ಸಾರಾಂಶ
ಕಾರಟಗಿ ಪಟ್ಟಣದಲ್ಲಿ ಸಾಂಸ್ಕೃತಿಕ ಭವನ ಮತ್ತು ಅತಿಥಿ ಗೃಹ ನಿರ್ಮಾಣ ಕಾಮಗಾರಿಗಳಿಗೆ ನವಲಿ ರಸ್ತೆಯ ಪ್ರವಾಸಿ ಮಂದಿರದಲ್ಲಿ ಆವರಣದಲ್ಲಿ ಶನಿವಾರ ಸಚಿವ ಶಿವರಾಜ ತಂಗಡಗಿ ಅವರು ಭೂಮಿಪೂಜೆ ನೆರವೇರಿಸಿದರು.
ಕಾರಟಗಿ: ಕಾರಟಗಿ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಅಭ್ಯರ್ಥಿಯಗಳನ್ನು ಆ. ೨೭ರಂದೇ ಘೋಷಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಪಟ್ಟಣದಲ್ಲಿ ಸಾಂಸ್ಕೃತಿಕ ಭವನ ಮತ್ತು ಅತಿಥಿ ಗೃಹ ನಿರ್ಮಾಣ ಕಾಮಗಾರಿಗಳಿಗೆ ನವಲಿ ರಸ್ತೆಯ ಪ್ರವಾಸಿ ಮಂದಿರದಲ್ಲಿ ಆವರಣದಲ್ಲಿ ಶನಿವಾರ ಸಂಜೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಪುರಸಭೆಗೆ ಒಟ್ಟು ೨೩ ಸದಸ್ಯರ ಬಲವಿದೆ. ನಮ್ಮ ಪಕ್ಷಕ್ಕೆ ಬಹುಮತವಿದೆ. ೨೭ರಂದು ಅಧ್ಯಕ್ಷ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ. ಮೀಸಲಾತಿ ಅನ್ವಯ ಒಟ್ಟು ನಾಲ್ವರು ಆಕಾಂಕ್ಷಿಗಳಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಸದಸ್ಯರ ಅಭಿಪ್ರಾಯ ಪಡೆದು ಅದರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಸೂಕ್ತ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು. ಇನ್ನು ಬಿಜೆಪಿ ಕೆಲವು ಸದಸ್ಯರು ಸಂಪರ್ಕದಲ್ಲಿದ್ದು, ಅವರ ಸಹ ನಮ್ಮ ಅಭ್ಯರ್ಥಿಗೆ ಬೆಂಬಲಿಸುವುದಾಗಿ ಈಗಾಗಲೇ ಹೇಳಿದ್ದಾರೆ ಎಂದು ಸಚಿವರು ಹೇಳಿದರು.
ಮಂಜೂರು: ಕಾರಟಗಿ ತಾಲೂಕಿಗೆ ಹಿಂದುಳಿದ ವರ್ಗದ ಎರಡು ವಸತಿ ನಿಲಯಗಳು ಮಂಜೂರಾಗಿವೆ. ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳು, ಕನಕಗಿರಿಗೆ ಬಾಲಕ ಮತ್ತು ಬಾಲಕಿಯರು, ಕ್ಷೇತ್ರದ ವ್ಯಾಪ್ತಿಯ ಶ್ರೀರಾಮನಗರಕ್ಕೆ ಒಂದು ವಿದ್ಯಾರ್ಥಿ ವಸತಿ ನಿಲಯ ಮಂಜೂರಿ ಮಾಡಿಸಲಾಗಿದೆ. ನವಲಿ ಹಿಂದುಳಿದ ವರ್ಗದ ಮೊರಾರ್ಜಿ ವಸತಿ ಶಾಲೆ ಮಂಜೂರಾಗಿದ್ದು, ಅದಕ್ಕೆ ಒಟ್ಟು ₹೨೨ ಕೋಟಿ ಅನುದಾನ ಒದಗಿಸಲಾಗಿದೆ. ವಾರದೊಳಗೆ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.₹೧೨.೩೦ ಕೋಟಿ:
ಒಟ್ಟು ₹12.30 ಕೋಟಿಯ ವಿವಿಧ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನಿವಾರ್ಯವಾಗಿದ್ದ ಭವನ ನಿರ್ಮಾಣ ಮಾಡಲಾಗುವುದು. ಲೋಕೋಪಯೋಗಿ ಇಲಾಖೆಯಿಂದ ₹೨.೮ ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಗೊಳ್ಳಲಿದೆ. ಅತ್ಯಾಧುನಿಕ ವೇದಿಕೆ, ಶೌಚಾಲಯ ಸಹಿತ ಗ್ರೀನ್ ರೂಮ್ ನಿರ್ಮಾಣ ಮಾಡಲಿದ್ದು, ಕಾರ್ಯಕ್ರಮಗಳಿಗೆ ಬೇಕಾದ ಸಕಲ ಸೌಲಭ್ಯಗಳನ್ನು ಅಳವಡಿಸುವ ವ್ಯವಸ್ಥೆಯನ್ನೂ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ಭವನ ನಿರ್ಮಾಣವಾಗಲಿದೆ. ೧೧ ತಿಂಗಳಲ್ಲಿ ಕಾಲಾವಧಿಯಲ್ಲಿ ಪೂರ್ಣವಾಗಲಿದೆ ಎಂದು ಹೇಳಿದರು.ಈಗಿನ ಪ್ರವಾಸಿ ಮಂದಿರದ ಆವರಣದ ಜಾಗದಲ್ಲಿಯೇ ₹೪ ಕೋಟಿ ವೆಚ್ಚದಲ್ಲಿ ಹೈಟೆಕ್ ಅತಿಥಿ ಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಿವರೆಡ್ಡಿ ನಾಯಕ್, ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾ.ಪಾ. ಕೆ. ಸಿದ್ದನಗೌಡ, ಚನ್ನಬಸಪ್ಪ ಸುಂಕದ್, ರುದ್ರಗೌಡ ನಂದಿಹಳ್ಳಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣೇಗೌಡ ಬೂದುಗುಂಪಾ, ಜೆ. ದಾನನಗೌಡ, ಅಯ್ಯಪ್ಪ ಉಪ್ಪಾರ, ಶರಣಪ್ಪ ಪರಕಿ, ಉದಯ ಈಡಿಗೇರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್, ಉಪಾಧ್ಯಕ್ಷ ನಾಗರಾಜ್ ಅರಳಿ, ಸದಸ್ಯ ಸೋಮನಾಥ ದೊಡ್ಡಮನಿ, ಮಹೇಶ ಕಂದಗಲ್, ವೀರೇಶ ಟಿವಿಎಸ್, ಖಾಜಾ ಹುಸೇನ್ ಮುಲ್ಲಾ, ಅಮ್ರುಲ್ ಹುಸೇನ್, ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ್, ದೊಡ್ಡಬಸವರಾಜ ಬೂದಿ, ಸಿದ್ದಪ್ಪ ಬೇವಿನಾಳ, ವೀರೇಶ ಮುದುಗಲ್, ಶೇಖರಪ್ಪ ಗ್ಯಾರೇಜ್, ಚಂದ್ರು ಆನೆ ಹೊಸೂರು, ನಾಗರಾಜ್ ಭಜಂತ್ರಿ, ಮಹಿಬೂಬ್, ನಾಗರಾಜ್ ಈಡಿಗೇರ್ ಇನ್ನಿತರರು ಇದ್ದರು.