ಶತಮಾನದ ಇತಿಹಾಸ ಹೊಂದಿರುವ ಸರ್ಕಾರಿ ಕನ್ನಡ ಶಾಲೆಗಳು ರಾಜ್ಯದಲ್ಲಿ ಅಪರೂಪದಲ್ಲಿ ಅಪರೂಪವಾಗಿದೆ. ಶಾಲೆಯ ಹಳೆ ವಿದ್ಯಾರ್ಥಿಗಳು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದು ಈ ದಿಸೆಯಲ್ಲಿ ಶಾಲೆಯನ್ನು ಉಳಿಸಿ ಭವಿಷ್ಯದಲ್ಲಿ ಹಲವು ಪ್ರತಿಭಾನ್ವಿತರಿಗೆ ವೇದಿಕೆ ಕಲ್ಪಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.

ಶಿಕಾರಿಪುರ: ಶತಮಾನದ ಇತಿಹಾಸ ಹೊಂದಿರುವ ಸರ್ಕಾರಿ ಕನ್ನಡ ಶಾಲೆಗಳು ರಾಜ್ಯದಲ್ಲಿ ಅಪರೂಪದಲ್ಲಿ ಅಪರೂಪವಾಗಿದೆ. ಶಾಲೆಯ ಹಳೆ ವಿದ್ಯಾರ್ಥಿಗಳು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದು ಈ ದಿಸೆಯಲ್ಲಿ ಶಾಲೆಯನ್ನು ಉಳಿಸಿ ಭವಿಷ್ಯದಲ್ಲಿ ಹಲವು ಪ್ರತಿಭಾನ್ವಿತರಿಗೆ ವೇದಿಕೆ ಕಲ್ಪಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು. ಭಾನುವಾರ ಪಟ್ಟಣದ ಹಳಿಯೂರು ತೇರುಬೀದಿಯಲ್ಲಿರುವ ಸರ್ಕಾರಿ ಬಾಲಕಿಯರ ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರ ಅಸಡ್ಡೆಯಿಂದಾಗಿ ದಾಖಲಾತಿ ಕುಸಿಯುತ್ತಿದ್ದು, ಈ ದಿಸೆಯಲ್ಲಿ ಶತಮಾನದ ಶಾಲೆಗಳು ಅಪರೂಪವಾಗಿದೆ ಎಂದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆ ಶತಮಾನದ ಇತಿಹಾಸ ಹೊಂದಿ ಕನ್ನಡ ಶಾಲೆ ಎಂಬ ಹಿರಿಮೆ ಮೂಲಕ ಅಪರೂಪದಲ್ಲಿ ಅಪರೂಪವಾಗಿ ಗುರುತಿಸಿಕೊಂಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಶಾಲೆಯ ಹಳೆ ವಿದ್ಯಾರ್ಥಿಗಳು ರಾಜ್ಯ ದೇಶದ ಮೂಲೆಮೂಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮೂಲಕ ಶಾಲೆಯ ಗೌರವ ಹೆಚ್ಚಿಸಿದ್ದಾರೆ. ಹಳೆ ವಿದ್ಯಾರ್ಥಿಗಳು ಶಾಲೆಯ ಜತೆ ಭಾವನಾತ್ಮಕ ಸಂಬಂಧ ಹೊಂದಿದ್ದು, ಶಾಲೆಯನ್ನು ಉಳಿಸಿ ಬೆಳೆಸಿ ಭವಿಷ್ಯದಲ್ಲಿ ಹೆಚ್ಚು ಹೆಚ್ಚು ಪ್ರತಿಭಾನ್ವಿತರಿಗೆ ವೇದಿಕೆ ಕಲ್ಪಿಸಿಕೊಡಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.ಹಳೆ ವಿದ್ಯಾರ್ಥಿಗಳ ಜತೆ ಪ್ರತಿಯೊಬ್ಬರ ಹೆಮ್ಮೆಯ ಶಾಲೆಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ₹30 ಲಕ್ಷ ಅನುದಾನದ ಮೂಲಕ ಅಭಿವೃದ್ಧಿಪಡಿಸಲಾಗಿದೆ ಎಂದ ಅವರು, ಕಳೆದ 30 ವರ್ಷದ ಹಿಂದಿನ ಶಿಕಾರಿಪುರ ಇದೀಗ ಸಂಪೂರ್ಣ ಬದಲಾಗಿದ್ದು, ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರರ ಪರಿಶ್ರಮದಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭಿವೃದ್ಧಿಯ ತಾಲೂಕು ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದು ತಿಳಿಸಿದರು. ಜನಶಿಕ್ಷಣ ಸಂಸ್ಥೆಯ ನಿರ್ದೇಶಕಿ ಹಾಗೂ ಶಾಲೆಯ ಹಳೆ ವಿದ್ಯಾರ್ಥಿನಿ ಬಿ.ವೈ.ಅರುಣಾದೇವಿ ಮಾತನಾಡಿ, ಆರ್ಥಿಕ ದುರ್ಬಲರಿಗಾಗಿ ಮಾತ್ರ ಸರ್ಕಾರಿ ಶಾಲೆ ಎಂಬ ಅಪವಾದ ಹೋಗಲಾಡಿಸಿ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸಲು ಅಭಿಯಾನ ಹಮ್ಮಿಕೊಳ್ಳಬೇಕಾಗಿದೆ ಎಂದರು.

ಹಲವು ಹಿರಿಯರು, ಶಿಕ್ಷಕರ ಪರಿಶ್ರಮದಿಂದ ಶತಮಾನೋತ್ಸನದ ಸಂಭ್ರಮದಲ್ಲಿರುವ ಶಾಲೆಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಬಾಲ್ಯದ ಸುಂದರ ಕ್ಷಣಗಳನ್ನು ನೆನಪಿಸುವ ಶಾಲೆಯನ್ನು ಅತ್ಯುನ್ನತ ಶಿಕ್ಷಣ ಸಂಸ್ಥೆ ಎಂಬ ರೀತಿಯಲ್ಲಿ ಪುನರ್ ನಿರ್ಮಿಸುವ ಮೂಲಕ ದೇಶಕ್ಕೆ ಸರ್ಕಾರಿ ಶಾಲೆ ಆದರ್ಶವಾಗಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸದ ರಾಘವೇಂದ್ರ ಮಾತನಾಡಿ, ಯಡಿಯೂರಪ್ಪನವರ ಆಶೀರ್ವಾದದಿಂದ ತಾಲೂಕು ಸದೃಢವಾಗಿ ಕಟ್ಟುವ ವ್ಯವಸ್ಥೆಯಾಗಿದ್ದು, ₹2.5 ಸಾವಿರ ಕೋಟಿ ವೆಚ್ಚದ ಶಿಕಾರಿಪುರ ಮೂಲಕ ಶಿವಮೊಗ್ಗ-ರಾಣೆಬೆನ್ನೂರು ರೈಲು ನಿರ್ಮಾಣದ ವೇಗದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಾಶ್ವತ ನೀರಾವರಿ ಯೋಜನೆ ಮತ್ತಿತರ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ನಂತರದಲ್ಲಿ ಅಭಿವೃದ್ಧಿ ರಾಜಕಾರಣ ಎಂಬ ಧ್ಯೇಯ ಹೊಂದಿರುವುದಾಗಿ ತಿಳಿಸಿದರು.

ಪುರಸಭಾ ಮಾಜಿ ಸದಸ್ಯ ಉಳ್ಳಿ ದರ್ಶನ್ ಮಾತನಾಡಿದರು.

ಇದೇ ವೇಳೆ ನಿವೃತ್ತ ಶಿಕ್ಷಕರ ಸಹಿತ ಗಣ್ಯರನ್ನು ಸನ್ಮಾನಿಸಲಾಯಿತು.

ಶತಮಾನೋತ್ಸವ ಸಲಹಾ ಸಮಿತಿ ಅಧ್ಯಕ್ಷ ವಸಂತಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಮುಖಂಡ ಚನ್ನವೀರಪ್ಪ, ಮಂಜುನಾಥ್ (ರಾಜಲಕ್ಷ್ಮಿ), ಮಂಜಪ್ಪ, ಮಂಜು ಸಿಂಗ್, ಎಸ್‌ಡಿಎಂಸಿ ಅಧ್ಯಕ್ಷೆ ಸಂಗೀತಾ, ಶಾಲೆ ಮುಖ್ಯ ಶಿಕ್ಷಕಿ ಗೀತಾ ಪಾಟೀಲ್, ಗಾಯತ್ರಿದೇವಿ ಸಹಿತ ಅಧಿಕ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.