ದ.ಕ.ದಲ್ಲಿ ಸರ್ಕಾರದಿಂದ ಮಂಜೂರಾದ ಜಮೀನುಗಳ ಪೋಡಿ ಅಭಿಯಾನ

| Published : May 02 2025, 12:16 AM IST

ದ.ಕ.ದಲ್ಲಿ ಸರ್ಕಾರದಿಂದ ಮಂಜೂರಾದ ಜಮೀನುಗಳ ಪೋಡಿ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದಿಂದ ಇದುವರೆಗೆ ಮಂಜೂರಾದ ಎಲ್ಲ ಬಗೆಯ ಜಮೀನುಗಳ ಪೋಡಿ ಅಭಿಯಾನವನ್ನು ದ.ಕ. ಜಿಲ್ಲಾಡಳಿತ ಕೈಗೆತ್ತಿಕೊಂಡಿದ್ದು, ಇದಕ್ಕಾಗಿ ಹೊರ ಜಿಲ್ಲೆಗಳಿಂದ 50 ಲೈಸನ್ಸ್ಡ್‌ ಸರ್ವೇಯರ್‌ಗಳನ್ನು ಕರೆಸಿದೆ. ತಮ್ಮ ಜಮೀನಿನ ದಾಖಲೆಗಳಿಗೆ ಸಂಬಂಧಿಸಿದಂತೆ ಅತ್ಯಂತ ಉಪಯುಕ್ತವಾಗಲಿರುವ ಈ ಪೋಡಿ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮನವಿ ಮಾಡಿದ್ದಾರೆ.

ಹೊರ ಜಿಲ್ಲೆಗಳಿಂದ ಸರ್ವೇಯರ್‌ಗಳ ಆಗಮನ, ಸಹಕಾರ ನೀಡಲು ಸಾರ್ವಜನಿಕರಿಗೆ ಡಿಸಿ ಮನವಿಕನ್ನಡಪ್ರಭ ವಾರ್ತೆ ಮಂಗಳೂರು

ಸರ್ಕಾರದಿಂದ ಇದುವರೆಗೆ ಮಂಜೂರಾದ ಎಲ್ಲ ಬಗೆಯ ಜಮೀನುಗಳ ಪೋಡಿ ಅಭಿಯಾನವನ್ನು ದ.ಕ. ಜಿಲ್ಲಾಡಳಿತ ಕೈಗೆತ್ತಿಕೊಂಡಿದ್ದು, ಇದಕ್ಕಾಗಿ ಹೊರ ಜಿಲ್ಲೆಗಳಿಂದ 50 ಲೈಸನ್ಸ್ಡ್‌ ಸರ್ವೇಯರ್‌ಗಳನ್ನು ಕರೆಸಿದೆ.

ತಮ್ಮ ಜಮೀನಿನ ದಾಖಲೆಗಳಿಗೆ ಸಂಬಂಧಿಸಿದಂತೆ ಅತ್ಯಂತ ಉಪಯುಕ್ತವಾಗಲಿರುವ ಈ ಪೋಡಿ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಮನವಿ ಮಾಡಿದ್ದಾರೆ.

ಕರಾವಳಿಯಲ್ಲಿ ಸರ್ವೇಯರ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ, ಸರ್ಕಾರಿ ಜಮೀನುಗಳ ಪೋಡಿ ಪ್ರಕ್ರಿಯೆಗೆ ವೇಗ ನೀಡುವ ಉದ್ದೇಶದಿಂದ ಲೈಸನ್ಸ್ಡ್‌ಸರ್ವೇಯರ್‌ಗಳನ್ನು ನೇಮಕ ಮಾಡಲಾಗಿತ್ತು. ಇದೀಗ ಅಭಿಯಾನದ ರೂಪದಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗಿದ್ದು, ಹೊರಜಿಲ್ಲೆಗಳಿಂದ ಸರ್ವೇಯರ್‌ಗಳನ್ನು ಕರೆಸಲಾಗಿದೆ. ಕಳೆದ 2-3 ದಿನಗಳಿಂದ ಅವರು ಜಿಲ್ಲೆಗೆ ಆಗಮಿಸಿ ಕೆಲಸ ಆರಂಭಿಸಿದ್ದಾರೆ ಎಂದರು.

ದ.ಕ. ಜಿಲ್ಲೆಯಲ್ಲಿ ಸರ್ಕಾರದಿಂದ ಮಂಜೂರಾದ ಜಮೀನುಗಳ ೩೦,೬೮೫ ಅರ್ಜಿಗಳನ್ನು ನಮೂದು ಮಾಡಲಾಗಿದೆ. ಈ ಪೈಕಿ ೧೧,೦೯೬ ಅರ್ಜಿಗಳನ್ನು ಸರ್ಕಾರ ನಿಗದಿಪಡಿಸಿರುವ ತಂತ್ರಾಂಶಗಳ ಮೂಲಕ ಗ್ರಾಮ ಆಡಳಿತಾಧಿಕಾರಿಗಳ ಹಂತದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇವುಗಳಲ್ಲಿ ೮,೩೮೯ ಅರ್ಜಿಗಳನ್ನು ತಹಸೀಲ್ದಾರರ ಹಂತದಲ್ಲಿ ಇತ್ಯರ್ಥಪಡಿಸಲಾಗಿದೆ. ಉಳಿದ ೨೪,೬೩೯ ಫಲಾನುಭವಿಗಳನ್ನು ಗುರುತಿಸಿ ಸರ್ವೆ ಇಲಾಖೆಗೆ ಪೋಡಿ ಕಾರ್ಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಸರ್ವೇಯರ್‌ಗಳು (ಭೂ ಮಾಪಕರು) ಸ್ಥಳಕ್ಕೆ ಬಂದಾಗ ಸಂಬಂಧಪಟ್ಟ ಭೂ ಮಂಜೂರುದಾರರು ಹಾಜರಿದ್ದು, ಮಂಜೂರಾದ ಸ್ಥಳದ ಗಡಿಗಳನ್ನು ತೋರಿಸಿ, ಅಳತೆಯಾದಂತೆ ಗಡಿಗಳಿಗೆ ಗಡಿ ಕಲ್ಲುಗಳನ್ನು ಹಾಕಿಸಲು ಸಹಕರಿಸಬೇಕು. ಸಂಬಂಧಪಟ್ಟವರು ಸ್ಥಳದಲ್ಲಿ ಹಾಜರಿಲ್ಲದಿದ್ದರೂ ಸ್ಥಳದ ಮಾಹಿತಿಯಂತೆ ಅಳತೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಭೂ ದಾಖಲೆಗಳ ಉಪ ನಿರ್ದೇಶಕಿ ಪ್ರಸಾದಿನಿ ಇದ್ದರು...............

ಜನರ ಸಮಯ, ಹಣ ಉಳಿತಾಯ

ಈ ಪೋಡಿ ಅಭಿಯಾನವು ಸರ್ಕಾರದಿಂದ ವಿವಿಧ ರೀತಿಗಳಲ್ಲಿ ಮಂಜೂರಾದ ಜಮೀನುಗಳಿಗೆ ಮಾತ್ರ ಅನ್ವಯ. ಕೆಲ ವರ್ಷಗಳ ಹಿಂದೆ ಮಂಜೂರಾದ 94ಸಿ ಹಕ್ಕುಪತ್ರಗಳಿಗೂ ಅನ್ವಯಿಸುತ್ತದೆ.

ಸಾಮಾನ್ಯವಾಗಿ ಸರ್ಕಾರದಿಂದ ಮಂಜೂರಾದ ಭೂಮಿಯನ್ನು ನಿಗದಿತ ಅವಧಿಯ ಬಳಿಕ ಮಾರಾಟ ಮಾಡಬೇಕಾದರೆ ಅಥವಾ ಆ ಜಮೀನಿನ ಪೋಡಿಯನ್ನು ಸ್ವತಃ ಭೂಮಾಲೀಕರೇ ಮಾಡಬೇಕಾದರೆ ವರ್ಷಗಟ್ಟಲೆ ಸಮಯ, ಹಣ ವ್ಯಯವಾಗುತ್ತದೆ. ಈಗ ಸರ್ಕಾರವೇ ಪೋಡಿ ಅಭಿಯಾನ ಕೈಗೆತ್ತಿಕೊಂಡಿರುವುದರಿಂದ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆ. ಹಿಂದೆ ಕಣ್ಣಳತೆಯ ನಕ್ಷೆ ಮಾಡಿ ಮಂಜೂರು ಮಾಡಲಾಗಿತ್ತು. ಈ ಅಭಿಯಾನದಲ್ಲಿ ಸರ್ವೇ ನಡೆಸಿ ಜಮೀನಿನ ಗಡಿ ಗುರುತು ಮಾಡಿ ನಕ್ಷೆ ತಯಾರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.