ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಬಡವರು, ಹಿಂದುಳಿದ ವರ್ಗದವರು ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡುತ್ತಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.

ಶುಕ್ರವಾರ ತಾಲೂಕಿನ ಶೆಟ್ಟಿಕೊಪ್ಪದ ನವಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಹಿಂದುಳಿದ ವರ್ಗದವರ ಸಮುದಾಯ ಭವನ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ಈ ಭಾಗದಲ್ಲಿ ಬಡವರೇ ಹೆಚ್ಚಾಗಿ ವಾಸಿಸುತ್ತಿದ್ದು ಅದರಲ್ಲಿ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಹೆಚ್ಚಾಗಿದ್ದಾರೆ. ಆ ವರ್ಗದ ಜನರ ಮದುವೆ, ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಭವನಕ್ಕೆ ಈ ಭಾಗದ ಮುಖಂಡ ಗಾಂಧಿಗ್ರಾಮ ನಾಗರಾಜು ಮತ್ತು ಇತರ ಮುಖಂಡರು ಅನೇಕ ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರು. ಶಾಸಕ ಟಿ.ಡಿ.ರಾಜೇಗೌಡರಿಗೂ ಮನವಿ ಸಲ್ಲಿಸಿದ್ದರು. ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ನಾನು ಸಮುದಾಯ ಭವನಕ್ಕೆ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿದ ಸಚಿವರು ₹50 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಗಾಂಧಿಗ್ರಾಮ ನಾಗರಾಜು, ಕಾರ್ಯದರ್ಶಿ ಡಿ.ಆರ್.ಈಶ್ವರ್, ಮುಖಂಡರಾದ ಎಂ.ಮಹೇಶ್, ಕೆ.ಮೋಹನ್, ಸಚಿನ್, ಎಸ್.ಎಸ್.ಶ್ರೀನಿವಾಸ್, ಬಿ.ಆರ್.ವೆಂಕಟೇಶ್, ಆರ್.ಸಂಕೇತ್, ದೇವರಾಜ್,ಜಯರಾಮ್, ಸುಧಾಕರ್‌ ಆಚಾರ್, ಗುತ್ತಿಗೆದಾರ ಅನಿ, ಆರ್.ಪ್ರಭಾಕರ್,ದೇವೇಂದ್ರ, ಮಂಡಿಎಲ್ದೋ ಮತ್ತಿತರರು ಉಪಸ್ಥಿತರಿದ್ದರು.