ಹುಬ್ಬಳ್ಳಿಯಲ್ಲಿ ಹಲಸಿನ ಮೇಳ ಆರಂಭ

| Published : Jun 08 2025, 03:32 AM IST

ಸಾರಾಂಶ

ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಕಡಿಮೆಯಾಗಬೇಕು. ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಯೋಗ್ಯ ದರ ಸಿಗಬೇಕು.

ಹುಬ್ಬಳ್ಳಿ: ಜನರಿಗೆ ಅನುಕೂಲ ಆಗುವಂತಹ ಯೋಜನೆ ನೀಡುವ ಸರ್ಕಾರ ರೈತರ ಬಗ್ಗೆಯೂ ಯೋಚಿಸಬೇಕು ಎಂದು ವಿಧಾನ ಪರಿಷತ್ ಬಸವರಾಜ ಹೊರಟ್ಟಿ ತಿಳಿಸಿದರು.

ಇಲ್ಲಿನ ಜೆ.ಸಿ.ನಗರ ಮಹಿಳಾ ಕಾಲೇಜ್ ರಸ್ತೆ ಭಗಿನಿ ಮಂಡಳದಲ್ಲಿ ಸಹಜ ಸಮೃದ್ಧ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ, ದೇವಧಾನ್ಯ ವತಿಯಿಂದ ಹಮ್ಮಿಕೊಂಡಿರುವ ಸಾವಯವ ಮಾವು ಮತ್ತು ಹಲಸು ಮೇಳ ಉದ್ಘಾಟಿಸಿ ಮಾತನಾಡಿದರು.

ರೈತ ಕೃಷಿ ಮಾಡಲು ಉತ್ಸುಕನಾಗಿದ್ದರೂ ಕೃಷಿ ಕಾರ್ಮಿಕರ ಕೊರತೆ ಅನುಭವಿಸುತ್ತಿದ್ದಾನೆ.ಸರ್ಕಾರ ಯೋಜನೆಗಳು ಇದಕ್ಕೆ ಕಾರಣವಾಗಿವೆ. ಸರ್ಕಾರ ರೈತರ ಬಗ್ಗೆ ಯೋಚಿಸಬೇಕು ಎಂದರು.

ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಕಡಿಮೆಯಾಗಬೇಕು. ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಯೋಗ್ಯ ದರ ಸಿಗಬೇಕು. ಸಾವಯವ ಬೆಳೆಗಳು ಆರೋಗ್ಯಕ್ಕೆ ಉತ್ತಮವಾದದ್ದು. ಅಂತಹ ಬೆಳೆಗಳು ಮಾರುಕಟ್ಟೆಗೆ ಬರಬೇಕು ಎಂದು ತಿಳಿಸಿದರು.

ಮಾವು ಹಾಗೂ ಹಲಸು ಮೇಳ ಆಯೋಜನೆ ನಮಗೆ ತುಂಬ ಖುಷಿ ತಂದಿದೆ. ಹಲಸು ಮತ್ತು ಮಾವು ಬೆಳೆದವರಿಗೆ ಮಾರಾಟ ಮಾಡುವುದೇ ದೊಡ್ಡ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ರೈತರು ಬೆಳೆದ ಬೆಳೆಗೆ ಸರಿಯಾಗಿ ದರ ದೊರೆಯಬೇಕು ಎಂದು ಹೇಳಿದರು.

ಹಣ್ಣುಗಳ‌ ಸೇವನೆಯಿಂದ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬಹುದು.‌ ಹಣ್ಣು ಹಾಗೂ ಬೆಳೆ ಬೆಳೆಯುವ ರೈತರಿಗೆ ಸಹಕಾರ ಇಲ್ಲದ ಕಾರಣ ರೈತರು ಕೃಷಿಯಿಂದ ದೂರವಾಗುತ್ತಿದ್ದಾರೆ ಎಂದರು.‌

ರೋಟರಿ ಕ್ಲಬ್ ಹುಬ್ಬಳ್ಳಿ ಅಧ್ಯಕ್ಷ ಬಾಪುಗೌಡ ಬಿರಾದಾರ ಮಾತನಾಡಿ, ರೋಟರಿ ಕ್ಲಬ್ ಹುಬ್ಬಳ್ಳಿ ಶಾಲಾ ಮಕ್ಕಳಿಗೆ ಕೃಷಿ ತರಬೇತಿ ನೀಡಲಾಗುತ್ತಿದೆ. ಮಣ್ಣು ಸಂರಕ್ಷಣೆ, ನೀರು ಸಂರಕ್ಷಣೆಯಂತಹ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.

ಕ್ಲಬ್ ಕಾರ್ಯದರ್ಶಿ ಎ.ವಿ. ಸಂಕನೂರ ಮಾತನಾಡಿ, ಸಹಜ ಸಮೃದ್ಧ ಸಂಸ್ಥೆ ರೈತರಿಗಾಗಿ ಹೋರಾಟ ಮಾಡುತ್ತಿರುವ ಸಂಸ್ಥೆಯಾಗಿದೆ. ಇದೇ ರೀತಿ ಕಾರ್ಯಕ್ರಮ ಹಮ್ಮಿಕೊಂಡು ರೈತರಿಗೆ ಸಹಾಯ ಮಾಡಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಹಜ ಸಮೃದ್ಧ ಮುಖ್ಯಸ್ಥ ಜಿ. ಕೃಷ್ಣಪ್ರಸಾದ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ಹಲಸಿನ ಮರಗಳನ್ನು ಕಡಿಯುತ್ತ ಬರಲಾಗುತ್ತಿದ್ದು, ಹಲಸು ಇಳುವರಿ ಕಡಿಮೆಯಾಗಿತ್ತು. ಆದರೆ, ಹಲಸಿಗೆ ಬೆಲೆ ಬಂದಿದ್ದು ಕೆಂಪು ಹಲಸಿನಿಂದ. ಅದಕ್ಕಾಗಿ ಪ್ರಚಾರ ಕೈಗೊಂಡ ಹಿನ್ನೆಲೆಯಲ್ಲಿ ಹಲಸು ಮೇಳ ಆಯೋಜಿಸಿ ಹಲಸಿಗೆ ಬೆಲೆ ತಂದಿದ್ದೇವೆ ಎಂದು ಹೇಳಿದರು.

ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸಹಜ ಆರ್ಗಾನಿಕ್ ರೈತರ ಕಂಪನಿ ತೆರೆದು ₹೨೦೮ ಕೋಟಿ ವಹಿವಾಟು ಮಾಡಿದ್ದೇವೆ. ಕಂಪನಿ ತೆರೆಯಲು ಸರ್ಕಾರದಿಂದ ಯಾವುದೇ ಸಹಕಾರ ಪಡೆದಿಲ್ಲ. ಅದೇ ರೀತಿ ಆರ್ಗಾನಿಕ್ಸ್ ಕಂಪನಿ, ದೇವಧಾನ್ಯ ಕಂಪನಿ, ದೇಸಿ ಸೀಡ್ಸ್ ಕಂಪನಿ ತೆರೆದಿದ್ದೇವೆ ಎಂದರು.

ಮೈಸೂರು ಕೃಷಿಕಲಾ ಮುಖ್ಯಸ್ಥೆ ಸೀಮಾ ಪ್ರಸಾದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇಂದು ಚಿತ್ರಕಲಾ ಸ್ಪರ್ಧೆ: ಮೇಳದ ಅಂಗವಾಗಿ ಜೂ. 8ರಂದು ಬೆಳಗ್ಗೆ 11 ಗಂಟೆಗೆ ಮಕ್ಕಳಿಗಾಗಿ ಹಲಸಿನ ಬಗ್ಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಮಧ್ಯಾಹ್ನ 1.30 ಗಂಟೆಗೆ ಹಲಸಿನಕಾಯಿ ಎತ್ತುವ ಮತ್ತು ಹಲಸಿನ ಕಾಯಿಯ ತೂಕವನ್ನು ಅಂದಾಜಿಸುವ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.