ಕನ್ನಡಪ್ರಭ ವಾರ್ತೆ ನಾಗಮಂಗಲ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಎಲ್ಲಾ ರೀತಿಯ ಅವಕಾಶಗಳು ಸಿಗುತ್ತವೆ. ಆದರೆ, ವ್ಯಾಮೋಹ, ತೋರ್ಪಡಿಕೆಗಾಗಿ ಕೆಲ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ ಎಂದು ಪಟ್ಟಣದ ರೋಟರಿ ಕ್ಲಬ್ ಅಧ್ಯಕ್ಷ ಎಂ.ಸಿ.ಚನ್ನಪ್ಪ ಹೇಳಿದರು.ತಾಲೂಕಿನ ಕರಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಾಗಮಂಗಲ ರೋಟರಿ ಕ್ಲಬ್ ವತಿಯಿಂದ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳು ಮಾನಸಿಕವಾಗಿ ಬಲಶಾಲಿಗಳಾಗಿರುತ್ತಾರೆ. ವಿದ್ಯಾರ್ಥಿ ದಿಸೆಯಲ್ಲಿ ಎದುರಾಗುವ ಸಮಸ್ಯೆ ಎದುರಿಸುವ ಶಕ್ತಿ ಮತ್ತು ಮನಸ್ಥಿತಿ ಖಾಸಗಿ ಶಾಲೆ ವಿದ್ಯಾರ್ಥಿಗಳಿಗಿಂತ ಸರ್ಕಾರಿ ಶಾಲೆ ಮಕ್ಕಳಲ್ಲಿಯೇ ಹೆಚ್ಚಿರುತ್ತದೆ ಎಂದರು.
ನಾನೂ ಸಹ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ನಂತರ ಬೆಂಗಳೂರಿನಿಂತಹ ನಗರ ಪ್ರದೇಶಕ್ಕೆ ತೆರಳಿ ಉದ್ಯೋಗದಿಂದ ಬದುಕು ಕಟ್ಟಿಕೊಂಡಿದ್ದೇನೆ. ಈಗ ಅತಿಥಿಯಾಗಿ ಸರ್ಕಾರಿ ಶಾಲೆಗೆ ಬಂದು ಮಕ್ಕಳಿಗೆ ನೋಟ್ ಬುಕ್ ನೀಡುತ್ತಿರುವುದು ಬಹಳ ಖುಷಿಯಾಗುತ್ತಿದೆ ಎಂದರು.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ರೋಟರಿ ಕ್ಲಬ್‌ನಿಂದ ಅನೇಕ ಬಗೆಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪರಿಸರಕ್ಕೆ ಆದ್ಯತೆಯಾಗಿ ಗ್ರಾಮೀಣ ಭಾಗದಲ್ಲಿ ಅರಳಿಕಟ್ಟೆಗಳ ಅಭಿವೃದ್ಧಿಗೆ ಕೆಲ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಗತ್ಯವಿರುವ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
ರೋಟರಿ ಸಂಸ್ಥೆ ಖಜಾಂಚಿ ಬಿ.ಸಿ.ವಿಜಯಕುಮಾರ್ ಮಾತನಾಡಿ, ರೋಟರಿ ಕ್ಲಬ್‌ನಿಂದ ಶಾಲಾ, ಕಾಲೇಜು ಮಕ್ಕಳು ಮತ್ತು ಸಾರ್ವಜನಿಕರ ಶ್ರೇಯೋಭಿವೃದ್ಧಿಗಾಗಿ ಕಳೆದ ವರ್ಷ ಒಟ್ಟು 536 ಕೋಟಿ ರು.ಗಳನ್ನು ದಾನದ ರೂಪದಲ್ಲಿ ಖರ್ಚು ಮಾಡಲಾಗಿದೆ. ಈ ವರ್ಷ ಧನ್ಯವಾದ ಎಂಬ ಘೋಷವಾಕ್ಯದೊಂದಿಗೆ ಮಕ್ಕಳ ವಿದ್ಯಾಭ್ಯಾಸ, ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಶಾಲೆ ಮುಖ್ಯಶಿಕ್ಷಕ ಎನ್.ಸಿ.ಶಿವಕುಮಾರ್ ಅವರು ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರಡಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಸ್.ರವೀಂದ್ರ, ಗ್ರಾಮದ ಮುಖಂಡರಾದ ಎಸ್.ಗೋವಿಂದಯ್ಯ, ಜಯಬೋರೇಗೌಡ, ರಾಮಣ್ಣ, ಎಸ್‌ಡಿಎಂಸಿ ಸದಸ್ಯರಾದ ಮಹೇಶ್, ಶಿವಕುಮಾರ, ಕೃಷ್ಣ, ಅಶ್ವಿನಿ, ಸರಿತಾ, ನಾಗರಾಜು, ಶಶಿರೇಖಾ, ಪ್ರಮೀಳ, ರೋಟರಿ ಚಾರಿಟಬಲ್ ಟ್ರಸ್ಟ್‌ನ ಖಜಾಂಚಿ ಗೋವಿಂದರಾಜು, ಶಾಲೆಯ ಶಿಕ್ಷಕರಾದ ಜಾಕೀರ್‌ಪಾಷ, ಅಫ್ಷಾನ್ ಫೀರ್ದೋಸ್, ದೇವಿಕಾ, ಪುಷ್ಪ, ಸಂಗೀತ, ಹರೀಶ್, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಮಂಜುಳ ಸೇರಿದಂತೆ ವಿದ್ಯಾರ್ಥಿ ಪೋಷಕರು ಇದ್ದರು.