ಮುಂಡರಗಿ: ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಹುಡ್ಕೋ ಕಾಲನಿಯ ಬಸ್ ತಂಗುದಾಣದಲ್ಲಿ ಮಂಗಳವಾರ ಮಧ್ಯರಾತ್ರಿ ವಾಮಾಚಾರ ಮಾಡಿರುವ ಘಟನೆ ಜರುಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.ಕೊಪ್ಪಳ ರಸ್ತೆಗೆ ಹೊಂದಿಕೊಂಡಿರುವ ಹುಡ್ಕೋ ಕಾಲನಿ ಬಸ್ ತಂಗುದಾಣದಲ್ಲಿ ನಿತ್ಯವೂ ವಿದ್ಯಾರ್ಥಿಗಳು, ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಅನೇಕ ಪ್ರಯಾಣಿಕರು ಇಲ್ಲಿ ಬಸ್ಸಿಗಾಗಿ ಕಾದು ಕುಳಿತುಕೊಳ್ಳುತ್ತಾರೆ. ಇಂತಹ ಜನನಿಬಿಡ ಸ್ಥಳದಲ್ಲಿಯೇ ದುಷ್ಕರ್ಮಿಗಳು ಮಂಗಳವಾರ ಮಧ್ಯರಾತ್ರಿ ವಾಮಾಚಾರ ಮಾಡಿದ್ದಾರೆ.ಬುಧವಾರ ಬೆಳಗ್ಗೆ ಎಂದಿನಂತೆ ಪ್ರಯಾಣಿಕರು ಬಸ್ ತಂಗುದಾಣದ ಬಳಿ ತೆರಳಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ವಾಮಾಚಾರ ಮಾಡಿದ ಬಸ್ ತಂಗುದಾಣದಲ್ಲಿ ನಿಂಬೆಹಣ್ಣು, ಕುಂಕುಮ, ಅರಿಶಿಣ, ಮೊಟ್ಟೆ, ಗೊಂಬೆ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳು ಚದುರಿಕೊಂಡಿರುವುದು ಕಂಡುಬಂದಿದೆ. ಅಲ್ಲದೇ ಹುಡ್ಕೋ ಕಾಲನಿಯ ಅನೇಕ ಮನೆಗಳಿಗೆ ನಿಂಬೆ ಹಣ್ಣುಗಳನ್ನು ಒಗೆದು ಹೋಗಿದ್ದಾರೆಂದು ನಿವಾಸಿಗಳು ಆರೋಪಿಸಿದ್ದಾರೆ.ಈ ರೀತಿಯ ವಾಮಾಚಾರ ಬಸ್ ತಂಗುದಾಣದಲ್ಲಿ ಇದೇ ಮೊದಲ ಬಾರಿ ಏನಲ್ಲ. ಕಳೆದ ವರ್ಷವೂ ಇಂತಹ ಕೃತ್ಯಗಳು ಇಲ್ಲಿ ನಡೆದಿದ್ದವು. ವಾಮಾಚಾರದ ಹಿನ್ನೆಲೆ ಹಗಲು ಹೊತ್ತಿನಲ್ಲಿಯೇ ಬಸ್ ತಂಗುದಾಣದ ಬಳಿ ಬರಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವರ್ಷವೂ 2- 3 ತಿಂಗಳ ಕಾಲ ಜನತೆ ಇತ್ತ ಸುಳಿದಿರಲಿಲ್ಲ.ಸ್ಥಳೀಯ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬುದ್ಧಿ ಕಲಿಸಬೇಕು. ಇಲ್ಲದಿದ್ದರೆ ಪದೇ ಪದೇ ಇಂತಹ ಪ್ರಕರಣಗಳು ಹೆಚ್ಚಾಗುತ್ತವೆ. ಪುರಸಭೆಯಿಂದ ಪಟ್ಟಣದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮೂಢನಂಬಿಕೆ: ನಾವು ಇದೀಗ 21ನೇ ಶತಮಾನದ ವೈಜ್ಞಾನಿಕ ಯುಗದಲ್ಲಿದ್ದೇವೆ. ಆದ್ಯಾಗ್ಯೂ ಇಂತಹ ಮಾಟ, ಮಂತ್ರ, ವಾಮಾಚಾರಗಳಂತಹ ಕೃತ್ಯಗಳನ್ನು ಮಾಡುವ ಮೂಲಕ ಕೆಲವರು ಜನರನ್ನು ಇನ್ನೂ ಮೂಢನಂಬಿಕೆಯಿಂದ ಹೊರಬರದೇ ಭಯಭೀತರನ್ನಾಗಿಯೇ ಇಡಲು ಪ್ರಯತ್ನಿಸುತ್ತಿರುವುದು ವಿಷಾದದ ಸಂಗತಿ ಎಂದು ಸ್ಥಳೀಯ ನಿವಾಸಿ ವೀರಣ್ಣ ಕ. ತುಪ್ಪದ ತಿಳಿಸಿದರು.