ಸಾರಾಂಶ
ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಸೌಲಭ್ಯ ನೀಡುತ್ತಿದ್ದರು ಸಹ ಜತೆಗೆ ದಾನಿಗಳ ದಾನ ಪ್ರಮುಖವಾಗಿದೆ. ಮೂಲಭೂತ ಸೌಕರ್ಯ ಹೆಚ್ಚಿಸಲು ಕೊಡಗೈ ದಾನಿಗಳ ಅವಶ್ಯಕತೆ ತುಂಬಾ ಇದೆ.
ಗಂಗಾವತಿ:
ಕೊಡಗೈ ದಾನಿಗಳಿಂದ ಸರ್ಕಾರಿ ಶಾಲೆಗಳು ಪ್ರಗತಿ ಹೊಂದುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಹೇಳಿದರು.ನಗರದ ವಿರೂಪಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳು ನೀಡಿದ ವಿವಿಧ ವಸ್ತುಗಳನ್ನು ಸ್ವೀಕರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಸೌಲಭ್ಯ ನೀಡುತ್ತಿದ್ದರು ಸಹ ಜತೆಗೆ ದಾನಿಗಳ ದಾನ ಪ್ರಮುಖವಾಗಿದೆ ಎಂದ ಅವರು, ಮೂಲಭೂತ ಸೌಕರ್ಯ ಹೆಚ್ಚಿಸಲು ಕೊಡಗೈ ದಾನಿಗಳ ಅವಶ್ಯಕತೆ ತುಂಬಾ ಇದೆ. ಅಂತಹ ಮೂಲಭೂತ ಸೌಕರ್ಯ ಹೆಚ್ಚಿಸಲು ಈ ಶಾಲೆಗೆ ಈಗಾಗಲೇ ಹಲವರು ದೇಣಿಗೆ ನೀಡಿದ್ದಾರೆ. ಈ ವರ್ಷ ಸ್ಮಾರ್ಟ್ ಟಿವಿ, ಮೈಕ್ ಸೆಟ್ ನೀಡಿದ ದಾನಿಗಳ ಕಾರ್ಯ ಶ್ಲಾಘಿಸಿದರು.ಶಾಲೆಯಲ್ಲಿ ದಿನದ ಮೊದಲ ಅವಧಿಯಲ್ಲಿ ಐದು ನಿಮಿಷ ದುಂಡು ಬರಹ ಮತ್ತು ಕೊನೆಯ ಅವಧಿಯಲ್ಲಿ ಅರ್ಧ ಗಂಟೆ ಗಟ್ಟಿ ಓದು ಮಾಡಿಸುವುದರಿಂದ ಮಕ್ಕಳಲ್ಲಿ ದುಂಡಾಗಿ ಬರೆಯುವ ಮತ್ತು ಓದುವ ಕೌಶಲ್ಯ ಹೆಚ್ಚಾಗುತ್ತದೆ ಎಂದರು.
ಈ ವೇಳೆ ಮಕ್ಕಳೇ ರಚಿಸಿದ ಸ್ವರಚಿತ ಕವನಗಳ ಕೈಬರಹದ ಸ್ವರಚಿತ ಕವನ ಸಂಕಲನ ಹೊತ್ತಿಗೆ ಬಿಡುಗಡೆಗೊಳಿಸಿ ಮಕ್ಕಳಲ್ಲಿ ಕವನ, ಕಥೆ ಬರೆಯುವ ಕೌಶಲ್ಯ ಬೆಳೆಸುತ್ತಿರುವ ಶಿಕ್ಷಕಿ ಜಿ. ಶ್ರೀದೇವಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.ವಲಯದ ಶಿಕ್ಷಣ ಸಂಯೋಜಕ ಆನಂದ ನಾಗಮ್ಮನವರು ಮಾತನಾಡಿ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಶಿಕ್ಷಣ ಪಡೆಯಬೇಕೆಂದರು.
ದಾನಿ ಜಿ. ಶಿವಲಿಂಗಪ್ಪ ಮಾತನಾಡಿ, ಕಾಯಕದಿಂದ ಬಂದ ಹಣದಿಂದ ಸಮಾಜಕ್ಕೆ ದೇಣಿಗೆ ಅಥವಾ ದಾಸೋಹ ನೀಡಬೇಕೆಂದು ಬಸವಾದಿ ಶರಣರು ಹೇಳಿದ್ದಾರೆ. ಆ ತತ್ವವನ್ನು ನಾನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದೇನೆ. ಅದರಂತೆ ಈ ಶಾಲೆಗೆ ₹15 ಸಾವಿರ ಮೊತ್ತದ ಟಿವಿ ದೇಣಿಗೆಯಾಗಿ ನೀಡಿದ್ದೇನೆ. ಇದರಿಂದ ಹೊಸ ಹೊಸ ಜ್ಞಾನ ಪಡೆದುಕೊಂಡು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.ಭ್ರಮರಾಂಭ ಸೌಹಾರ್ದ ಸಹಕಾರ ಸಂಘ ಮಸ್ಕಿಯ ವ್ಯವಸ್ಥಾಪಕ ಸೊಂಡೂರು ದೊಡ್ಡಬಸಪ್ಪ ಮತ್ತು ವಿರೂಪಾಪುರದ ಸಾನ್ವಿ ಮೆಡಿಕಲ್ ಸ್ಟೋರ್ ಗಂಗೇಶ್ ಕುರುಬರ ಧ್ವನಿವರ್ಧಕ ನೀಡಿದರು. ಮುಖ್ಯಶಿಕ್ಷಕ ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಅಮರಮ್ಮ ಗಂಗೇಶ, ಎಸ್‌ಡಿಎಂಸಿ ಸದಸ್ಯರಾದ ಮಂಜುನಾಥ ರಾಥೋಡ, ಮಂಜುನಾಯ್ಕ, ಓಂಕಾರಮ್ಮ ಹಿರೇಮಠ, ಶಿಕ್ಷಕಿ ಶ್ರೀದೇವಿ ಕೃಷ್ಣಪ್ಪ, ಅಶ್ವಿನಿ ತಾವರಗಿ ಇದ್ದರು.;Resize=(128,128))
;Resize=(128,128))