ಗೌರಿಬಿದನೂರಿನಂಥ ರಾಜ್ಯದ ಗಡಿ ಭಾಗದ ಸರ್ಕಾರಿ ಶಾಲೆಗಳಿಗೆ ವಿಶೇಷ ಒತ್ತು ನೀಡಲಾಗುವುದು. ಶಾಲೆಯಲ್ಲಿ ಒಂದು ಮಗುವಿದ್ದರೂ ಶಿಕ್ಷಕರು ಸೇರಿ ಎಲ್ಲಾ ಸೌಲಭ್ಯ ಕಲ್ಪಿಸಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ವಿಧಾನಸಭೆ : ಗೌರಿಬಿದನೂರಿನಂಥ ರಾಜ್ಯದ ಗಡಿ ಭಾಗದ ಸರ್ಕಾರಿ ಶಾಲೆಗಳಿಗೆ ವಿಶೇಷ ಒತ್ತು ನೀಡಲಾಗುವುದು. ಶಾಲೆಯಲ್ಲಿ ಒಂದು ಮಗುವಿದ್ದರೂ ಶಿಕ್ಷಕರು ಸೇರಿ ಎಲ್ಲಾ ಸೌಲಭ್ಯ ಕಲ್ಪಿಸಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶುಲ್ಕ ಕಟ್ಟಡಲು ಹೆಣಗಾಡುವಂತಾಗಿದೆ
ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ಕ್ಷೇತ್ರದಲ್ಲಿ 295 ಸರ್ಕಾರಿ ಶಾಲೆಗಳಿವೆ. ಈ ಪೈಕಿ 267 ಕೊಠಡಿಗಳು ದುರಸ್ತಿಯಾಗಿದ್ದು, 120 ಕೊಠಡಿ ಸಂಪೂರ್ಣ ಹಾಳಾಗಿವೆ. 237 ಶಿಕ್ಷಕರ ಕೊರತೆಯಿದೆ. ಆಂಧ್ರದ ಗಡಿ ತಾಲೂಕು ಆಗಿದ್ದು, ಅರ್ಧದಷ್ಟು ಮಂದಿ ತೆಲುಗು ಮಾತನಾಡುತ್ತಾರೆ. ಆದರೂ ಭಾಷಾ ಸಾಮರಸ್ಯ ಇದೆ. ಗುಣಮಟ್ಟ ಕೊರತೆಯಿಂದ ಖಾಸಗಿ ಶಾಲೆಗಳಿಗೆ ಸೇರಿಸಿ ಶುಲ್ಕ ಕಟ್ಟಡಲು ಹೆಣಗಾಡುವಂತಾಗಿದೆ ಎಂದರು.
ಎರಡು ಕೆಪಿಎಸ್ ಶಾಲೆ
ಇದಕ್ಕೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಗೌರಿಬಿದನೂರು ಕ್ಷೇತ್ರದ ಸ್ಥಿತಿ ಗೊತ್ತಿದೆ. ಈಗಾಗಲೇ ಎರಡು ಕೆಪಿಎಸ್ ಶಾಲೆಗಳನ್ನೂ ನೀಡಿದ್ದೇವೆ. ಶಿಕ್ಷಕರ ನೇಮಕಾತಿ ಬಳಿಕ ಆದ್ಯತೆ ಮೇರೆ ಶಿಕ್ಷಕರನ್ನೂ ಒದಗಿಸುತ್ತೇವೆ. ಗೌರಬಿದನೂರು ಮಾತ್ರವಲ್ಲ, ಗಡಿ ಭಾಗದ ಶಾಲೆಗಳಿಗೆ ವಿಶೇಷ ಒತ್ತು ನೀಡಿ ಶಾಲೆಗಳನ್ನು ನಿರ್ವಹಣೆ ಮಾಡಲಾಗುವುದು. ಒಂದು ಮಗುವಿದ್ದರೂ ಶಾಲೆ ಮುಚ್ಚದೆ ಎಲ್ಲಾ ಸೌಕರ್ಯ ನೀಡುತ್ತೇವೆ ಎಂದು ಹೇಳಿದರು.
8000ಕ್ಕೂ ಹೆಚ್ಚು ಶಾಲಾ ಅಡುಗೆ ಕೊಠಡಿ ದುರಸ್ತಿಗೆ ಪರಿಷತ್‌ನಲ್ಲಿ ಆಗ್ರಹ:ರಾಜ್ಯದ 8 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿರುವ ಬಿಸಿಯೂಟ ತಯಾರಿಕಾ ಕೊಠಡಿಗಳು ಬಳಕೆ ಮಾಡಲಾಗದಷ್ಟು ದುಸ್ಥಿತಿಗೆ ತಲುಪಿದ್ದು, ಅವುಗಳ ದುರಸ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಸದಸ್ಯ ಗೋವಿಂದರಾಜು ಸರ್ಕಾರವನ್ನು ಒತ್ತಾಯಿಸಿದರು.ಶೂನ್ಯವೇಳೆ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಕಳೆದ ಸೆ.4ರಂದು ‘8500 ಶಾಲೆ ಅಡುಗೆ ಕೊಠಡಿ ಉಪಯೋಗಿಸಲಾರದಷ್ಟು ಹಾಳು’ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದ ವಿಶೇಷ ವರದಿಯನ್ನುಲ್ಲೇಖಿಸಿ ಸರ್ಕಾರದ ಗಮನ ಸೆಳೆದರು.
ರಾಜ್ಯದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಶಾಲೆಗಳ ಬಿಸಿಯೂಟ ತಯಾರಿಕಾ ಕೊಠಡಿಗಳು ಉಪಯೋಗಕ್ಕೆ ಬಾರದಷ್ಟು ದುಸ್ಥಿತಿಗೆ ತಲುಪಿವೆ. ಅವುಗಳನ್ನು ಎಂ-ನರೇಗಾ ಯೋಜನೆಯಡಿ ನಿರ್ಮಿಸಿಕೊಡಲು ಜಿಲ್ಲಾಡಳಿತಗಳಿಗೆ ಸೂಚಿಸಿದ್ದರೂ ಪ್ರಗತಿ ಕುಂಟುತ್ತಾ ಸಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯಾವ್ಯಾವ ಶಾಲೆಗಳಲ್ಲಿ ಅಡುಗೆ ಕೋಣೆಗಳು ಶಿಥಿಲಗೊಂಡಿವೆ ಎಂಬ ಬಗ್ಗೆ ಕಳೆದ ವರ್ಷ ಡಿಸೆಂಬರ್‌ನಲ್ಲೇ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದಿತ್ತು. ಈ ವೇಳೆ 8,533 ಅಡುಗೆ ಕೊಠಡಿಗಳು ಬಳಸಲು ಸಾಧ್ಯವಾಗದಷ್ಟು ಮಟ್ಟಕ್ಕೆ ಹಾಳಾಗಿರುವುದು ಕಂಡುಬಂದಿತ್ತು.
ತಕ್ಷಣ ಈ ಎಲ್ಲ ಅಡುಗೆ ಕೋಣೆಗಳನ್ನು ಎಂ-ನರೇಗಾ ಯೋಜನೆಯಡಿ ಹೊಸದಾಗಿ ಅಡುಗೆ ಕೊಠಡಿ ನಿರ್ಮಿಸಿಕೊಡುವಂತೆ ಎಲ್ಲ ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಕಳೆದ ಜನವರಿಯಲ್ಲಿ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿ ಅವರು ಪತ್ರ ಬರೆದಿದ್ದರು. ಇದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಒಪ್ಪಿಗೆಯನ್ನೂ ಪಡೆಯಲಾಗಿದ್ದು ಆ ಇಲಾಖೆಯೂ ಪ್ರತ್ಯೇಕ ಸೂಚನೆ ನೀಡಿದೆ. ಆದರೆ, ಜಿಲ್ಲಾಡಳಿತಗಳು ಶಾಲಾ ಅಡುಗೆ ಕೊಠಡಿಗಳ ನಿರ್ಮಾಣದಲ್ಲಿ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪ ಶಾಲಾ ಮುಖ್ಯಶಿಕ್ಷಕರಿಂದಲೇ ಕೇಳಿಬರುತ್ತಿದೆ. ಶಿಕ್ಷಣ ಇಲಾಖೆ ಪತ್ರ ಬರೆದು ಎಂಟು ತಿಂಗಳಾದರೂ 500 ಶಾಲೆಗಳ ಅಡುಗೆ ಕೋಣೆಗಳನ್ನೂ ಕೂಡ ದುರಸ್ತಿಗೊಳಿಸುವ ಕಾರ್ಯ ಆಗಿಲ್ಲ ಎನ್ನಲಾಗಿದೆ. ಹಾಗಾಗಿ ದುಸ್ಥಿತಿಯಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳ ಅಡುಗೆ ಕೊಠಡಿಗಳ ದುರಸ್ತಿಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
