ಉನ್ನತೀಕರಿಸುವ, ವಿಲೀನದ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ಶಿಕ್ಷಣ ನೀತಿ ಬಡ ಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಸುವ ಸಾಧ್ಯತೆಯಿದೆ

ಹಗರಿಬೊಮ್ಮನಹಳ್ಳಿ: ಕೆಪಿಎಸ್ ಮತ್ತು ಮಾಗ್ನೆಟ್‌ ಶಾಲೆಗಳಲ್ಲಿ ವಿಲೀನಗೊಳಿಸುವ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ರಾಜ್ಯದಾದ್ಯಂತ ಮುಚ್ಚುವ ವ್ಯವಸ್ಥಿತ ಪಿತೂರಿ ನಡೆದಿದೆ. ಬಡ ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವ ಹುನ್ನಾರ ನಡೆದಿದೆ ಎಂದು ಎಸ್.ಎಫ್.ಐ.ನ ವಿಜಯನಗರ ಜಿಲ್ಲಾಧ್ಯಕ್ಷ ಜಯಸೂರ್ಯ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಓಬಳಾಪುರ ಗ್ರಾಮದ ಸರ್ಕಾರಿ ಶಾಲೆಯ ಬಳಿ ಸಂಘಟನೆಯ ವತಿಯಿಂದ ನಡೆದ ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಲೂಕಿನ ನಿಮ್ಮ ಗ್ರಾಮ ಸೇರಿದಂತೆ ಗುಳೆದಾಳು ಗ್ರಾಮದ ಸರ್ಕಾರಿ ಶಾಲೆಯನ್ನು ಕೆಪಿಎಸ್ ಶಾಲೆಗಳಲ್ಲಿ ಮತ್ತು ಮ್ಯಾಗ್ನೆಟ್‌ ಶಾಲೆಗಳಲ್ಲಿ ವಿಲೀನದ ಹೆಸರಿನಲ್ಲಿ ಮುಚ್ಚಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಸರ್ಕಾರಿ ಶಾಲೆಗಳು ಗ್ರಾಮದಲ್ಲಿಯೇ ಉಳಿದು, ಬೆಳೆಯಬೇಕು. ಉನ್ನತೀಕರಿಸುವ, ವಿಲೀನದ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ಶಿಕ್ಷಣ ನೀತಿ ಬಡ ಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಸುವ ಸಾಧ್ಯತೆಯಿದೆ. ಶಿಕ್ಷಣವನ್ನು ಪೂರ್ತಿಯಾಗಿ ಖಾಸಗೀಕರಣಗೊಳಿಸುವ ಅಪಾಯವಿದೆ ಎಂದು ಎಚ್ಚರಿಸಿದರು.

ಗುಳೇದಾಳ್ ಮತ್ತು ಓಬಳಾಪುರ ಗ್ರಾಮದ ಎ.ಕೆ. ಕೃಷ್ಣಪ್ಪ, ನರಸಿಂಹರಾಜ, ರಮೇಶ, ಕರಿಯಪ್ಪ, ಹನುಮಂತ ಸ್ವಾಮಿ, ತಿಪ್ಪೇಸ್ವಾಮಿ, ಬಸವರಾಜ, ಕುಮಾರಪ್ಪ, ನಾಗರಾಜ, ಜ್ಞಾನೇಶ, ಪವಾಡಪ್ಪ ದುರ್ಗೇಶ, ನಿಂಗರಾಜ, ಧರ್ಮಪ್ಪ, ಪೂಜಾರಿ ರಾಮೇಶ, ಪದ್ದಮ್ಮ, ಸುಮಂಗಳ, ಗಂಗಮ್ಮ, ಗುಂಡ್ರ ನಿಂಗಜ್ಜ, ತಳವಾರ್ ಹೇಮಣ್ಣ, ಜಟಂಗಿ ಶಿವಣ್ಣ, ಬಣಕಾರ್ ಮಲ್ಲೇಶ, ವೆಂಕಟೇಶ, ಮಹಾಂತೇಶ, ಗೋಣಿಸ್ವಾಮಿ, ಕಲ್ಲೇಶ ಅವಾಜಿ, ಬಸವರಾಜ ಮತ್ತಿತರರು ಪಾಲ್ಗೊಂಡಿದ್ದರು.