ಭಾರೀ ಮಳೆಗೆ ಸರ್ಕಾರಿ ಶಾಲೆ ಮೇಲ್ಛಾವಣಿ, ಮನೆ ಗೋಡೆ ಕುಸಿತ..!

| Published : Oct 23 2024, 12:52 AM IST

ಭಾರೀ ಮಳೆಗೆ ಸರ್ಕಾರಿ ಶಾಲೆ ಮೇಲ್ಛಾವಣಿ, ಮನೆ ಗೋಡೆ ಕುಸಿತ..!
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಬಳ್ಳೇಕೆರೆ ಗ್ರಾಮದ ಸರ್ಕಾರಿ ಶಾಲೆ ಮೇಲ್ಚಾವಣಿ ಕುಸಿದಿದ್ದು, ಭಾರೀ ಪ್ರಮಾಣದ ದುರಂತ ತಪ್ಪಿದೆ. ಮಕ್ಕಳನ್ನು ಬಿಟ್ಟ ನಂತರ ಶಾಲೆ ಮೇಲ್ಚಾವಣಿ ಕುಸಿದಿದ್ದು, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಕೆಲ ಭಾಗಗಳಲ್ಲಿ ಸೋಮವಾರ ಸುರಿದ ಭಾರೀ ಮಳೆಗೆ ಸರ್ಕಾರಿ ಶಾಲೆ ಮೇಲ್ಚಾವಣಿ, ಮನೆ ಗೋಡೆ ಕುಸಿದಿದ್ದು, ಕೆರೆ ಏರಿ ಬಿರುಕು ಬಿಟ್ಟು, ಹಲವೆಡೆ ಬೆಳೆಗಳು ನಾಶವಾಗಿರುವ ಘಟನೆ ವರದಿಯಾಗಿದೆ.

ತಾಲೂಕಿನ ಬಳ್ಳೇಕೆರೆ ಗ್ರಾಮದ ಸರ್ಕಾರಿ ಶಾಲೆ ಮೇಲ್ಚಾವಣಿ ಕುಸಿದಿದ್ದು, ಭಾರೀ ಪ್ರಮಾಣದ ದುರಂತ ತಪ್ಪಿದೆ. ಮಕ್ಕಳನ್ನು ಬಿಟ್ಟ ನಂತರ ಶಾಲೆ ಮೇಲ್ಚಾವಣಿ ಕುಸಿದಿದ್ದು, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಶಾಲಾ ಕಟ್ಟಡ ಶಿಥಲವಾಗಿರುವುದರ ಬಗ್ಗೆ ಗ್ರಾಮಸ್ಥರು ಹತ್ತು ಹಲವು ಸಲ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಾಗಿರಲಿಲ್ಲ. ಶಿಥಿಲ ಕಟ್ಟಡದಲ್ಲಿಯೇ ಮಕ್ಕಳು ಕಲಿಯ ಬೇಕಾದ ಪರಿಸ್ಥಿತಿ ಎದುರಾಗಿತ್ತು.

ಮಳೆ ನೀರು ನಾಲೆಗೆ ನುಗ್ಗಿದ ಪರಿಣಾಮ ತಾಲೂಕಿನ ಸಾರಂಗಿ ಬಳಿ ಹೇಮಾವತಿ ಮುಖ್ಯ ನಾಲೆ ಮೇಲ್ಗಾಲುವೆಯ ಮೇಲೆ ಭಾರೀ ಪ್ರಮಾಣದ ನೀರು ಹರಿದಿದೆ. ಅಪಾಯದ ಮುನ್ಸೂಚನೆಯಿಂದ ಎಚ್ಚೆತ್ತ ನೀರಾವರಿ ಇಲಾಖೆ ಎಂಜಿನಿಯರ್‌ ತಕ್ಷಣವೇ ಹೇಮಾವತಿ ಜಲಾಶಯದಿಂದ ನಾಲೆಗೆ ಹರಿಸುತ್ತಿದ್ದ ನೀರನ್ನು ಸ್ಥಗಿತಗೊಳಿಸಿ ಆಗಬಹದಾದ ಭಾರೀ ಅನಾಹುತವನ್ನು ತಪ್ಪಿಸಿದರು.

ಕಳೆದ ಮೂರ್‍ನಾಲ್ಕು ವರ್ಷಗಳ ಹಿಂದೆ ಇದೇ ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಗೆ ಸಾರಂಗಿ ಮೇಲ್ಗಾಲುವೆಯ ನಾಲಾ ಏರಿ ಒಡೆದು ಉಂಟಾದ ಭಾರೀ ಪ್ರವಾಹದಿಂದ ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೆರೆಯ ಏರಿ ಬಿರುಕು:

ಮಳೆಯಿಂದ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದ ಕೆರೆ ತುಂಬಿ ಏರಿಯ ಒಂದು ಭಾಗ ಕುಸಿದಿದೆ. ಕೆರೆ ಏರಿಯಲ್ಲಿ ಬಿರುಕು ಉಂಟಾಗಿದ್ದು ಬಿರುಕು ಬಿಟ್ಟಿರುವ ಸ್ಥಳದ ತಳಭಾಗದಿಂದ ಭಾರೀ ಪ್ರಮಾಣದ ನೀರು ಕೆಳ ಭಾಗದ ಹಳ್ಳಕ್ಕೆ ಹರಿಯುತ್ತಿದೆ.

ಹಳ್ಳದಿಂದ ಹರಿಯುತ್ತಿರುವ ಭಾರೀ ಪ್ರಮಾಣದ ನೀರು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ಲಕ್ಷಾಂತರ ರು. ಮೌಲ್ಯದ ಬೆಳೆ ನೀರಿನಲ್ಲಿ ಮುಳುಗಿದೆ. ಕಳೆದ 3 ವರ್ಷಗಳ ಹಿಂದೆ ಕೂಡಾ ಇಂತಹದ್ದೇ ಅನಾಹುತವಾಗಿ ಕೆರೆ ಏರಿ ಹಾಗೂ ರಸ್ತೆಗಳು ಮಳೆಗೆ ಕೊಚ್ಚಿಹೋಗಿದ್ದವು. ಅತಿವೃಷ್ಟಿಯಿಂದ ಹಾನಿಗೀಡಾದ ಕೆರೆ ಏರಿಯನ್ನು ಇದುವರೆಗೂ ದುರಸ್ತಿ ಮಾಡದ ಕಾರಣ ಮತ್ತೆ ಇಲ್ಲಿ ಮಳೆ ಅನಾಹುತ ಸಂಭವಿಸಿದೆ. ನಾಗಮಂಗಲ- ಶ್ರವಣ ಬೆಳಗೊಳ ಮುಖ್ಯ ರಸ್ತೆ ಇದೇ ಕೆರೆ ಏರಿ ಮೇಲೆ ಹಾದು ಹೋಗಿದ್ದು ಜನ ಸಂಚಾರಕ್ಕೆ ಅಡಚಣೆಯಾಗಿದೆ.

ತಾಲೂಕಿನ ಚೌಡೇನಹಳ್ಳಿಯ ಚಂದ್ರೇಗೌಡರ ಮನೆ ತಡರಾತ್ರಿ ಮಳೆಗೆ ಕುಸಿಸಿದೆ. ಮನೆ ಕುಸಿಯುತ್ತಿರುವುದನ್ನು ಗಮನಿಸಿ ಎಚ್ಚೆತ್ತ ಕುಟುಂಬಸ್ಥರು ಮನೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನಕರುಗಳ ಹಗ್ಗ ಕೋಯ್ದು ಹೊರಬಂದು ತಮ್ಮೊಂದಿಗೆ ತಮ್ಮ ರಾಸುಗಳ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ.

ಕಿಕ್ಕೇರಿಯಲ್ಲಿ ಜಯಮ್ಮರ ಮನೆ ಕುಸಿದು ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಪಟ್ಟಣದ ಹಳೇ ಮೈಸೂರು ರಸ್ತೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳು ಪರಿತಪ್ಪಿಸುವಂತಾಗಿದೆ. ಹಳೇ ಮೈಸೂರು ರಸ್ತೆಯಲ್ಲಿ ಮಳೆ ನೀರು ಸುಲಲಿತವಾಗಿ ಹರಿದು ಹೋಗಲು ಪುರಸಭೆ ಸೂಕ್ತ ಚರಂಡಿ ವ್ಯವಸ್ಥೆ ಮಾಡದ ಪರಿಣಾಮ ರಸ್ತೆಯ ನೀರು ಮನೆಗಳಿಗೆ ನುಗ್ಗಿ ಹಾನಿಯಾಗಿದೆ.

ಮಳೆಹಾನಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸ್ಥಳಗಳಿಗೆ ತಕ್ಷಣವೇ ಭೇಟಿ ನೀಡಿ ಸೂಕ್ತ ಪರಿಹಾರದ ವ್ಯವಸ್ಥೆ ಮಾಡುವಂತೆ ಆಯಾ ಭಾಗದ ಗ್ರಾಮ ಮುಖಂಡರು ಆಗ್ರಹಿಸಿದ್ದಾರೆ.