ಸಾರಾಂಶ
ಶಿರಸಿ: ಕರ್ನಾಟಕ ಲಲಿತಕಲಾ ಅಕಾಡೆಮಿ ನೀಡುವ ಪ್ರಶಸ್ತಿಗೆ ನಮ್ಮ ಜಿಲ್ಲೆಯ ಕಲಾವಿದರನ್ನೂ ಗುರುತಿಸಿ ಗೌರವಿಸಬೇಕು. ಕೇವಲ ಮಹಾನಗರದಲ್ಲಿರುವ ಕಲಾವಿದರನ್ನು ಗುರುತಿಸಿದರೆ ಈ ಭಾಗದ ಕಲಾವಿದರಿಗೆ ನ್ಯಾಯ ಸಿಗುವುದಿಲ್ಲ ಎಂದು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಉಪಸಮಿತಿ ಅಧ್ಯಕ್ಷ ಎಸ್.ಕೆ. ಭಾಗ್ವತ್ ತಿಳಿಸಿದರು.ನಗರದ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿ ಆಶ್ರಯದಲ್ಲಿ ಹಮ್ಮಿಕೊಂಡ ಕಾವಿಕಲೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.ನಮ್ಮ ಭಾಗದಲ್ಲಿ ಕಾವಿಕಲೆ ಪರಿಚಿತ. ರಾಜ್ಯ ಪ್ರಸಿದ್ಧ ಮಾರಿಕಾಂಬಾ ದೇವಾಲಯದಲ್ಲಿ ಕೂಡ ಕಾವಿಕಲೆ ಕಾಣಬಹುದು. ಅಕಾಡೆಮಿಯು ಕಾವಿಕಲೆ ಬೆಳೆಸುತ್ತಿರುವುದು ಹರ್ಷದ ಸಂಗತಿ ಎಂದರು.ಸಂಪನ್ಮೂಲ ವ್ಯಕ್ತಿ, ಕಾವಿಚಿತ್ರ ಕಲಾವಿದ ರವಿ ಗುನಗಾ ಮಾತನಾಡಿ, ಕಾವಿಕಲೆ ಎನ್ನುವುದು ಗೋವಾ ಗಡಿಯಿಂದ ಕಾಸರಗೋಡವರೆಗಿತ್ತು. ದೇವಸ್ಥಾನಗಳಲ್ಲಿ ಹೆಚ್ಚು ಕಾವಿ ಕಲೆ ಕಾಣಬಹುದು. ಸಿಮೆಂಟ್ ಗೋಡೆಗಳು ನಿರ್ಮಾಣವಾದ ನಂತರ ಕಾವಿಕಲೆ ನಶಿಸುವಂತಾಗಿದೆ. ಇದರ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.ಕಾಲೇಜಿನ ಪ್ರಾಂಶುಪಾಲ ಪ್ರೊ. ಜಿ.ಟಿ. ಭಟ್ಟ ಮಾತನಾಡಿ, ಕಾವಿಕಲೆ ಮೂಲ ಎಂಬುದು ಇನ್ನೂ ತಿಳಿದಿಲ್ಲ. ಕರಾವಳಿ ಭಾಗದಲ್ಲಿ ಕಾವಿಕಲೆಯನ್ನು ಹೆಚ್ಚು ಕಾಣಬಹುದು. ನಮ್ಮ ಸುತ್ತಮುತ್ತಲಿನ ವಾತಾವರಣ ಆತಂಕದಿಂದ ಮುಕ್ತವಾಗಿರಲಿ ಎಂಬ ಉದ್ದೇಶದಿಂದ ಕಾವಿಕಲೆ ಚಿತ್ರ ಬಿಡಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕಾವಿಕಲೆ ನಶಿಸುತ್ತಿದೆ. ಅದನ್ನು ಬೆಳೆಸಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಎಂಇಎಸ್ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಮಾತನಾಡಿ, ಸಂಸ್ಕೃತಿ ಆಳವಾದ ಕಲೆ ಕಾವಿಕಲೆ. ಕಲೆಯನ್ನು ಉಳಿಸುವ ಕಾರ್ಯ ಆಗಬೇಕು. ನಮ್ಮ ದೇಶದ ಇತಿಹಾಸ, ಸಂಸ್ಕೃತಿಯು ಕಲೆಯಿಂದ ಉಳಿದಿದೆ ಎಂದರೆ ತಪ್ಪಾಗಲಾರದು ಎಂದರು.ರಿಜಿಸ್ಟ್ರಾರ್ ಬಿ. ನೀಲಮ್ಮ ಮಾತನಾಡಿ, ಕಲೆಯ ಉಳಿವಿಗೆ ಹೆಚ್ಚು ಪ್ರೋತ್ಸಾಹ ನೀಡುವುದು ಅಕಾಡೆಮಿ ಉದ್ದೇಶ. ಶಿರಸಿ ಬೇಡರ ಕಲೆಗೂ ಆದ್ಯತೆ ನೀಡಿ ಬೆಂಬಲಿಸಲಾಗುವುದು ಎಂದರು.ಹಿರಿಯ ಕಲಾವಿದ ಜಿ.ಎಂ. ಹೆಗಡೆ ತಾರಗೋಡ, ಶಾಂತಾ ಕೊಲ್ಲೆ, ಕೇಶವ ಕೊರ್ಸೆ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಜಾಜಿಗುಡ್ಡೆ, ಮನೋಜ ಪಾಲೇಕರ್, ಪ್ರಕಾಶ ನಾಯಕ, ಕಿಶೋರ ನೆತ್ರೇಕರ ಮತ್ತಿತರರು ಇದ್ದರು. ಉಪನ್ಯಾಸಕಿ ವಿಜಯಾ ಭಟ್ಟ ನಿರೂಪಿಸಿದರು. ಅಕಾಡೆಮಿಯ ವೆಂಕಟೇಶ ವಂದಿಸಿದರು.
ಇಂದು ಬದುಕಿನ ಕಥೆಗಳು ಕೃತಿ ಲೋಕಾರ್ಪಣೆಅಂಕೋಲಾ: ಲೇಖಕ, ರಾಷ್ಟ್ರೀಕೃತ ಬ್ಯಾಂಕಿನ ನಿವೃತ್ತ ಪ್ರಬಂಧಕ ಜನಾರ್ದನ ನಾಯಕರ ಹೊಸ ಕೃತಿ ‘ಬದುಕಿನ ಕಥೆಗಳು’ ನ. ೩೦ರಂದು ಸಂಜೆ ೪ ಗಂಟೆಗೆ ಕರ್ನಾಟಕ ಸಂಘದ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಕೃತಿ ಲೋಕಾರ್ಪಣೆ ಮಾಡುವಪು, ಯಕ್ಷಗಾನದ ಮೇರು ಕಲಾವಿದ ಡಾ. ರಾಮಕೃಷ್ಣ ಗುಂದಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕರ್ನಾಟಕ ಸಂಘದ ಗೌರವಾಧ್ಯಕ್ಷ ಪ್ರೊ. ಕೆ.ವಿ. ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಚಾರ್ಯ ಡಾ. ವಿನಾಯಕ ಹೆಗಡೆ ಕೃತಿ ಪರಿಚಯಿಸಲಿದ್ದಾರೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಮಹಾಂತೇಶ ರೇವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.