ನಮ್ಮ ನಾಡಿನ ಹಿರಿಮೆ, ಸಂಸ್ಕೃತಿ ಎತ್ತಿ ಹಿಡಿಯುತ್ತೇನೆ

| Published : Aug 25 2024, 02:03 AM IST

ನಮ್ಮ ನಾಡಿನ ಹಿರಿಮೆ, ಸಂಸ್ಕೃತಿ ಎತ್ತಿ ಹಿಡಿಯುತ್ತೇನೆ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಮುಕ್ತ ಮನಸ್ಸಿನಿಂದ ಸಾಂವಿಧಾನಿಕ ಹುದ್ದೆಯನ್ನು ನಿಭಾಯಿಸುತ್ತೇನೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರನ್ನು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಕಿರಿಯಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಾಗರೀಕ ಅಭಿನಂದನಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಎಚ್. ವಿಜಯಶಂಕರ್ ಅವರು, ನಾನು ಮುಕ್ತ ಮನಸ್ಸಿನಿಂದ ಸಾಂವಿಧಾನಿಕ ಹುದ್ದೆಯನ್ನು ನಿಭಾಯಿಸುತ್ತೇನೆ. ನಮ್ಮ ನಾಡಿನ ಹಿರಿಮೆ, ಸಂಸ್ಕೃತಿ ಎತ್ತಿ ಹಿಡಿಯುತ್ತೇನೆ ಎಂದು ಹೇಳಿದರು.

ನಾನು ರಾಜಪಾಲನಾಗಿರುವುದು ಮೇಘಾಲಯಕ್ಕೆ. ಅಲ್ಲಿ ಮಹಿಳೆಯರಿಗೆ ಅತ್ಯುನ್ನತ ಸ್ಥಾನವಿದೆ, ಮಹಿಳೆಯೇ ಮನೆಯ ಯಜಮಾನಿ. ನಮ್ಮ ರಾಜ್ಯದಿಂದ ಬೇರೆ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ಹುದ್ದೆ ನಿಭಾಯಿಸಿದ ಮಹನೀಯರ ಮಾದರಿ ಅನುಸರಿಸುತ್ತೇನೆ ಎಂದು ಎಸ್.ಎಂ. ಕೃಷ್ಣ ಮತ್ತು ಮೈಸೂರಿನ ಮಹಾರಾಜರು ಮತ್ತಿತರರನ್ನು ವಿಜಯಶಂಕರ್ ಸ್ಮರಿಸಿದರು.

ರಾಜ್ಯಪಾಲ ಹುದ್ದೆ ಸಿಕ್ಕಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದೆ. ಆಗ ಅವರು ರಾಜ್ಯಪಾಲ ಹುದ್ದೆಯ ಘನತೆ ಎತ್ತಿ ಹಿಡಿಯಬೇಕು. ರಾಜಭವನಕ್ಕೆ ಸೀಮಿತವಾಗದೆ, ಜನರಮಧ್ಯೆಬರಬೇಕು,ಅವರ ಸಮಸ್ಯೆ ಆಲಿಸಬೇಕು. ಗಡಿ ಪ್ರದೇಶಗಳಿಗೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ನೋಡಿ ಪರಿಹರಿಸಬೇಕು ಎಂದು ಸಲಹೆ ನೀಡಿದರು.

ನನಗೆ ಮೇಘಾಲಯ ರಾಜ್ಯಪಾಲ ಹುದ್ದೆ ಸಿಕ್ಕ ಕೂಡಲೇ ನನ್ನ ಶ್ರೀಮತಿಯವರು ನಿಮಗೆ ಈ ನಾಡಿನ ಋಣವನ್ನು ಇನ್ನೂ ತೀರಿಸಲು ಆಗಿಲ್ಲ ಶಾಸಕರಾದಿರಿ, ಸಚಿವರಾದಿರಿ, ವಿಧಾನ ಪರಿಷತ್ ಸದಸ್ಯರಾದಿರಿ ಆದರೆ ಯಾವುದೇ ಋಣ ತೀರಿಸಿಲ್ಲ ಈಗ ಮೇಘಾಲಯ ರಾಜ್ಯಪಾಲರಾಗಿದ್ದೀರಿ. ಅಲ್ಲಿನ ಋಣ ತೀರಿಸಿ ಋಣಮುಕ್ತರಾಗಿ ಬನ್ನಿ ಎಂದು ತಿಳಿಸಿದ್ದಾರೆ ಎಂದು ತಿಳಿಸಿದರು.

ಶುದ್ಧ ಗಾಳಿ, ಶುದ್ಧ ನೀರು, ಮೆಡಿಕಲ್ ಸೈನ್ಸ್ ಮತ್ತು ಧಾರ್ಮಿಕವಾಗಿ ನಮ್ಮ ದೇಶದಲ್ಲಿ ಮೇಘಾಲಯ ಮೊದಲ ಸ್ಥಾನದಲ್ಲಿದೆ. ಆಚಾರ, ವಿಚಾರ ಎಲ್ಲದರಲ್ಲೂ ಮೇಘಾಲಯ ಮುಂದಿದೆ. ನಮ್ಮ ರಾಜ್ಯದಿಂದ ವಿದ್ಯಾರ್ಥಿಗಳು ನಾಡಿನ ಜನರು ಮೇಘಾಲಯಕ್ಕೆ ಬರಬೇಕು ಎಂದು ಆಹ್ವಾನಿಸಿದರು.

ಮೇಘಾಲಯದಲ್ಲಿ ಮತ್ತೊಂದು ವಿಶೇಷವೆಂದರೆ ಅಲ್ಲಿ ಮನೆಯ ಮಗಳಿಗೆ ಪಿತ್ರಾರ್ಜಿತ ಆಸ್ತಿ ಹೋಗುತ್ತದೆ ಅಂತಹ ಒಂದು ಒಳ್ಳೆಯ ಕಾನೂನು ಅಲ್ಲಿರುವುದು ವಿಶೇಷ ಎಂದು ತಿಳಿಸಿದರು.

ನಮ್ಮ ನಾಡಿನ ಗೌರವಕ್ಕೆ ಚ್ಯುತಿ ತರುವಂತ ಕೆಲಸವನ್ನು ನಾನು ಮಾಡುವುದಿಲ್ಲ. ನನಗೆ ಜನ್ಮ ಜನ್ಮದ ಪುಣ್ಯ ಅಲ್ಲಿನ ರಾಜ್ಯಪಾಲ ಹುದ್ದೆ ದೊರಕಿದೆ. ನಮ್ಮ ನಾಡಿನ ಕೀರ್ತಿಯನ್ನು ಹೆಚ್ಚಿಸುತ್ತೇನೆ ನಮ್ಮ ನಾಡಿನ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ, ರಾಜ್ಯಪಾಲರ ಹುದ್ದೆ ಸುಲಭವಾದುದಲ್ಲ ಅದು ಜಟಿಲ, ಕೇವಲ ಸಹಿ ಹಾಕುವುದಲ್ಲ ಅಲ್ಲಿನ ಸಮಸ್ಯೆ ಪರಿಹರಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಸಾಂವಿಧಾನಿಕ ಹುದ್ದೆಯನ್ನು ಚೆನ್ನಾಗಿ ನಿಭಾಯಿಸಿ ಮೈಸೂರಿಗೆ ಮತ್ತು ಕರ್ನಾಟಕಕ್ಕೆ ಇನ್ನೂ ಹೆಚ್ಚು ಒಳ್ಳೆಯ ಹೆಸರನ್ನು ತರುವಂತಾಗಲಿ ಎಂದು ಹಾರೈಸಿದರು.

ರಾಜ್ಯಪಾಲರಾಗಿ ರಾಜಭವನ ಪ್ರವೇಶಿಸಿದ ಕೂಡಲೇ ರಾಜಭವನದಲ್ಲಿ ಇನ್ನು ಮುಂದೆ ಮಧ್ಯ,ಮಾಂಸ ಸೇವನೆ ಇರುವುದಿಲ್ಲ ಎಂದು ವಿಜಯಶಂಕರ್ ಅವರು ಹೇಳಿ ಅದನ್ನು ಆಚರಣೆಗೆ ತರುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಆದರೆ ಆಹಾರ ಪದ್ಧತಿ ಅವರವರ ನಂಬಿಕೆಗೆ ಬಿಟ್ಟದ್ದು ಆದರೆ ಅವರ ಪದ್ಧತಿಯನ್ನು ಜಾರಿಗೊಳಿಸುತ್ತಿರುವುದು ಅವರ ಧೈರ್ಯಕ್ಕೆ ಮೆಚ್ಚುಗೆ ಇರಬೇಕು ಎಂದು ಶ್ರೀಗಳು ಹೇಳಿದರು.

ವಿಜಯಶಂಕರ್ ಅವರು 1990 ರಿಂದ ನಮ್ಮ ಆಶ್ರಮಕ್ಕೆ ಬರುತ್ತಿದ್ದಾರೆ. ಈಗ ಅವರು ರಾಜ್ಯಪಾಲರಾಗಿರುವುದು ನಮ್ಮ ಆಶ್ರಮದವರೇ ರಾಜ್ಯಪಾಲರಾಗಿದ್ದಾರೇನೊ ಎನಿಸುತ್ತಿದೆ. ಅತ್ಯಂತ ಸಂತಸವಾಗುತ್ತಿದೆ ಅವರಿಗೆ ನಮ್ಮ ಆಶ್ರಮದಲ್ಲಿಯೇ ನಾಗರಿಕ ಅಭಿನಂದನೆ ಮಾಡುತ್ತಿರುವುದು ನಿಜಕ್ಕೂ ಒಳ್ಳೆಯ ಕಾರ್ಯ. ನಮ್ಮ ಗಣಪತಿ ಸಚ್ಚಿದಾನಂದ ಸ್ವಾಮೀಜಿಯ ಆಶಯವೂ ಇದೇ ಆಗಿತ್ತು. ಈ ಕಾರ್ಯವನ್ನು ಎಲ್ಲರೂ ಅಚ್ಚುಕಟ್ಟಾಗಿ ನಡೆಸಿ ಕೊಟ್ಟಿದ್ದಾರೆ ಎಂದು ಅವರು ಮೆಚ್ಚುಗೆವ್ಯಕ್ತಪಡಿಸಿದರು.

ನಾವು ಮಾಡುವ ಒಳ್ಳೆಯ ಕೆಲಸಕ್ಕೆ ಭಗವಂತನ ಅನುಗ್ರಹ ಇರುತ್ತದೆ ಎಂಬುದಕ್ಕೆ ವಿಜಯಶಂಕರ್ ಉದಾಹರಣೆ ಎಂದು ಶ್ರೀಗಳು ತಿಳಿಸಿದರು.

ಸನ್ಮಾನ ಸಮಾರಂಭಕ್ಕೂ ಮೊದಲು ಸಿ.ಎಚ್. ವಿಜಯಶಂಕರ್ ಅವರು ಅವಧೂತ ದತ್ತಪೀಠದ ಆವರಣದಲ್ಲಿನ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ದೇವಾಲಯ ಹಾಗೂ ಕಾರ್ಯಸಿದ್ದಿ ಆಂಜನೇಯಸ್ವಾಮಿ ದೇವಾಲಯ, ಶ್ರೀದತ್ತ ಸನ್ನಿಧಿಗೆ ಭೇಟಿ ನೀಡಿ ದೇವರದರ್ಶನ ಪಡೆದರು.

ಬಿಜೆಪಿ ಮುಖಂಡ, ಮಾಜಿ ಶಾಸಕ ಮಾರುತಿರಾವ್ ಪವಾರ್ ಗಣ್ಯರನ್ನು ಸ್ವಾಗತಿಸಿದರು. ಮಾಜಿಶಾಸಕ ವೈ.ಎಸ್.ವಿ ದತ್ತ ಅಭಿನಂದನಾ ಭಾಷಣ ಮಾದರು.

ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿಗಳಾದ ಡಾ.ಎಸ್.ಎಲ್. ಭೈರಪ್ಪ, ಡಾ. ಪ್ರಧಾನ ಗುರುದತ್ತ, ಶಾಸಕರಾದ ಶ್ರೀವತ್ಸ, ತನ್ವೀರ್ ಸೇಠ್, ಸದಸ್ಯ ಎಚ್. ವಿಶ್ವನಾಥ್ ಮೊದಲಾದವರು ಇದ್ದರು.