ಸಾರಾಂಶ
ಹನೂರು ಪಟ್ಟಣದ ಸರ್ಕಾರಿ ಪಿ.ಎಂ.ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಮಂಜುನಾಥ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ಧರಿಸಿದರು.
ಹನೂರು: ಸರಕಾರಿ ಶಾಲೆ ಎಂದರೆ ಆಲಸ್ಯ ಬೇಡ. ಇಂದಿನ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿರುವ ಬಹತೇಕರು ಕನ್ನಡ ಸರಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದರು ಎಂಬುದೇ ಹೆಮ್ಮೆಯ ವಿಚಾರ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಶಾಲಾ ಶೈಕ್ಷಣಿಕ ವರ್ಷದ ಪುನಾರಂಭದ ಪ್ರಯುಕ್ತ ಪಟ್ಟಣದ ಸರ್ಕಾರಿ ಪಿಎಂಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡುವ ಮೂಲಕ ಸರ್ಕಾರದಿಂದ ಸಿಗುವ ಹಲವಾರು ಸಲವತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕಾರಿಸಲು ಶಿಕ್ಷಕರು ಹಾಗೂ ಪೋಷಕರು ಶ್ರಮಿಸಬೇಕು ಎಂದರು.ಕಾರ್ಯಕ್ರಮದಲ್ಲಿ ನೂತನವಾಗಿ ಪ್ರಾರಂಭಿಸಿರುವ ಎಲ್‌ಕೆಜಿ ಆಂಗ್ಲ ಮಾಧ್ಯಮ ಕ್ಲಾಸ್‌ಗೆ ಚಾಲನೆ ನೀಡಿದರು. ನಂತರ ಶಾಲಾ ಕೊಠಡಿಗಳ ಪರಿಶೀಲನೆ ನಡೆಸಿ ಬಳಿಕ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಂಬಿಕಾ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಮ್ತಾಜ್ ಬಾನು, ಸದಸ್ಯರಾದ ಮಂಜುಳಾ ಸತೀಶ್, ಸಂಪತ್ ಕುಮಾರ್, ಚಾಮುಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್ ಹಾಗೂ ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.