ಹುಡಾ ವ್ಯಾಪ್ತಿ ವಿಸ್ತರಣೆಗೆ ಸರ್ಕಾರ ಅಸ್ತು

| Published : Sep 24 2025, 01:01 AM IST

ಸಾರಾಂಶ

೧೯೮೮ರಲ್ಲಿ ಲೋಕಲ್ ಪ್ಲ್ಯಾನಿಂಗ್ ಏರಿಯಾದಡಿ (ಎಲ್‌ಪಿಎ) ಒಟ್ಟು ೪೬ ಹಳ್ಳಿಗಳನ್ನು ಒಳಗೊಂಡಂತೆ ೪೦೨ ಚ.ಕಿಮೀ ವ್ಯಾಪ್ತಿಯ ಗಡಿ ಗುರುತಿಸಲಾಗಿತ್ತು. ಇದಾದ ಬಳಿಕ ಪ್ರಸ್ತುತ ವರ್ಷ ೪೬ ಹಳ್ಳಿಗಳನ್ನು ಸೇರ್ಪಡೆ ಮಾಡಿ ಎಲ್.ಪಿ.ಎ. ವ್ಯಾಪ್ತಿ ಹೆಚ್ಚಿಸಲಾಗಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಈ ಹಿಂದೆ ಇದ್ದ ೪೬ ಹಳ್ಳಿಗಳ ಜತೆಗೆ ಹೊಸದಾಗಿ ಮತ್ತೆ ೪೬ ಹಳ್ಳಿಗಳನ್ನು ಸೇರ್ಪಡೆ ಮಾಡಲಾಗಿದೆ. ಇದಕ್ಕೆ ಸರ್ಕಾರದಿಂದ ಅನುಮತಿ ಸಹ ಸಿಕ್ಕಿದ್ದು, ಈ ಹಳ್ಳಿಗಳ ಸೇರ್ಪಡೆಯಿಂದ ಹುಡಾ ವ್ಯಾಪ್ತಿ ೭೫೭ ಚದರ ಕಿಮೀಗೆ ಹೆಚ್ಚಳವಾಗಲಿದೆ ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ತಿಳಿಸಿದರು. ಈ ಮೂಲಕ ಬರೋಬ್ಬರಿ 37 ವರ್ಷಗಳ ಬಳಿಕ ಹುಡಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಂತಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಹಿಂದೆ ೧೯೮೮ರಲ್ಲಿ ಲೋಕಲ್ ಪ್ಲ್ಯಾನಿಂಗ್ ಏರಿಯಾದಡಿ (ಎಲ್‌ಪಿಎ) ಒಟ್ಟು ೪೬ ಹಳ್ಳಿಗಳನ್ನು ಒಳಗೊಂಡಂತೆ ೪೦೨ ಚ.ಕಿಮೀ ವ್ಯಾಪ್ತಿಯ ಗಡಿ ಗುರುತಿಸಲಾಗಿತ್ತು. ಇದಾದ ಬಳಿಕ ಪ್ರಸ್ತುತ ವರ್ಷ ೪೬ ಹಳ್ಳಿಗಳನ್ನು ಸೇರ್ಪಡೆ ಮಾಡಿ ಎಲ್.ಪಿ.ಎ. ವ್ಯಾಪ್ತಿ ಹೆಚ್ಚಿಸಲಾಗಿದೆ. ಅದರಲ್ಲಿ ಹುಬ್ಬಳ್ಳಿ ತಾಲೂಕು ೧೩, ಕಲಘಟಗಿ ತಾಲೂಕು- ೬, ಧಾರವಾಡ ತಾಲೂಕಿನ ೨೭ ಹಳ್ಳಿಗಳನ್ನು ಹುಡಾ ವ್ಯಾಪ್ತಿಯಲ್ಲಿ ಹೊಸದಾಗಿ ಸೇರ್ಪಡೆ ಮಾಡಲಾಗಿದೆ ಎಂದರು.

೪೬ ಹಳ್ಳಿಗಳ ಸೇರ್ಪಡೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಅವಳಿ ನಗರವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಯೋಜನೆ ಪೂರಕವಾಗಿದೆ. ಜಿಪಂ ಸಿಇಒ, ಹುಡಾ, ಪಿಡಿಒ ಹಾಗೂ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ ಮಾಡಿ ಅಲ್ಲಿನ ಬೇಡಿಕೆಗಳನ್ನು ಪರಿಗಣಿಸಿ, ಉತ್ತಮ ಯೋಜನೆ ಸಿದ್ಧಪಡಿಸಲಾಗುವುದು. ಅಲ್ಲದೇ ಹೊಸದಾಗಿ ಸೇರ್ಪಡೆಯಾಗುವ ಎಲ್ಲ ಹಳ್ಳಿಗಳಿಗೂ ರಿಂಗ್ ರೋಡ್ ಕಲ್ಪಿಸಲಾಗುವುದು. ಎಲ್ಲ ಹಳ್ಳಿಗಳಲ್ಲಿ ರಸ್ತೆ, ಮೂಲಕ ಸೌಕರ್ಯ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ ಮಾತನಾಡಿ, ಹುಡಾ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ನೀಡಿರುವುದು ಖುಷಿಯ ಸಂಗತಿ. ಹೊಸ ವಿನ್ಯಾಸಗಳನ್ನು ಉತ್ತಮ ಹಾಗೂ ಯೋಜನಾ ಬದ್ಧವಾಗಿ ರೂಪಿಸಲಾಗುವುದು ಎಂದ ಅವರು, ಹು-ಡಾದಿಂದ ಎಲ್.ಪಿ.ಎ. ಅನುಸಾರವಾಗಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ನಗರ ಯೋಜನೆ ರೂಪಿಸಲಾಗುವುದು. ಧಾರವಾಡ, ಹುಬ್ಬಳ್ಳಿ, ಕುಂದಗೋಳ ವ್ಯಾಪ್ತಿಯಲ್ಲಿ ೫೦೦ ಎಕರೆ ಎಲ್.ಪಿ.ಎ. ಅಡಿಯಲ್ಲಿ ಅಭಿವೃದ್ಧಿ ಮಾಡುವ ಚಿಂತನೆ ಇದೆ. ಕೆಲವೊಂದು ಮಹಾನಗರ ವ್ಯಾಪ್ತಿಯಲ್ಲಿನ ಸರ್ವೆ ನಂಬರ್‌ಗಳು ಪಾಲಿಕೆ ಮತ್ತು ಹುಡಾ ವ್ಯಾಪ್ತಿಗೆ ಹೊಂದಾಣಿಕೆಯಾಗುತ್ತಿಲ್ಲ. ಅಂತಹ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ಪಾಲಿಕೆಯ ಸಹಯೋಗದಲ್ಲಿ ಅವುಗಳಿಗೆ ಪರಿಹಾರ ಒದಗಿಸಲಾಗುವುದು ಎಂದರು.

ಈಗಾಗಲೇ ಅಮೃತ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಡಿಸೆಂಬರ್‌ ಅಂತ್ಯಕ್ಕೆ ಎಲ್ಲವೂ ಕೊನೆಗೊಳ್ಳಲಿದೆ. ಅನಧಿಕೃತ ಲೇಔಟ್‌ಗಳ ಹಾವಳಿ ತಡೆಯಲು ಹುಡಾ ಯಶಸ್ವಿಯಾಗಿದೆ. ಬಾಕಿ ಉಳಿದಿರುವ ಅಕ್ರಮ ಲೇಔಟ್‌ಗಳ ತೆರವಿಗೆ ಸದ್ಯದಲ್ಲಿಯೇ ಒಂದು ಯೋಜನೆ ರೂಪಿಸಿ, ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹುಡಾ ಸದಸ್ಯರಾದ ವಿಜಯಾನಂದ ಶೆಟ್ಟಿ, ಸುನೀತಾ ಹುಲಕಟ್ಟಿ, ಮಹಾಂತೇಶ ಪೂಜಾರ, ಬಡಿಗೇರ, ಹುಡಾ ಅಧಿಕಾರಿಗಳಾದ ಬಸವರಾಜ ದೇವಗಿರಿ, ಮ್ಯಾನೇಜರ್ ಮಂಜುನಾಥ ಗೂಳಪ್ಪನವರ ಇದ್ದರು.

ಸೇರ್ಪಡೆಯಾದ ಗ್ರಾಮಗಳು.

ಹುಬ್ಬಳ್ಳಿ ತಾಲೂಕು:

ರೇವಡಿಹಾಳ, ದೇವರಗುಡಿಹಾಳ, ಪರಸಾಪೂರ, ಬುಡ್ನಾಳ, ಮಾವನೂರ, ಬುಡರಸಿಂಗಿ, ಸಿದ್ದಾಪೂರ, ಮುರಾರಹಳ್ಳಿ, ಅದರಗುಂಚಿ, ಹಳ್ಳಾಳ, ಶಹರ ವೀರಾಪೂರ, ಕುಸುಗಲ್ಲ, ಸುಳ್ಳ.

ಕಲಘಟಗಿ ತಾಲೂಕು:

ದೇವಲಿಂಗಿಕೊಪ್ಪ, ದಾಸನೂರ, ದುಮ್ಮವಾಡ, ಕುರಣಕೊಪ್ಪ, ಕಾಡಣಕೊಪ್ಪ, ಚಳಮಟ್ಟಿ ಗ್ರಾಮಗಳು.

ಧಾರವಾಡ ತಾಲೂಕು:

ಕೋಟೂರ, ಅಗಸನಹಳ್ಳಿ, ಶಿಂಗನಹಳ್ಳಿ, ಹೆಗ್ಗೇರಿ, ವರವನಾಗವಾಲಿ, ಚಿಕ್ಕಮಲ್ಲಿಗವಾಡ, ದಡ್ಡಿಕಮಲಾಪೂರ, ಮಂಡಿಹಾಳ, ಮುಗದ, ಕ್ಯಾರಕೊಪ್ಪ, ಜಂಜಲ (ಜುಂಜಲಕಟ್ಟಿ), ಬಾಡ, ಬೆನಕನಕಟ್ಟಿ, ಮನಗುಂಡಿ, ನಾಯಿಕನಹುಲಿಕಟ್ಟಿ, ಶಿವಳ್ಳಿ, ಮಾರಡಗಿ, ನವಲೂರ ತಡೆಬಿಳ, ಅಲ್ಲಾಪೂರ, ಗೊಂಗಡಿಕೊಪ್ಪ, ಗೋವನಕೊಪ್ಪ, ದಂಡಿಕೊಪ್ಪ, ಕಮಲಾಪೂರ, ದಾಸನಕೊಪ್ಪ, ದೇವಗಿರಿ, ಎಂ. ನರೇಂದ್ರ, ಗೋವನಕೊಪ್ಪ ಎಂ. ನರೇಂದ್ರ ಮತ್ತು ನೀರಲಕಟ್ಟಿ ಗ್ರಾಮಗಳು.

ನಾನು ಅಧಿಕಾರ ವಹಿಸಿಕೊಂಡ ಮೇಲೆ ಹುಡಾ ವ್ಯಾಪ್ತಿಯಲ್ಲಿ ಅನಧಿಕೃತ ಲೇಔಟ್ ನಿರ್ಮಾಣ ತಡೆಗೆ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಅದರಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೂ ಹೊಸ ಅಕ್ರಮ ಲೇಔಟ್‌ಗಳು ತಲೆ ಎತ್ತದಂತೆ ಕ್ರಮವಹಿಸಲಾಗಿದೆ. ಅನಧಿಕೃತ ಲೇಔಟ್ ತಡೆಗೆ ಸರ್ಕಾರವು ಕಟ್ಟುನಿಟ್ಟಿನ ಕಾನೂನು ರೂಪಿಸಿದ್ದು, ಅದನ್ನು ಕಾರ್ಯರೂಪಕ್ಕೆ ತರಲಾಗುವುದು.

ಶಾಕೀರ ಸನದಿ, ಅಧ್ಯಕ್ಷರು, ಹುಡಾ