ಸಾರಾಂಶ
ಮಕ್ಕಳು ಎರಡು ತಿಂಗಳ ರಜೆ ಮಜಾದಲ್ಲಿದ್ದರು. ಶುಕ್ರವಾರ ಶಾಲಾ ಸಮವಸ್ತ್ರದೊಂದಿಗೆ ಬ್ಯಾಗ್ ಹಾಕಿಕೊಂಡು ಖುಷಿ ಖುಷಿಯಾಗಿ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲೆಡೆ ಕಂಡು ಬಂತು. 2024-25ನೇ ಶೈಕ್ಷಣಿಕ ವರ್ಷದ ಮೊದಲ ದಿನ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಸಿಹಿಯೂಟ ಸಿದ್ದಪಡಿಸಿ ಬಡಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ಬೇಸಿಗೆ ರಜೆ ಕಳೆದು ಶಾಲೆಗಳು ಆರಂಭವಾದ ಹಿನ್ನೆಲೆಯಲ್ಲಿ ಶುಕ್ರವಾರ ಸರ್ಕಾರಿ ಶಾಲೆಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಮಕ್ಕಳನ್ನು ಸ್ವಾಗತಿಸಿ, ಹಬ್ಬದ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು.ಮಕ್ಕಳು ಎರಡು ತಿಂಗಳ ರಜೆ ಮಜಾದಲ್ಲಿದ್ದರು. ಶುಕ್ರವಾರ ಶಾಲಾ ಸಮವಸ್ತ್ರದೊಂದಿಗೆ ಬ್ಯಾಗ್ ಹಾಕಿಕೊಂಡು ಖುಷಿ ಖುಷಿಯಾಗಿ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲೆಡೆ ಕಂಡು ಬಂತು.
2024-25ನೇ ಶೈಕ್ಷಣಿಕ ವರ್ಷದ ಮೊದಲ ದಿನ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಸಿಹಿಯೂಟ ಸಿದ್ದಪಡಿಸಿ ಬಡಿಸಲಾಯಿತು.ರಜೆ ಇದ್ದ ಕಾರಣ ಶಾಲೆಗಳನ್ನು ಸ್ವಚ್ಛಗೊಳಿಸಿ ಬಾಳೆ ಕಂದು, ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು. ಕೆಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸಿಹಿ ಹಂಚಿ, ಗುಲಾಬಿ ಹೂ ನೀಡುವ ಮೂಲಕ ಶಾಲೆಗೆ ಬರಮಾಡಿಕೊಂಡಿದ್ದು ಗಮನ ಸೆಳೆಯಿತು.
ಎಲ್ಲ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ ಶಾಲೆಗಳನ್ನು ನಡೆಸುವ ಜೊತೆಗೆ ಯೋಗ್ಯವಲ್ಲದ ಕೊಠಡಿಗಳನ್ನು ತರಗತಿಗಳಿಗೆ ಬಳಸದೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಇಲಾಖೆ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.ಗುಲಾಬಿ ಹೂ ನೀಡಿ ಸ್ವಾಗತ:
ಸರ್ಕಾರಿ ಶಾಲೆಗಳನ್ನು ಸಿಂಗರಿಸಿ ಮಕ್ಕಳನ್ನು ಸ್ವಾಗತಿಸಿದರೆ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿಯೂ ಶಾಲೆಗಳನ್ನು ಸಿಂಗರಿಸುವ ಜೊತೆಗೆ ಮಕ್ಕಳಿಗೆ ಚಾಕೋಲೇಟ್, ಗುಲಾಬಿ ಹೂ ನೀಡುವ ಮೂಲಕ ಸ್ವಾಗತ ಕೋರಿದರು.ಎರಡು ದಿನಗಳ ಹಿಂದೆಯೇ ಸ್ವಚ್ಛತೆ:
ಬಹುತೇಕ ಎಲ್ಲ ಶಾಲೆಗಳಲ್ಲೂ ಬುಧವಾರ ಮತ್ತು ಗುರುವಾರ ಸ್ಥಳೀಯ ಗ್ರಾಪಂ ಸಿಬ್ಬಂದಿ ನೆರವಿನೊಂದಿಗೆ ಶಾಲಾ ಮಕ್ಕಳು, ಶಿಕ್ಷಕರೇ ಶಾಲಾ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ಶಿಕ್ಷಕರು ಮತ್ತು ಎಸ್ಡಿಎಂಸಿ ಪದಾಧಿಕಾರಿಗಳೊಂದಿಗೆ ಶಾಲಾ ಮುಖ್ಯ ಶಿಕ್ಷಕರು ಸಭೆ ನಡೆಸಿ ಚರ್ಚಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಪೂರ್ವ ತಯಾರಿ ನಡೆಸಿಕೊಂಡಿದ್ದರು.ಶಾಲಾ ಸ್ವಚ್ಛತಾ ಕಾರ್ಯ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದ್ದರು. ಹಲವು ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಶಾಲಾ ವಿದ್ಯಾರ್ಥಿಗಳು ಕೈ ಜೋಡಿಸಿದ್ದರು. ಶಾಲಾ ಅಂಗಳದಲ್ಲಿ ರಂಗೋಲಿ ಬಿಟ್ಟು, ಬಣ್ಣಗಳನ್ನು ತುಂಬಲಾಗಿತ್ತು.
ಶಾಲೆ ಪುನಾರಂಭಗೊಂಡ ಮೊದಲ ದಿನದಂದು ಜಿಲ್ಲೆಯಲ್ಲಿ ಶೇ.60ಕ್ಕಿಂತಲೂ ಹೆಚ್ಚು ಮಕ್ಕಳು ಶಾಲೆಗೆ ಹಾಜರಾಗಿದ್ದರು. ಶಾಲೆಗೆ ಬಂದಿದ್ದ ಎಲ್ಲ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಿಸಲಾಯಿತು. ಸಿಹಿಯೊಂದಿಗೆ ಬಿಸಿಯೂಟ ಬಡಿಸಲಾಯಿತು. ಎಲ್ಲ ಶಾಲೆಗಳಲ್ಲೂ ಶಾಲಾ ಪ್ರಾರಂಭೋತ್ಸವು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.