ವಿದ್ಯಾರ್ಥಿಗಳಿಗೆ ಅವರವರ ಧಾರ್ಮಿಕ ಮೌಲ್ಯಗಳಿಗೆ ಬೆಲೆ ಕೊಟ್ಟು ಶಿಕ್ಷಣ ಪಡೆಯಲು ಅವಕಾಶ ನೀಡಬೇಕು ಎಂಬುವುದು ಈ ನಾಡಿನ ಪ್ರಜ್ಞಾವಂತ ಪ್ರಜೆಗಳ ಬಹಳ ದಿನಗಳ ಬೇಡಿಕೆಯಾಗಿತ್ತು
ಬೆಂಗಳೂರು: ಕರ್ನಾಟಕದ ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಇತರ ಧಾರ್ಮಿಕ ವಸ್ತ್ರಗಳ ಮೇಲಿನ ನಿಷೇಧ ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್(ಎಸ್ಸೆಸ್ಸೆಫ್) ಸ್ವಾಗತಿಸಿದೆ. ಶಾಲೆಗಳಲ್ಲಿ ಧಾರ್ಮಿಕ ಉಡುಪಿಗೆ ನಿರ್ಬಂಧವಿಲ್ಲ ಎಂಬ ಸರಕಾರದ ಕ್ರಮ ಸ್ವಾಗತಾರ್ಹ ಎಂದು ತಿಳಿಸಿದೆ.ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸಂಘಟನೆಯು, ‘ಹಿಜಾಬ್ ಸಹಿತ ಇರುವ ಧಾರ್ಮಿಕ ಉಡುಪುಗಳು ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಬಾರದು. ವಿದ್ಯಾರ್ಥಿಗಳಿಗೆ ಅವರವರ ಧಾರ್ಮಿಕ ಮೌಲ್ಯಗಳಿಗೆ ಬೆಲೆ ಕೊಟ್ಟು ಶಿಕ್ಷಣ ಪಡೆಯಲು ಅವಕಾಶ ನೀಡಬೇಕು ಎಂಬುವುದು ಈ ನಾಡಿನ ಪ್ರಜ್ಞಾವಂತ ಪ್ರಜೆಗಳ ಬಹಳ ದಿನಗಳ ಬೇಡಿಕೆಯಾಗಿತ್ತು. ಆದರೆ ಕಳೆದ ದಿನಗಳಲ್ಲಿ ನಡೆದ ಕೆಲವೊಂದು ಬೆಳವಣಿಗೆಗಳು ಈ ನಾಡಿನ ಜಾತ್ಯತೀತ ಪರಂಪರೆಗೆ ಕಳಂಕ ತರುವಂತಿತ್ತು. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಹಿಜಾಬ್ ಸಹಿತ ಧಾರ್ಮಿಕ ಉಡುಪು ಧರಿಸುವುದಕ್ಕೆ ಹೇರಿದ್ದ ನಿಷೇಧವನ್ನು ಹಿಂಪಡೆದ ಸರಕಾರದ ಕ್ರಮ ಸ್ವಾಗತಾರ್ಹ’ ಎಂದು ಅಭಿಪ್ರಾಯ ಪಟ್ಟಿದೆ.