ಹುಬ್ಬಳ್ಳಿ:

ರಾಜ್ಯ ಸರ್ಕಾರ ಕಾವೇರಿ ತಂತ್ರಾಂಶ ಮೂಲಕ ಪೇಪರ್‌ಲೆಸ್ ಡಿಜಿಟಲ್ ನೋಂದಣಿ ಜಾರಿಗೆ ಮುಂದಾಗಿದೆ. ಇದರಿಂದ ಸಾರ್ವಜನಿಕ ಆಸ್ತಿ ದಾಖಲಾತಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ಪೇಪರ್‌ಲೆಸ್ ನೋಂದಣಿ ಜಾರಿ ಕೈಬಿಡುವಂತೆ ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ (ದಸ್ತು) ಪತ್ರ ಬರಹಗಾರರ ಟ್ರಸ್ಟ್ ಅಧ್ಯಕ್ಷ ಶಾಂತರಾಜ ಪೋಳ ಒತ್ತಾಯಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಆಸ್ತಿ ನೋಂದಣಿ ದಾಖಲಾತಿಗಳು ಡಿಜಿ ಲಾಕರ್‌ನಲ್ಲಿ ಸೇವ್ ಆಗುವುದರಿಂದ ಆಸ್ತಿ ಖರೀದಿದಾರರಿಗೆ ನಿಖರ ದಾಖಲೆಗಳು ಸಿಗುವುದಿಲ್ಲ. ಹಲವಾರು ವರ್ಷಗಳಿಂದ ಆಸ್ತಿ ಖರೀದಿ, ಮಾರಾಟ ಸೇರಿದಂತೆ ಎಲ್ಲ ನೋಂದಣಿ ಕಾರ್ಯಗಳು ಪತ್ರ ವ್ಯವಹಾರದ ಮೂಲಕ ನೋಂದಣಿ ಕಾರ್ಯ ನಡೆಯುತ್ತಿತ್ತು. ಆದರೆ, ಇದೀಗ ಸರ್ಕಾರ ಕಾವೇರಿ ತಂತ್ರಾಂಶದ ಮೂಲಕ ಪೇಪರ್‌ಲೆಸ್ ಮಾಡುವ ಮೂಲಕ ಭೂ ಮಾಫಿಯಾಗೆ ಅನುಕೂಲ ಕಲ್ಪಿಸಿಕೊಟ್ಟಂತೆ ಆಗುತ್ತಿದೆ. ಪೇಪರ್‌ಲೆಸ್ ನೋಂದಣಿ ಕಾರ್ಯದಿಂದ ಯಾರ ಆಸ್ತಿ, ಯಾರು ಖರೀದಿ ಮಾಡಿದ್ದಾರೆ? ಯಾರು ಮಾರಾಟ ಮಾಡಿದ್ದಾರೆ? ಎಂಬುದೇ ಗೊತ್ತಾಗುವುದಿಲ್ಲ. ಅಲ್ಲದೇ ನೋಂದಣಿ ಕಾರ್ಯಕ್ಕಾಗಿ ಎಲ್ಲರೂ ಶಿಕ್ಷಣ ಪಡೆದವರೇ ಆಗುತ್ತಾರೆ ಎನ್ನುವುದು ಏನಿಲ್ಲ, ಅನಕ್ಷರಸ್ಥರು ಕೂಡಾ ನೋಂದಣಿ ಕಾರ್ಯಕ್ಕೆ ಬರುತ್ತಾರೆ. ಅವರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

ಹೊಸ ವ್ಯವಸ್ಥೆಯಿಂದ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೂ ಸಹ ತೀವ್ರ ತೊಂದರೆ ಆಗುತ್ತಿದೆ. ಆಸ್ತಿ ಮಾರುವವರು, ಆಸ್ತಿ ಖರೀದಿದಾರರು, ಅಧಿಕಾರಿಗಳ ಸಹಿ ಕೂಡ ಬೇಕಾಗಿಲ್ಲ. ಹೀಗಾಗಿ ಆಸ್ತಿ ವಿಚಾರದಲ್ಲಿ ಮುಂದೆ ಬಹುದೊಡ್ಡ ಅನಾಹುತಗಳು ಆಗುವ ಸಾಧ್ಯತೆಗಳಿವೆ. ಹೀಗಾಗಿ ಪೇಪರ್‌ಲೆಸ್ ಕೈಬಿಡಬೇಕು ಎಂದು ಆಗ್ರಹಿಸಿದರು.ಈಗಾಗಲೇ ರಾಜ್ಯ ಸರ್ಕಾರ ಈ ಪೇಪರ್‌ಲೆಸ್ ಡಿಜಿಟಲ್ ಕಾರ್ಯವನ್ನು ಮೊದಲ ಬಾರಿಗೆ ಚಾಮರಾಜನಗರದಲ್ಲಿ ಜಾರಿಗೆ ತಂದು ಯಶಸ್ವಿ ಎಂದು ತೋರಿಸಿದ್ದಾರೆ. ಆದರೆ, ಇದಕ್ಕೆ ಅನೇಕ ಸಮಸ್ಯೆ ಸಮಸ್ಯೆಗಳು ಎದುರಾಗುತ್ತಿವೆ. ಅನ್ಯ ರಾಜ್ಯಗಳಲ್ಲಿ ಪೇಪರ್‌ಲೆಸ್ ಹಾಗೂ ಪೇಪರ್ ಸಹಿತ ನೋಂದಣಿ ಕಾರ್ಯ ಜಾರಿಯಲ್ಲಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಸಹ ಜಾರಿ ಮಾಡಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.

ಈ ನಿರ್ಧಾರಕ್ಕೆ ಸರ್ಕಾರ ಬರದೇ ಇದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ. ಈ ಕುರಿತು ರಾಜ್ಯದ ಎಲ್ಲ ದಸ್ತು ಬರಹಗಾರರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪರೇಷೆ ಸಿದ್ಧಪಡಿಸಲಾಗುವುದು. ಇದಕ್ಕೆ ಸರ್ಕಾರ ಆಸ್ಪದ ಕೊಡದೇ ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ವಿನೋದಗೌಡ ಪಾಟೀಲ, ಉಪಾಧ್ಯಕ್ಷ ರಾಮಚಂದ್ರ ಸಾಳುಂಕೆ, ಗುರುನಾಥ ಯಾತಗೇರಿ, ಮಹಾವೀರ ಕಂಚಗಾರ, ರುಕ್ಮಿಣಿಬಾಯಿ ಚಲವಾದಿ ಸೇರಿದಂತೆ ಹಲವರಿದ್ದರು.