿಸಬಹುದು. ಸರ್ಕಾರಿ ಕೆಲಸಕ್ಕೂ ವೈಯಕ್ತಿಕ ಕೆಲಸಕ್ಕೂ ವ್ಯತ್ಯಾಸವಿದೆ. ಈ ಸರ್ಕಾರಕ್ಕೆ ಒಪ್ಪಿಗೆ ಇಲ್ಲದ ಸಿದ್ಧಾಂತದ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ ಎಂದರೆ ಹೇಗೆ? ಅದು ಕೂಡ ಆ ಪಿಡಿಓ ತಮ್ಮ ವೈಯಕ್ತಿಕ ಸಮಯದ ಅವಧಿಯಲ್ಲಿ ಭಾಗವಹಿಸಿದ್ದಾರೆ. ಆದರೂ ಅಮಾನತು ಮಾಡಿರುವುದು ಖಂಡನೀಯ ಎಂದು ವಾಗ್ದಾಳಿ ನಡೆಸಿದರು.