ಸಾರಾಂಶ
ನರಸಿಂಹರಾಜಪುರ, ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರದಲ್ಲಿರುವ ಕುವೆಂಪು ಕ್ರೀಡಾಂಗಣವನ್ನು ಸುಜಜ್ಜಿತ ಕ್ರೀಡಾಂಗಣವನ್ನಾಗಿ ಮಾಡಲು ಪ್ರಯತ್ನ ನಡೆಸುತ್ತೇವೆ ಎಂದು ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಭರವಸೆ ನೀಡಿದರು.
ಕುವೆಂಪು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪ್ರೌಢ ಶಾಲೆಗಳ ಕ್ರೀಡಾ ಕೂಟ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರದಲ್ಲಿರುವ ಕುವೆಂಪು ಕ್ರೀಡಾಂಗಣವನ್ನು ಸುಜಜ್ಜಿತ ಕ್ರೀಡಾಂಗಣವನ್ನಾಗಿ ಮಾಡಲು ಪ್ರಯತ್ನ ನಡೆಸುತ್ತೇವೆ ಎಂದು ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಭರವಸೆ ನೀಡಿದರು.
ಗುರುವಾರ ಪಟ್ಟಣದ ಕುವೆಂಪು ಕ್ರೀಡಾಂಗಣದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲಿನ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರೌಡ ಶಾಲೆಗಳ ಕ್ರೀಡಾ ಕೂಟ ದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸರ್ಕಾರದ ಜೊತೆಗೆ ದಾನಿಗಳು ಸಹ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕು. ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದು ಗೆದ್ದವರು ಮುಂದೆ ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ದೈಹಿಕ ಆರೋಗ್ಯಕ್ಕೆ ಕ್ರೀಡೆಯೂ ಸಹ ಅಗತ್ಯ. ಸೋಲು, ಗೆಲುವನ್ನು ಸಮಚಿತ್ತದಿಂದ ಎದುರಿಸಬೇಕು. ಆಗ ಜೀವನದಲ್ಲೂ ಸಮಸ್ಯೆ , ಕಷ್ಟ ಬಂದಾಗ ಸಮಚಿತ್ತದಿಂದ ಎದುರಿಸಲು ಸಾಧ್ಯವಾಗುತ್ತದೆ ಎಂದರು. ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಕ್ರೀಡಾ ಜ್ಯೋತಿ ಸ್ವೀಕಾರ ಮಾಡಿ ಮಾತನಾಡಿ, ಸೆಪ್ಟಂಬರ್ ತಿಂಗಳಲ್ಲಿ ಮಳೆ ಬರುತ್ತಿರುವುದರಿಂದ ಮಕ್ಕಳಿಗೆ ತಮ್ಮ ನೈಜ ಕ್ರೀಡಾ ಪ್ರದರ್ಶನ ಮಾಡಲು ತೊಂದರೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ ಅಕ್ಟೋಬರ್ ತಿಂಗಳಲ್ಲಿ ಕ್ರೀಡಾ ಕೂಟ ನಡೆಸಿದರೆ ಸೂಕ್ತವಾಗಲಿದೆ. ಕ್ರೀಡಾ ಕೂಟ ನಡೆಸಲು ಸರ್ಕಾರ ಈಗ ನೀಡುತ್ತಿರುವ ಅನುದಾನ ಸಾಕಾಗು ವುದಿಲ್ಲ. ಇದನ್ನು ಹೆಚ್ಚಿಸಬೇಕು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಕುವೆಂಪು ಕ್ರೀಡಾಂಗಣದ ಅಭಿವೃದ್ಧಿಗೆ ಕ್ರೀಡಾ ಸಚಿವರಲ್ಲಿ 1 ಕೋಟಿ ಅನುದಾನದ ಬೇಡಿಕೆ ಇಟ್ಟಿದ್ದಾರೆ. ಅನುದಾನ ಬಂದರೆ ಹೈಟೆಕ್ ಕ್ರೀಡಾಂಗಣ ನಿರ್ಮಿಸಬಹುದಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಮಾತನಾಡಿ, ಸದೃಢ ದೇಹ ಇದ್ದರೆ ಸದೃಢ ಮನಸ್ಸು ಇರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಮುಂದೆ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಸಚ್ಚಾರಿತ್ರ ಪ್ರಜೆಗಳಾಗಬೇಕು. ಸರ್ಕಾರ ಕ್ರೀಡಾ ಕೂಟ, ಪ್ರತಿಭಾ ಕಾರಂಜಿ ಆಯೋಜನೆ ಮಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕ್ರೀಡಾ ಕೂಟಗಳಿಗೆ ಅನುದಾನ ಕಡಿಮೆ ಇದೆ. ದಾನಿಗಳು, ಶಾಲೆಯ ಎಸ್.ಡಿ.ಎಂ.ಸಿ ಯವರ ಸಹಕಾರದೊಂದಿಗೆ ಕ್ರೀಡಾಕೂಟ, ಪ್ರತಿಭಾ ಕಾರಂಜಿ ನಡೆಸುತ್ತಿದ್ದೇವೆ ಎಂದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾ ಭಾನು ಉದ್ಘಾಟಿಸಿದರು. ಕೆಪಿಎಸ್ ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾ ಕೇಶವ್, ಸದಸ್ಯರಾದ ಜುಬೇದ, ಮಹಮ್ಮದ್ ವಸೀಂ, ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಪುರುಶೋತ್ತಮ್, ಶಾಲಾ ಎಸ್.ಡಿ.ಎಂ.ಸಿ.ಸದಸ್ಯರಾದ ಎಚ್.ಎನ್.ರವಿಂಶಂಕರ್, ಕೆ.ಎ.ಅಬೂಬಕರ್, ವಾಣಿ ನರೇಂದ್ರ, ಶಕುಂತಲ, ಮೇದನ, ಉದಯ, ಸಲೀಂ,ಎ.ಪಿ.ಎಂ.ಸಿ.ಸದಸ್ಯ ಎಚ್.ಎಂ.ಶಿವಣ್ಣ,ತಾ.ವಾಲ್ಮೀಕಿ ಸಂಘದ ಅಧ್ಯಕ್ಷ ಮಂಜುನಾಥ್, ಕೆಪಿಎಸ್ ಪ್ರಾಂಶುಪಾಲರಾದ ಸರಸ್ವತಿ, ಕೆಪಿಎಸ್ ನ ಉಪ ಪ್ರಾಂಶುಪಾಲ ರುದ್ರಪ್ಪ, ತಾ.ಬಗರ್ ಹುಕಂ ಸಮಿತಿ ಸದಸ್ಯ ಇ.ಸಿ.ಜೋಯಿ,ತಾ.ಪ್ರೌ.ಶಾಲಾ ಶಿ.ಸಂಘದ ಅಧ್ಯಕ್ಷ ರಾಘವೇಂದ್ರ, ಇ.ಸಿ.ಓ ರಂಗಪ್ಪ ಮತ್ತಿತರರು ಇದ್ದರು.23 ಪ್ರೌಢ ಶಾಲೆಗಳ ಮಕ್ಕಳು ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದರು.