ಉಡುಪಿ: ಮೈಸೂರು ದಸರಾದಲ್ಲಿ ಕಂಬಳ ನಡೆಸಲು ಹೊರಟಿರುವ ರಾಜ್ಯ ಸರ್ಕಾರ ಉಡುಪಿ ಜಿಲ್ಲೆಯ ಬಡಗುಬೆಟ್ಟುವಿನಲ್ಲಿ ಕಂಬಳ ನಡೆಸಲು ತಡೆಯಾಜ್ಞೆ ತಂದು ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದೆ ಎಂದು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಆರೋಪಿಸಿದ್ದಾರೆ.ತಾವು ಬಡಗುಬೆಟ್ಟುವಿನಲ್ಲಿ ಕೋಟಿ ಚೆನ್ನಯರ ಹೆಸರಿನಲ್ಲಿ ಉಡುಪಿ ಕಂಬಳವನ್ನು ನಡೆಸಲು ತೀರ್ಮಾನಿಸಿದ್ದು, ಅದಕ್ಕಾಗಿ ಉಡುಪಿ ಜಿಲ್ಲಾ ಬಿಜೆಪಿ ಶಾಸಕರು ಮತ್ತು ಸಂಸದರು ಸೇರಿ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಆದರೆ ಸರ್ಕಾರ ಈ ಕಾರ್ಯಕ್ರಮ ನಡೆಯದಂತೆ 144 ಸೆಕ್ಷನ್ ನಿಷೇಧಾಜ್ಞೆ ವಿಧಿಸಿ ತಡೆಯುವ ಪ್ರಯತ್ನ ನಡೆಸಿತು. ಆದರೂ ಈ ಕಾರ್ಯಕ್ರಮವನ್ನು ನಡೆಸಿದಾಗ ಶಾಸಕರು, ಸಂಸದರು ಸೇರಿ 37 ಮಂದಿ ಮೇಲೆ ನಿಷೇದಾಜ್ಞೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ಈಗ ಕಂಬಳವನ್ನೇ ನಡೆಸದಂತೆ ತಡೆಯಾಜ್ಞೆ ತರಲಾಗಿದೆ ಎಂದು ಅವರು ಕಾಂಗ್ರೆಸ್ ಸರ್ಕಾರದ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು ನಡೆಸಲು ಉತ್ಸುಕವಾಗಿರುವ ಸರ್ಕಾರ, ಉಡುಪಿ ಕಂಬಳಕ್ಕೆ ಅಡ್ಡಿ ಮಾಡುತ್ತಿರುವುದು ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಚ್ಚುತ್ತಿದೆ. ಇದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.ಸರ್ಕಾರ ತಕ್ಷಣ ತಮ್ಮ ಮೇಲೆ ಹೂಡಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು ಮತ್ತು ಬಡಗುಬೆಟ್ಟುನಲ್ಲಿ ಕಂಬಳಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
