ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಕಲ್ಪತರು ನಾಡಿನ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆದ 18ನೇ ವಾರ್ಷಿಕ ಘಟಿಕೋತ್ಸವದಲ್ಲಿ 11349 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ತುಮಕೂರು ವಿವಿ ಕುಲಪತಿಗಳ ಕಚೇರಿ ಮುಂಭಾಗದ ಆವರಣದಲ್ಲಿ ನಿರ್ಮಿಸಲಾಗಿದ್ದ ಭವ್ಯವಾದ ವೇದಿಕೆಯಲ್ಲಿ ನಡೆದ 18 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಬ್ಬರಿಗೆ ಡಿ.ಲಿಟ್ ಪದವಿ, 59 ಅಭ್ಯರ್ಥಿಗಳಿಗೆ ಪಿಎಚ್.ಡಿ. ಪದವಿ, 1911 ಅಭ್ಯರ್ಥಿಗಳಿಗೆ ಸ್ನಾತಕೋತ್ತರ, 9438 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ಸೇರಿದಂತೆ 11349 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಶುಭ ಹಾರೈಸಿದರು.106 ಸ್ವರ್ಣ ಪದಕ....ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ 76 ವಿದ್ಯಾರ್ಥಿಗಳಿಗೆ 106 ಚಿನ್ನದ ಪದಕಗಳನ್ನು ರಾಜ್ಯಪಾಲರು ಪ್ರದಾನ ಮಾಡಿ ಪ್ರೋತ್ಸಾಹಿಸಿದರು.ಇಬ್ಬರಿಗೆ 5 ಚಿನ್ನದ ಪದಕ....ತುಮಕೂರು ವಿವಿಯ ಎಂ.ಎ. ಕನ್ನಡ ವಿಭಾಗದಲ್ಲಿ ಜಯರಾಮು ಎಂ. ಎಂಬ ವಿದ್ಯಾರ್ಥಿ 5 ಚಿನ್ನದ ಪದಕ ಹಾಗೂ ಎಂ.ಎಸ್ಸಿ ಗಣಿತಶಾಸ್ತ್ರ ವಿಭಾಗದಲ್ಲಿ ವೈಷ್ಣವಿ ಎಚ್.ಆರ್. 5 ಚಿನ್ನದ ಪದಕ ಪಡೆಯುವ ಮೂಲಕ ಘಟಿಕೋತ್ಸವದಲ್ಲಿ ನೆರೆದಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಬಿ.ಕಾಂ.ನಲ್ಲಿ ಪ್ರವೀಣ್ ಎ.ಎಂ. 4 ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನ, ಬಿ.ಎ. ಅರ್ಥಶಾಸ್ತ್ರದಲ್ಲಿ ರಘುನಂದನ ಕೆ.ಎಚ್. 3 ಸ್ವರ್ಣ ಪದಕ, ಬಿ.ಎ. ಕನ್ನಡದಲ್ಲಿ ನೂರ್‌ಫಾತಿಮಾ 3 ಸ್ವರ್ಣ ಪದಕ, ಎ.ಕಾಂ.ನಲ್ಲಿ ರಂಜಿತಾ ಬಿ.ಆರ್. 3 ಚಿನ್ನದ ಪದಕ, ಎಂ.ಎಸ್ಸಿ. ರಸಾಯನಶಾಸ್ತ್ರದಲ್ಲಿ ಯೋಗೇಶ್ ಎಂ.ವಿ. 3 ಸ್ವರ್ಣ ಪದಕ, ಎಂ.ಎಸ್ಸಿ. ಪ್ರಾಣಿಶಾಸ್ತ್ರದಲ್ಲಿ ಹೇಮಲತ ಎಚ್.3 ಸ್ವರ್ಣ ಪದಕ ಹಾಗೂ ಬಿಎಸ್ಸಿ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ದೀಕ್ಷಾ ಎನ್.ಎಚ್. 3 ಚಿನ್ನದ ಪದಕವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಗೌರವ ಸ್ವೀಕರಿಸಿ ಸಂಭ್ರಮಿಸಿದರು.ಸಮಾರಂಭದಲ್ಲಿ ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಅಧ್ಯಕ್ಷರಾದ ಪ್ರೊ. ಟಿ. ಜಿ. ಸೀತಾರಾಮ್, ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು, ವಿವಿ ಪ್ರಭಾರ ಕುಲಸಚಿವ ಪ್ರೊ. ಎಂ. ಕೊಟ್ರೇಶ್, ಪರೀಕ್ಷಾಂಗ ಕುಲಸಚಿವರಾದ ಪ್ರೊ. ಸತೀಶ್ ಗೌಡ ಎನ್. ಸೇರಿದಂತೆ ಅನೇಕ ಗಣ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಗೌಡಾ ಪ್ರದಾನ.... ಪ್ರತಿ ವರ್ಷ ತುಮಕೂರು ವಿಶ್ವವಿದ್ಯಾನಿಲಯದಿಂದ ಕೊಡ ಮಾಡುವ ಗೌರವ ಡಾಕ್ಟರೇಟ್ ಪದವಿಯನ್ನು ಈ ಬಾರಿ ಸಾಹಿತಿ ಹಂ.ಪ. ನಾಗರಾಜಯ್ಯ, ಉದ್ಯಮಿ ಮೈಕ್ರೋ ಲ್ಯಾಬ್ ಕಂಪೆನಿ ಮುಖ್ಯಸ್ಥ ದಿಲೀಪ್ ಸುರಾನ ಹಾಗೂ ಪತ್ರಿಕೋದ್ಯಮಿ ಎಸ್. ನಾಗಣ್ಣ ರವರಿಗೆ ರಾಜ್ಯಪಾಲರು ಪ್ರದಾನ ಮಾಡಿ ಗೌರವಿಸಿದರು.
-------------------ಬಾಕ್ಸ್..
ಶಿಕ್ಷಣವು ವ್ಯಕ್ತಿತ್ವ ವಿಕಸನದ ಜೊತೆಗೆ ರಾಷ್ಟ್ರದ ಪ್ರಗತಿಗೆ ಆಧಾರ: ರಾಜ್ಯಪಾಲಶಿಕ್ಷಣವು ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜ ಮತ್ತು ರಾಷ್ಟ್ರದ ಪ್ರಗತಿಗೆ ಆಧಾರವಾಗಿರುವುದರಿಂದ ಶಿಕ್ಷಣವನ್ನು ಅತ್ಯುತ್ತಮ ಮತ್ತು ಸುರಕ್ಷಿತ ಸಂಪತ್ತು ಎಂದು ಕರೆಯಲಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು. ತುಮಕೂರು ವಿವಿ ಆವರಣದಲ್ಲಿ ಮಂಗಳವಾರ ಜರುಗಿದ 18ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣವನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಹಣ, ಆಸ್ತಿ ಕಾಲಾನಂತರದಲ್ಲಿ ಅಂತ್ಯವಾಗಬಹುದು. ಆದರೆ ಶಿಕ್ಷಣವು ಜೀವಿತಾವಧಿಯವರೆಗೆ ಇರುತ್ತದೆಯಲ್ಲದೆ, ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಹಾಗೂ ಯೋಚಿಸುವ ಶಕ್ತಿಯನ್ನು ನೀಡುತ್ತದೆ ಎಂದರು.
ಇಂದಿನ ಜಗತ್ತಿನಲ್ಲಿ ಹೊಸ ಆವಿಷ್ಕಾರಗಳು, ಹೊಸ ತಂತ್ರಜ್ಞಾನಗಳು ಪ್ರತೀ ದಿನ ಹೊರಹೊಮ್ಮುತ್ತಿವೆ. ಇದರಿಂದ ಯುವಪೀಳಿಗೆಯು ಜೀವನಪರ್ಯಂತ ವಿದ್ಯಾರ್ಥಿಯಾಗಿ ಕೆಲಸ ಮಾಡುವ ಅನಿವಾರ್ಯತೆಯಿದೆ. ಇಂದು ಹೊಸದಾಗಿರುವ ತಂತ್ರಜ್ಞಾನವು ನಾಳೆ ಹಳೆಯದಾಗುತ್ತದೆ. ಈ ನಿಟ್ಟಿನಲ್ಲಿ ಯುವಕರು ಡಿಜಿಟಲ್ ಸಾಕ್ಷರತೆ, ನವೀನ ಚಿಂತನೆ, ಜಾಗತಿಕ ದೃಷ್ಟಿಕೋನ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.