ಆಧುನಿಕ ಮಾಧ್ಯಮಗಳಿಂದ ಜಗತ್ತಿನ ಮಾಹಿತಿ ತಿಳಿಯಲು ಸಾಧ್ಯ

| Published : Aug 25 2024, 02:02 AM IST

ಸಾರಾಂಶ

ಆಧುನಿಕ ಮಾಧ್ಯಮಗಳ ಮೂಲಕ ಇಡೀ ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಬಹುದಾಗಿದೆ ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು

ಕನ್ನಡಪ್ರಭ ವಾರ್ತೆ ತುಮಕೂರುಆಧುನಿಕ ಮಾಧ್ಯಮಗಳ ಮೂಲಕ ಇಡೀ ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಬಹುದಾಗಿದೆ ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು.ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘ ಮತ್ತು ಕರ್ನಾಟಕ ಲೇಖಕಿಯರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಕಲಾಶ್ರೀ ಬರೆದಿರುವ ‘ಪುಣ್ಯಭೂಮಿ ಭಾರತಿ, ಸುರಮ್ಯಭೂಮಿ ಭಾರತಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.ಪ್ರತಿಯೊಂದು ವಿವರವೂ ಆಧುನಿಕ ಮಾಧ್ಯಮಗಳ ಮೂಲಕ ಪರಿಚಯವಾಗುತ್ತಿದೆ. ಪ್ರವಾಸ ಎನ್ನುವುದು ದೇಶ ವಿದೇಶ ಸುತ್ತಿರುವುದು, ಬೇರೆ ಪ್ರದೇಶಗಳನ್ನು ಪರಿಚಯ ಮಾಡಿಕೊಡುವುದು. ಅಲ್ಲಿಯ ಜನರ ಜೀವನ, ಸಂಸ್ಕೃತಿಯನ್ನು ವಿಭಿನ್ನವಾಗಿ ಕಟ್ಟಿಕೊಡುವುದನ್ನು ನಾವು ನೋಡಿದ್ದೇವೆ. ವಿಭಿನ್ನ ಪರಿಸರವನ್ನು ನೋಡುವುದಕ್ಕೆ ಇಂತಹ ಪ್ರವಾಸ ಕಥನಗಳಿಂದ ಸಾಧ್ಯವಾಗುತ್ತದೆ ಎಂದರು.

ಪ್ರಗತಿಪರವಾದ ಮತ್ತು ವಿಭಿನ್ನವಾಗಿ ಬರೆಯುವ ಕಾಲಘಟ್ಟದಲ್ಲಿ ಕಲಾಶ್ರೀ ಅಗಮ್ಯತೆಯಿಂದ, ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಬರೆಯುತ್ತಿದ್ದಾರೆ. ನನಗೆ ಈ ಪುಸ್ತಕ ಓದುವಾಗ ನಾನು ಪ್ರವಾಸ ಮಾಡಿದ ಅನುಭವವಾಯಿತು. ಪುಸ್ತಕವನ್ನು ದಿನಚರಿಯ ರೂಪದಲ್ಲಿ ಬರೆದಿದ್ದಾರೆ. ಪ್ರವಾಸದ ಕಥನ ತುಂಬಾ ಚನ್ನಾಗಿ ಮೂಡಿಬಂದಿದೆ. ನಾವೇ ಪ್ರವಾಸವನ್ನು ಹೋಗಿಬಂದಷ್ಟು ಅನುಭವವಾಗುತ್ತದೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಪ್ರವಾಸ ಸಾಹಿತ್ಯ ಅನುಭವ ಕಥನ. ವಿಶೇಷವಾಗಿ ವಸ್ತುಸ್ಥಿತಿಯನ್ನು ಕಟ್ಟಿಕೊಡುವುದಾಗಿರುತ್ತದೆ. ಪ್ರವಾಸದಲ್ಲಿ ತಾವು ಅನುಭವಿಸಿ, ಪರಂಬರಿಸಿ ಬರೆಯುವುದು ಪ್ರವಾಸ ಕಥವಾಗಿರುತ್ತದೆ. ಇದನ್ನು ಕಲಾಶ್ರೀ ಮಾಡಿದ್ದಾರೆ. ಪ್ರವಾಸ ಕಥನದಲ್ಲಿ ಕಲೆ, ಸಂಸ್ಕೃತಿ, ಪರಿಸರ ಇವೆಲ್ಲವನ್ನೂ ದಾಖಲಿಸಲು ಅವಕಾಶವಿರುತ್ತದೆ. ಮಣ್ಣು, ಕಲ್ಲು, ನೀರು ಈ ಮೂರನ್ನು ಬಿಟ್ಟು ಪ್ರವಾಸ ಕಥನ ಇರುವುದಿಲ್ಲ ಎಂದರು.ಕಲೇಸಂ ಜಿಲ್ಲಾ ಶಾಖೆ ಅಧ್ಯಕ್ಷೆ ಜಿ.ಮಲ್ಲಿಕಾ ಬಸವರಾಜು ಮಾತನಾಡಿ, ಕಲಾಶ್ರೀ ಪ್ರವಾಸ ಕಥನ ಒಂದೇ ಗುಟುಕಿನಲ್ಲಿ ಓದಿಸಿಕೊಂಡು ಹೋಗುತ್ತದೆ. ಸರಳವಾದ ನಿರೂಪಣೆ ಇದೆ. ಕೃತಿ ಚನ್ನಾಗಿ ಮೂಡಿಬಂದಿದೆ ಎಂದರು. ಲೇಖಕಿ ಗೀತಾಲಕ್ಷ್ಮೀ, ಎಸ್.ನಾಗಣ್ಣ, ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಚಂದ್ರಣ್ಣ, ನಿವೃತ್ತ ಸರ್ಕಾರಿ ನೌಕರ ಜಿ.ಸಿ.ಷಡಕ್ಷರಾಧ್ಯ, ಲೇಖಕಿ ಮತ್ತು ನಿವೃತ್ತ ಶಿಕ್ಷಕಿ ಕಲಾಶ್ರೀ, ಸಿ.ಎ.ಇಂದಿರಮ್ಮ, ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ, ಮರಿಯಂಬಿ ಇದ್ದರು.