ಗಂಗಾವತಿ: ತೀವ್ರ ವಿರೋಧದ ನಡೆವೆ ಶಾಲೆ ಮುಚ್ಚಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಗಡ್ಡಿ-ಬಂಡ್ರಾಳ್ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ತಾಲೂಕಿನ ಬಂಡ್ರಾಳ್ ಮತ್ತು ಗಡ್ಡಿ ಗ್ರಾಮದಲ್ಲಿ ನಮ್ಮೂರ ಶಾಲೆ ನಮ್ಮಯ ಕಣ್ಮಣಿ ಬ್ಯಾನರ್ ನಲ್ಲಿ ಎಸ್‌ಡಿಎಂಸಿ ಪದಾಧಿಕಾರಿ, ಪೋಷಕರು, ಗ್ರಾಮಸ್ಥರು ಹಾಗೂ ಶಿಕ್ಷಣ ಉಳಿಸಿ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ನಮ್ಮೂರ ಶಾಲೆ ಮುಚ್ಚಲು ನಾವು ಎಂದಿಗೂ ಬಿಡುವುದಿಲ್ಲ ಎಂದು ಘೋಷಣೆ ಹಾಕಿದ ಗ್ರಾಮಸ್ಥರು ನಮ್ಮೂರ ಶಾಲೆ ಉಳಿಯಬೇಕು ಮತ್ತು ಕೆಪಿಎಸ್ ಯೋಜನೆ ರದ್ದಾಗಬೇಕೆಂದು ಆಗ್ರಹಿಸಿದರು. ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಿಕೊಂಡು ಕಳೆದ 5 ತಿಂಗಳಿಂದ ಗ್ರಾಮಸ್ಥರು ಹಾಗೂ ಪೋಷಕರು ಹೋರಾಟ ನಡೆಸಿದ್ದೇವೆ. ಗ್ರಾಮಮಟ್ಟದಿಂದ ಆರಂಭಿಸಿ ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದವರೆಗೂ ಪ್ರತಿಭಟನೆ ಹಾಗೂ ಸಮಾವೇಶ ನಡೆಸಿದ್ದೇವೆ. ನಾಡಿನ ಹೆಸರಾಂತ ಸಾಹಿತಿ ಹಾಗೂ ಶಿಕ್ಷಣ ತಜ್ಞರು ನಮ್ಮೊಂದಿಗೆ ಧ್ವನಿಗೂಡಿಸಿದ್ದಾರೆ ಎಂದರು.ಬಡವರು, ರೈತ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾದರೂ ಪರವಾಗಿಲ್ಲ, ಕೆಪಿಎಸ್ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್ ನಲ್ಲಿ ಘೋಷಿಸಿರುವಂತೆ ಜೂನ್ ನಿಂದಲೇ ಹೊಸ ಕೆಪಿಎಸ್ ಶಾಲೆ ಆರಂಭಿಸಲಾಗುತ್ತಿದೆ. ಇಲ್ಲಿ 3 ರಿಂದ 5 ಕಿಮೀ ವ್ಯಾಪ್ತಿಯ ಶಾಲೆ ವಿಲೀನಗೊಳಿಸಲಾಗುವುದೆಂದು ಅ.15,2025ರ ಆದೇಶ ತಿಳಿಸುತ್ತದೆ. ಈ ಕುರಿತು ಪಟ್ಟಿ ಕೂಡ ದೊರೆತಿದೆ ಹಾಗೂ ಮುಂದುವರೆದು ರಾಜ್ಯ ಸರ್ಕಾರವು ಮೂರು ವರ್ಷಗಳಲ್ಲಿ ದೇಶದಲ್ಲೇ ಅತ್ಯುತ್ತಮ ಸರ್ಕಾರಿ ಶಾಲೆ ವ್ಯವಸ್ಥೆ ರೂಪಿಸಲಾಗುವುದು ಎಂದು ನೆಪ ಹೇಳುತ್ತಾ ಎಂಟು ಶಿಕ್ಷಣದ ಗ್ಯಾರಂಟಿ ಘೋಷಿಸುತ್ತಾ ರಾಜ್ಯದ ಜನತೆಗೆ ವಿಶ್ವಾಸದ್ರೋಹ ಬಗೆಯುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ರಾಜ್ಯ ಸಮಿತಿ ಸದಸ್ಯೆ ಸಿಂಧು ಕೌದಿ, ಎಐಡಿವೈಓ ಮುಖಂಡ ಶರಣು ಪಾಟೀಲ್,ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಪದಾಧಿಕಾರಿ ಲಕ್ಷ್ಮಣ್ ಯಾದವ್, ದೇವರಾಜ ಬಂಡ್ರಾಳ್, ಬೆಟ್ಟಪ್ಪ ಜಲ್ಲಿ, ಮಲ್ಲೇಶ್ ಪೊಲೀಸ್ ಪಾಟೀಲ್, ಕನಕ ಬಿಂಗಿ, ದುರುಗೇಶ್ ಜಲ್ಲಿ, ಭಾಷಾ ಸಾಬ್ ಆನೆಗುಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.