ಸರ್ಕಾರಿ ಶಾಲೇಲಿ ಮಕ್ಕಳ ದಾಖಲಾತಿ ಕುಸಿತ

| Published : Jun 22 2025, 01:18 AM IST

ಸಾರಾಂಶ

೨೦೨೫- ೨೬ನೇ ಸಾಲಿನ ಶೈಕ್ಷಣಿಕ ವರ್ಷ ಈಗಾಗಲೇ ಆರಂಭವಾಗಿದೆ, ಕಳೆದ ವರ್ಷ ತಾಲೂಕಿನ ಫಲಿತಾಂಶ ಕುಸಿದಿದ್ದರಿಂದ ಸರ್ಕಾರ ಇಲಾಖೆಗೆ ನೋಟಿಸ್ ನೀಡಿದೆ. ಆದರೆ ಕಾಯಂ ಶಿಕ್ಷಕರ ಕೊರತೆ ನಡುವೆ ಉತ್ತಮ ಫಲಿತಾಂಶ ಕೊಡಲು ಹೇಗೆ ಸಾಧ್ಯ ಎಂಬುದು ಇಲಾಖೆಯ ಅಧಿಕಾರಿಗಳನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

೨೦೨೫- ೨೬ನೇ ಸಾಲಿನ ಶೈಕ್ಷಣಿಕ ವರ್ಷ ಈಗಾಗಲೇ ಆರಂಭವಾಗಿದೆ, ಕಳೆದ ವರ್ಷ ತಾಲೂಕಿನ ಫಲಿತಾಂಶ ಕುಸಿದಿದ್ದರಿಂದ ಸರ್ಕಾರ ಇಲಾಖೆಗೆ ನೋಟಿಸ್ ನೀಡಿದೆ. ಆದರೆ ಕಾಯಂ ಶಿಕ್ಷಕರ ಕೊರತೆ ನಡುವೆ ಉತ್ತಮ ಫಲಿತಾಂಶ ಕೊಡಲು ಹೇಗೆ ಸಾಧ್ಯ ಎಂಬುದು ಇಲಾಖೆಯ ಅಧಿಕಾರಿಗಳನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.ತಾಲೂಕಿನಲ್ಲಿ ೨೦ ಸರ್ಕಾರಿ ಪ್ರೌಢಶಾಲೆಗಳು, ೧೮೩ ಕಿರಿಯ, ೬೭ಹಿರಿಯ ಪ್ರಾಥಮಿಕ ಶಾಲೆಗಳಿವೆ. ಅದರಲ್ಲಿ ೫೫೦ ಶಿಕ್ಷಕರು ಪ್ರಾಥಮಿಕ ಶಾಲೆಗಳಲ್ಲಿ, ೧೪೦ ಶಿಕ್ಷಕರು ಪ್ರೌಢಶಾಲೆಗಳಲ್ಲಿ ಕಾರ್ಯನಿವರ್ಹಿಸುತ್ತಿದ್ದಾರೆ, ಆದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಕಾಯಂ ಶಿಕ್ಷಕರಿಲ್ಲದೆ ಅನೇಕ ಗ್ರಾಮೀಣ ಪ್ರದೇಶದ ಶಾಲೆಗಳು ಕಳೆಗುಂದಿವೆ. ೪೮೫ ಕಾಯಂ ಶಿಕ್ಷಕರ ಕೊರತೆ ಇದೆ. ಹೀಗಿರುವಾಗ ಉತ್ತಮ ಫಲಿತಾಂಶ ನೀಡಲು ಕಷ್ಟವಾಗಿದೆ.ಇದರ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಹ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ, ೨೦೨೩,೨೪ನೇ ಸಾಲಿನಲ್ಲಿ ೧೩೬೮೦ ಮಕ್ಕಳು ದಾಖಲಾಗಿದ್ದರೆ, ೨೦೨೪,೨೫ನೇ ಸಾಲಿನಲ್ಲಿ ೧೨೭೧೮ ಮಕ್ಕಳು ದಾಖಲಾಗಿದ್ದರು, ೨೦೨೫, ೨೬ನೇ ಸಾಲಿನಲ್ಲಿ ಇದುವರೆಗೂ ೯೫೫೧ ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ಮಕ್ಕಳ ಸಂಖ್ಯೆ ಕೊರತೆಯಿಂದ ಕಳೆದ ವರ್ಷ ಹತ್ತು ಶಾಲೆಗಳಿಗೆ ಬೀಗ ಹಾಕಲಾಗಿತ್ತು.

ಈ ವರ್ಷ ಒಂದರಿಂದ ಐದು ಮಕ್ಕಳು ಮಾತ್ರ ದಾಖಲಾಗಿರುವ ೭ಶಾಲೆಗಳಿವೆ. ಆದರೆ ಸರ್ಕಾರದ ಸೂಚನೆಯಂತೆ ಒಬ್ಬರಿದ್ದರೂ ಶಾಲೆಯನ್ನು ಮುಚ್ಚದೆ ತರಗತಿ ನಡೆಸಬೇಕಾಗಿರುವುದರಿಂದ ಮೊದಲೇ ಶಿಕ್ಷಕರ ಕೊರತೆ ಇದೆ, ಈಗ ಒಬ್ಬ ವಿದ್ಯಾರ್ಥಿಗೂ ಒಬ್ಬ ಶಿಕ್ಷಕರನ್ನು ನೇಮಕ ಮಾಡುವುದರಿಂದ ಮತ್ತಷ್ಟು ಸಮಸ್ಯೆ ಉಂಟಾಗಿದೆ.ಸರ್ಕಾರಿ ಶಾಳೆಗಳಲ್ಲಿ ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ,ಆದರೆ ಫಲಿತಾಂಶ ಮಾತ್ರ ನಿರೀಕ್ಷೆ ಮಟ್ಟದಲ್ಲಿ ಇಲ್ಲದಿರುವುದು ಸರ್ಕಾರಕ್ಕೆ ತಲೆಬಿಸಿ ಉಂಟಾಗಿ ಆಯಾ ಬಿಇಒ ಗಳಿಗೆ ನೋಟಿಸ್ ನೀಡಿ ಕಾರಣ ಕೇಳಿದೆ. ಆದರೆ ವಾಸ್ತವಾಂಶ ಪ್ರಕಾಶ ಸರ್ಕಾರ ಬಟ್ಟೆ, ಪುಸ್ತಕ, ಬಿಸಿಯೂಟ ನೀಡಿದೆ, ಆದರೆ ಮೂಲಭೂತವಾಗಿ ಬೇಕಾಗಿರುವ ಶಿಕ್ಷಕರನ್ನೇ ನೀಡಿಲ್ಲ. ೫೦- ೬೦ ಮಕ್ಕಳಿಗೆ ಒಬ್ಬ ಶಿಕ್ಷಕರನ್ನು ನೀಡಿದರೆ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯವೆಂಬುದು ಪೋಷಕರ ವಾದವಾಗಿದೆ.

ತಾಲೂಕಿನಲ್ಲಿ ಒಟ್ಟು ೪೮೫ ಶಿಕ್ಷಕರ ಕೊರತೆ ಇದೆ, ಈ ಪೈಕಿ ಅತಿಥಿ ಶಿಕ್ಷಕರಾಗಿ ೩೭ಮಂದಿಯನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ, ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸುರಿದಂತಾಗಿದೆ. ಕಾಯಂ ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಅವಧಿಗೆ ಅಡೆತಡೆ ಉಂಟಾಗುವ ಸಾಧ್ಯತೆ ಹೆಚ್ಚಿದೆ.ಸರ್ಕಾರವೇ ಶಾಲೆಗಳಿಗೆ ಕಾಯಂ ಶಿಕ್ಷಕರನ್ನು ನೇಮಿಸದೆ ನಿರ್ಲಕ್ಷ್ಯವಹಿಸುತ್ತಿದೆ, ಇದರಿಂದ ಖಾಸಗಿ ಶಾಲೆಗಳಿಗೆ ಲಾಭವಾಗುತ್ತಿದೆ.

ಶಿಕ್ಷಕರಿಲ್ಲದೆ ಶಾಲೆಗಳನ್ನು ಆರಂಭಿಸುವುದೇ ಇಲಾಖೆಗೆ ದೊಡ್ಡ ತಲೆ ನೋವಾಗಿದೆ. ಒಬ್ಬ ಶಿಕ್ಷಕ ಎಲ್ಲಾ ವಿಷಯಗಳಿಗೆ ಪಾಠ ಮಾಡುವುದಾದರೂ ಹೇಗೆ, ಆರ್ಥಿಕವಾಗಿ ಹೊರೆಯಾದರೂ ಪರವಾಗಿಲ್ಲ ನಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ನಿರ್ಧರಿಸಿದ್ದೇವೆ ಎಂದು ಗಡಿ ಭಾಗದ ಮಕ್ಕಳ ಪೋಷಕರು ಸಮರ್ಥಿಸಿಕೊಳ್ಳುತ್ತಿದ್ದಾರೆ.