ಸರ್ಕಾರ ಗ್ಯಾರಂಟಿಗಳ ಕುರಿತು ಶ್ವೇತ ಪತ್ರ ಹೊರಡಿಸಲಿ: ಎಂ.ಜಿ.ಮಹೇಶ್ ಸವಾಲು

| Published : Aug 22 2025, 12:00 AM IST

ಸರ್ಕಾರ ಗ್ಯಾರಂಟಿಗಳ ಕುರಿತು ಶ್ವೇತ ಪತ್ರ ಹೊರಡಿಸಲಿ: ಎಂ.ಜಿ.ಮಹೇಶ್ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಮತಗಳ್ಳತನ ಆರೋಪ ಮಾಡಿದ ರಾಹುಲ್‌ಗಾಂಧಿ ತಾಕತ್ತಿದ್ದರೆ ಅಫಿಡೆವಿಟ್ ಸಲ್ಲಿಕೆ ಮಾಡಲಿ. ಗೆದ್ದರೆ ಚುನಾವಣಾ ಆಯೋಗ ಸರಿಯಿದೆ. ಸೋತರೆ ಆಯೋಗ ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸುವ ರಾಹುಲ್‌ಗಾಂಧಿ ನ್ಯಾಯಾಲಯದಲ್ಲಿ ಈಗಾಗಲೇ 11 ಕಾರಣಗಳಿಗೆ ಕ್ಷಮೆ ಕೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ಸರ್ಕಾರದ ನೀತಿಗಳಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಸ್ವತಂತ್ರ್ಯ ತನಿಖಾ ಸಂಸ್ಥೆ ಸಿಐಜಿ ವರದಿಸಿದೆ. ರಾಜ್ಯದ ಆರ್ಥಿಕತೆಯನ್ನು ಕಾಂಗ್ರೆಸ್ 20 ವರ್ಷಗಳ ಹಿಂದಕ್ಕೆ ಕೊಂಡೊಯ್ಯಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಆತಂಕ ವ್ಯಕ್ತಪಡಿಸಿದರು.

ಗುರುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ವರ್ಲ್ಡ್ ರೆಕಾರ್ಡ್ ಸೇರಿದೆಯೆಂದು ಕಾಂಗ್ರೆಸ್ ಹೆಮ್ಮೆ ಪಡುತ್ತಿದೆ. ಆದರೆ, ಇದರಿಂದ ರಾಜ್ಯದ ಆರ್ಥಿಕ ವ್ಯವಸ್ಥೆ ಶೇ.16 ರಿಂದ 11ಕ್ಕೆ ಇಳಿದಿದೆ. ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಯಾವ ಪುರುಷಾರ್ಥಕ್ಕಾಗಿ 2 ಲಕ್ಷ ಕೋಟಿ ರು. ಸಾಲ ಮಾಡಿದೆ. ತಮ್ಮ ಗ್ಯಾರಂಟಿಗಳ ಸಾಧಕ ಬಾಧಕಗಳ ಕುರಿತು ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.

ಗ್ಯಾರಂಟಿ ಯೋಜನೆಗಳ ಸಾಧಕ- ಬಾಧಕಗಳನ್ನು ಪರಿಶೀಲಿಸಿದ ಸಿಐಜಿ ಸಂಸ್ಥೆ ಬಿಡುಗಡೆಗೊಳಿಸಿದ ವರದಿ ಬಗ್ಗೆ ಕಾಂಗ್ರೆಸ್ ಗಮನ ಹರಿಸುತ್ತಿಲ್ಲ. ಸ್ವತಂತ್ರ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರಕ್ಕೆ ನಂಬಿಕೆಯಿಲ್ಲ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ 1 ಟ್ರಿಲಿಯನ್ ಆರ್ಥಿಕತೆ ಬೆಳವಣಿಗೆ ಉದ್ದೇಶ ಹೊಂದಲಾಗಿತ್ತು. ಕಾಂಗ್ರೆಸ್‌ನ ಗ್ಯಾರಂಟಿಗಳಿಂದಾಗಿ ರಾಜ್ಯದ ಜಿಡಿಪಿ ಕುಸಿಯುತ್ತಿದೆ. ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಎಂಬಂತೆ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಅಂಧಃಪತನಕ್ಕೆ ದೂಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕಿಂತಲೂ ಹೆಚ್ಚು ಸಾಲ ಮಾಡಿದೆ ಎಂದು ಕಾಂಗ್ರೆಸ್ ಬೊಟ್ಟು ಮಾಡಿ ತೋರುತ್ತಿದೆ. 137 ಲಕ್ಷ ಕೋಟಿ ಸಾಲ ಮಾಡಿರುವ ಕೇಂದ್ರ ಸರ್ಕಾರ ಶೇ.4 ರಷ್ಟಿದ್ದ ದೇಶದ ಜಿಡಿಪಿಯನ್ನು ಶೇ.10ಕ್ಕೆ ಕೊಂಡೊಯ್ದಿದೆ. ರಸ್ತೆ, ರೈಲ್ವೆ, ವಿಮಾನ ನಿಲ್ದಾಣಗಳು ಸೇರಿದಂತೆ ಹಲವು ಬೃಹತ್ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಎಂದರು.

137 ಕೋಟಿ ರು. ವ್ಯಯಿಸಿದ ಸಿದ್ದರಾಮಯ್ಯ ಸರ್ಕಾರ ಜಾತಿ ಸಮೀಕ್ಷೆ ನಡೆಸಿ ಮೀಸಲಾತಿ ಘೋಷಿಸಿದೆ. ಒಳ ಮೀಸಲಾತಿಯಲ್ಲಿ ಲಂಬಾಣಿ, ಕೊರಮ- ಕೊರಚ, ಭೋವಿ, ಅಲೆಮಾರಿಯಂತಹ ಸಣ್ಣ ಜಾತಿಗಳಿಗೆ ಅನ್ಯಾಯ ಮಾಡಿದೆ. ಸಮೀಕ್ಷೆಗಳ ಪ್ರಾಯೋಗಿಕ ದಾಖಲಾತಿಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡದೇ ಮುಖ್ಯಮಂತ್ರಿಗಳು ಏಕೆ ಓಡಿದರು ಎಂದು ಪ್ರಶ್ನಿಸಿದರು.

ಮತಗಳ್ಳತನ ಆರೋಪ ಮಾಡಿದ ರಾಹುಲ್‌ಗಾಂಧಿ ತಾಕತ್ತಿದ್ದರೆ ಅಫಿಡೆವಿಟ್ ಸಲ್ಲಿಕೆ ಮಾಡಲಿ. ಗೆದ್ದರೆ ಚುನಾವಣಾ ಆಯೋಗ ಸರಿಯಿದೆ. ಸೋತರೆ ಆಯೋಗ ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸುವ ರಾಹುಲ್‌ಗಾಂಧಿ ನ್ಯಾಯಾಲಯದಲ್ಲಿ ಈಗಾಗಲೇ 11 ಕಾರಣಗಳಿಗೆ ಕ್ಷಮೆ ಕೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಕೊನೆ, ಮೊದಲಿಲ್ಲದಾಗಿದೆ. ಬಿಜೆಪಿ ಸರ್ಕಾರದಲ್ಲಿ ಶೇ.40 ಕಮಿಷನ್ ಆರೋಪ ಮಾಡಲಾಗಿತ್ತು. ಇದೀಗ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕಾಂಗ್ರೆಸ್ ಸರ್ಕಾರದಲ್ಲಿ ಅದರ ಎರಡರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಹೇಳಿರುವುದಾಗಿ ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಪ್ರಧಾನ ಕಾರ್ಯದರ್ಶಿ ವಿವೇಕ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ, ಮಾಧ್ಯಮ ವಕ್ತಾರ ನಾಗಾನಂದ, ಚಂದ್ರು ಇದ್ದರು.