ಲಕ್ಷ್ಮೇಶ್ವರ: ಭಾರತೀಯರ ಪೂಜನೀಯ ಗೋಮಾತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿರಹಟ್ಟಿ ಮಂಡಲದ ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಹಾಗೂ ಜಿಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡರ ಆಗ್ರಹಿಸಿದರು.ಸೋಮವಾರ ಗೋ ಸಮ್ಮಾನ ಅಭಿಯಾನ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.ಗೋವುಗಳು ಭಾರತೀಯರು ಜೀವನಾಡಿಗಳು. ಭಾರತೀಯ ಕೃಷಿಕರ ಬದುಕಿನಲ್ಲಿ ಗೋವುಗಳು ಅತ್ಯಂತ ಪ್ರಮುಖ ಸ್ಥಾನ ಪಡೆದಿವೆ. ಗೋವಿನ ಹಾಲು ಮತ್ತು ಮೂತ್ರ ರೋಗ ನಿರೋಧಕ ಶಕ್ತಿ ಹೊಂದಿವೆ. ಪ್ರತಿ ಮನೆಯಲ್ಲಿ ಗೋವುಗಳನ್ನು ಸಾಕುವ ಮೂಲಕ ಆರ್ಥಿಕ ಮತ್ತು ಸಂಸ್ಕೃತಿ ಪ್ರಬಲತೆ ಸಾಧಿಸಲು ಸಾಧ್ಯವಾಗುತ್ತದೆ. ಗೋವಿನ ಕರು ಎತ್ತುಗಳಿಲ್ಲದೆ ಕೃಷಿ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲ. ಗೋವು ಭಾರತೀಯರು ಪೂಜಿಸುವ ಮುಕ್ಕೋಟಿ ದೇವತೆಗಳಿಗೆ ಸಮನಾಗಿದೆ. ಆದ್ದರಿಂದ ಗೋ ಸಂಪತ್ತು ರಕ್ಷಣಾ ಕಾರ್ಯ ಭರದಿಂದ ಆರಂಭವಾಗಬೇಕು ಎಂದರು.ನವೀನ ಹಿರೇಮಠ, ನಿಂಗಪ್ಪ ಬನ್ನಿ ಹಾಗೂ ಈರಣ್ಣ ಪೂಜಾರ ಮಾತನಾಡಿ, ಗೋವುಗಳನ್ನು ರಕ್ಷಣೆ ಮಾಡುವ ಮೂಲಕ ಭಾರತೀಯ ಪರಂಪರೆ ಉಳಿಸುವ ಕಾರ್ಯ ಮಾಡಬೇಕು. ಭಾರತೀಯರ ರಕ್ತದಲ್ಲಿ ಗೋವಿನ ಹಾಲು ಹರಿಯುತ್ತಿದೆ. ಆಕಳು ಹಾಲು ತಾಯಿಯ ಹಾಲಿಗೆ ಸರಿಸಮನಾಗಿರುವ ಗುಣ ಹೊಂದಿದೆ. ಹೀಗಾಗಿ ಗೋವು ಭಾರತೀಯರಿಗೆ ಪೂಜ್ಯನೀಯವಾಗಿದೆ. ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಕಾನೂನು ರೂಪಿಸಬೇಕು. ಸರ್ಕಾರ ಗೋಮಾಂಸ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸುವ ಕಾನೂನು ತರುವ ಮೂಲಕ ಹಿಂದೂಗಳ ಭಾವನೆಗಳಿಗೆ ಬೆಲೆ ನೀಡುವ ಕಾರ್ಯ ಮಾಡಬೇಕು ಎಂದರು.ಈ ವೇಳೆ ಗಂಗಾಧರ ಮೆಣಸಿನಕಾಯಿ, ಥಾವರೆಪ್ಪ ಲಮಾಣಿ, ಸತೀಶ್ ಬೊಮಲೆ, ಬಸವರಾಜ ಕುಂಬಾರ, ಬಸವರಾಜ ಚಕ್ರಸಾಲಿ, ಭೀಮಣ್ಣ ಯಂಗಾಡಿ, ಸಂತೋಷ ಜಾವೂರ, ರುದ್ರಪ್ಪ ಉಮಚಗಿ. ನಿಂಗಪ್ಪ ಬನ್ನಿ, ಎಂ.ಆರ್. ಪಾಟೀಲ, ವಿಶಾಲ ಬಟಗುರ್ಕಿ, ಪ್ರಕಾಶ ಬೆಂತೂರ, ಬಸವರಾಜ ಕಲ್ಲೂರ, ಹನುಮಂತ ಜಾಲಿಮರದ, ಮಂಜನಗೌಡ ಕೆಂಚನಗೌಡರ, ಸುಮಂಗಲಾ ಕುಂಬಾರ, ಸೋಮಣ್ಣ ಉಪನಾಳ ಬಸವರಾಜ ಮಜ್ಜಿಗುಡ್ಡ, ವಸಂತಗೌಡ ಪಾಟೀಲ, ಪ್ರಶಾಂತ ಗಾಂಜಿ, ದುಂಡಪ್ಪ ಸವಣೂರು, ಅರುಣ ಪಾಟೀಲ, ಆಕಾಶ ಸವದತ್ತಿ, ಮುತ್ತಣ್ಣ ಚೋಟಗಲ್ಲ, ದುಂಡೇಶ ಕೊಟಗಿ ಸೇರಿದಂತೆ ಅನೇಕರು ಇದ್ದರು. ಈ ವೇಳೆ ಗಂಗಾಧರ ಮೆಣಸಿನಕಾಯಿ ಕಾರ್ಯಕ್ರಮ ನಿರ್ವಹಿಸಿದರು.