ದುಡಿಯುವ ವರ್ಗದ ಜನರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ನ್ಯಾಯಯುತ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಐಎಫ್‌ಟಿಯು ರಾಜ್ಯ ಸಂಚಾಲಕ ಎಸ್. ಬಾಲನ್ ಒತ್ತಾಯಿಸಿದರು.

ಹಾವೇರಿ: ದುಡಿಯುವ ವರ್ಗದ ಜನರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ನ್ಯಾಯಯುತ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಐಎಫ್‌ಟಿಯು ರಾಜ್ಯ ಸಂಚಾಲಕ ಎಸ್. ಬಾಲನ್ ಒತ್ತಾಯಿಸಿದರು. ನಗರದ ಮುನ್ಸಿಪಲ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಐಎಫ್‌ಟಿಯು ಪ್ರಥಮ ರಾಜ್ಯ ಸಮ್ಮೇಳನ ಹಾಗೂ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯ ಸರ್ಕಾರ ಅಂಗನವಾಡಿ ಹಾಗೂ ಬಿಸಿಯೂಟ ನೌಕರರಿಗೆ ಬರಿ ಕಿತಾಪತಿ ಮಾಡಿಕೊಂಡು ಬಂದಿದೆ. ಸಿಎಂ ಸಿದ್ದರಾಮಯ್ಯ ಅವರು ದುಡಿಯುವ ಜನರಿಗೆ ಸರಿಯಾಗಿ ಸಂಬಳ ನೀಡಬೇಕು. ನಾವು ಬೆವರನ್ನು ಸುರಿಸಿ ದುಡಿಯುವ ಜನ ನಾವು, ಬೆವರಿನ ಫಲವನ್ನು ಕೇಳುತ್ತಿದ್ದು, ಅದಕ್ಕಾಗಿ ಇಂದು ಇಲ್ಲಿ ಸೇರಿದ್ದೇವೆ. ಬಿಸಿಯೂಟ ತಯಾರಕರಿಗೆ ರಾಜ್ಯದಲ್ಲಿ ಒಂದು ದಿನಕ್ಕೆ ₹111 ನೀಡಲಾಗುತ್ತಿದೆ. ಇದು ಅವರಿಗೆ ಹಾಕುತ್ತಿರುವ ನಾಮ ಅಲ್ಲದೇ ಬೇರೇನು? ಅಂಗನವಾಡಿ ಸಹಾಯಕಿಯರಿಗೆ, ಕಾರ್ಯಕರ್ತೆಯರಿಗೆ ನೀಡುತ್ತಿರುವ ಸಂಬಳದಲ್ಲಿ ಜೀವನ ಮಾಡಲು ಸಾಧ್ಯವಿದೆಯಾ ಎಂದು ಪ್ರಶ್ನಿಸಿದರು. ಅಂಗನವಾಡಿ ಹಾಗೂ ಬಿಸಿಯೂಟ ನೌಕಕರಿಗೆ ಕನಿಷ್ಠ ವೇತನ ಕೊಡಿ ಎಂದು ಕೇಳುತ್ತಿದ್ದೇವೆ. ಇದನ್ನು ನಾವು ಹೇಳುತ್ತಿಲ್ಲ, ಈ ದೇಶದ ನ್ಯಾಯಾಲಯಗಳು ಹೇಳಿವೆ. ಗುಜರಾತ್ ಹೈಕೋರ್ಟ್ ಹಾಗೂ ಛತ್ತೀಸ್‌ಗಢ ಹೈಕೋರ್ಟ್ ಸೂಚನೆ ನೀಡಿವೆ. ಸುಪ್ರೀಂ ಕೋರ್ಟ್ ಸಹ ಹೇಳಿದೆ. ಅರಿಯರ್ಸಗಾಗಿ ನಾವು ಸಹ ಕೋರ್ಟ್‌ಗೆ ಹೋಗೋಣ, ನಿಮಗೂ ಆ ಸೌಲಭ್ಯ ಸಂಪೂರ್ಣ ಸಿಗಬೇಕು. ಅದಕ್ಕಾಗಿ ಐಎಫ್‌ಟಿಯು ಅಂಗನವಾಡಿ, ಬಿಸಿಯೂಟ, ಆಶಾ, ಪಂಚಾಯಿತಿ ನೌಕರರನ್ನು ಲಕ್ಷಾಂತರ ಸಂಖ್ಯೆಯಲ್ಲಿ ಸೇರಿಸಿ ಬೆಂಗಳೂರಲ್ಲಿ ಹೋರಾಟ ಮಾಡೋಣ ಎಂದು ಕರೆ ನೀಡಿದರು. ಕಾರ್ಮಿಕ ಸಂಘಟನೆಗಳ ರಾಷ್ಟ್ರೀಯ ಮಂಡಳಿಯ ಒಕ್ಕೂಟದ ಅಧ್ಯಕ್ಷೆ ಅರ್ಪಣಾ ಅವರು ಮಾತನಾಡಿ, ಐಎಫ್‌ಟಿಯು ಪ್ರಥಮ ರಾಜ್ಯ ಸಮ್ಮೇಳನಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ದುಡಿಯುವ ವರ್ಗದ ಮಹಿಳೆಯರು ಬಂದಿರುವುದು ಸಂತಸದ ಸಂಗತಿ. ದೇಶದಲ್ಲಿ ಐಎಫ್‌ಟಿಯು ನೇತೃತ್ವದಲ್ಲಿ ಅನೇಕ ಹೋರಾಟ ಮಾಡಿದ ಫಲವಾಗಿ ಕನಿಷ್ಠ ಸೌಲಭ್ಯಗಳು ಸಿಗುತ್ತಿವೆ. ಮುಂದಿನ ದಿನಗಳಲ್ಲಿ ಈ ರಾಜ್ಯದಲ್ಲಿ ಸಹ ಐಎಫ್‌ಟಿಯು ಸಂಘಟನೆ ಹೆಚ್ಚು ಕ್ರಿಯಾಶೀಲವಾಗಿ ಸಂಘಟನೆ ಕೆಲಸ ಮಾಡಲಿದೆ. ಇಂದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಂಘಟನೆ ಆಗಲು ಬಾಲನ್ ಹಾಗೂ ಹೊನ್ನಪ್ಪ ಮರೆಮ್ಮನವರ ಶ್ರಮವಿದೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಫೆಡರೇಷನ್ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷೆ ಭಾರತಿ ಮಾತನಾಡಿ, ದಕ್ಷಿಣ ಭಾರತ ರಾಜ್ಯದಲ್ಲಿ ಬೇರೆ ಸಂಘಟನೆಗಳಿಗಿಂದ ಐಎಫ್‌ಟಿಯು ಸಂಘಟನೆ ಹೆಚ್ಚು ಜನರ ಮಧ್ಯದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಇಷ್ಟು ದಿನ ಕರ್ನಾಟಕದಲ್ಲಿ ಐಎಫ್‌ಟಿಯು ಹೆಚ್ಚು ಸಕ್ರಿಯವಾಗಿ ಇರಲಿಲ್ಲ. ಈಗ ಪ್ರಥಮ ರಾಜ್ಯ ಸಮ್ಮೇಳನ ನಡೆಸುವ ಮೂಲಕ ಇಲ್ಲಿಯೂ ಇನ್ನು ಮುಂದೆ ಐಎಫ್‌ಟಿಯು ಹೆಚ್ಚು ದುಡಿಯುವ ವರ್ಗದ ಪರವಾಗಿ ಕೆಲಸ ಮಾಡಲಿದೆ ಎಂದರು.ಐಎಫ್‌ಟಿಯು ರಾಜ್ಯ ಸಹ ಸಂಚಾಲಕ ಹೊನ್ನಪ್ಪ ಮರೆಮ್ಮನವರ ಪ್ರಾಸ್ತಾವಿಕ ಮಾತನಾಡಿ, ಕೇವಲ ಬರಿ 20 ದಿನಗಳಲ್ಲಿ ಈ ರಾಜ್ಯ ಸಮ್ಮೇಳನ ನಡೆಸಲಾಗಿದೆ. ಪ್ರಮುಖವಾಗಿ 12 ಜಿಲ್ಲೆಯ ಕೆಲವೇ ಕೆಲವು ಕಾರ್ಯಕರ್ತರು ಇಂದು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಈ ಎಲ್ಲ ಸಂಘಟನೆಗಳು ಹಾಗೂ ಐಎಫ್‌ಟಿಯು ಈ ರಾಜ್ಯದಲ್ಲಿ ಜನ್ಮತಾಳಲು ಬಾಲನ್ ಎಸ್., ಅವರು ಕಾರಣ. ಅವರು ಉತ್ಸಾಹದಿಂದ ಹಾವೇರಿ ಐಎಫ್‌ಟಿಯು ಸಂಘಟನೆ ಆರಂಭವಾಗಿದೆ ಎಂದರು.ಇದಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬಿಸಿಯೂಟ, ಅಂಗನವಾಡಿ ಕಾರ್ಯಕರ್ತೆಯರು ರ‍್ಯಾಲಿ ನಡೆಸಿದರು.