ಕುರೆಕುಪ್ಪ ಪುರಸಭೆ ಅಧ್ಯಕ್ಷರಾಗಿ ಕಲ್ಗುಡಿಯಪ್ಪ, ಉಪಾಧ್ಯಕ್ಷರಾಗಿ ಜ್ಯೊತಿ ಆಯ್ಕೆ

| Published : Aug 25 2024, 02:02 AM IST

ಸಾರಾಂಶ

ಅಧ್ಯಕ್ಷ ಸ್ಥಾನ ಬಿಸಿ ‘ಎ’ ಗುಂಪಿಗೆ ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು.

ಸಂಡೂರು: ತಾಲೂಕಿನ ಕುರೆಕುಪ್ಪ ಪುರಸಭೆಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆ. ಕಲ್ಗುಡಿಯಪ್ಪ ಅಧ್ಯಕ್ಷರಾಗಿ ಹಾಗೂ ಜ್ಯೋತಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಬಿಸಿ ‘ಎ’ ಗುಂಪಿಗೆ ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಒಟ್ಟು ೨೩ ಸದಸ್ಯ ಬಲದ ಪುರಸಭೆಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಐವರು ಸದಸ್ಯರು ಗೈರಾಗಿ ೧೮ ಸದಸ್ಯರು ಭಾಗವಹಿಸಿ, ತಮ್ಮ ಮತವನ್ನು ಚಲಾಯಿಸಿದರು.

ಅಧ್ಯಕ್ಷ ಸ್ಥಾನಕ್ಕೆ ೬ನೇ ವಾರ್ಡಿನ ಸದಸ್ಯ ಕೆ. ಕಲ್ಗುಡಿಯಪ್ಪ ಹಾಗೂ ೧ನೇ ವಾರ್ಡಿನ ಲಕ್ಷ್ಮಿ ಸ್ಪರ್ಧಿಸಿದ್ದರು. ಸಂಸದ ಈ.ತುಕಾರಾಂ ಮತವೂ ಸೇರಿ ಕೆ.ಕಲ್ಗುಡಿಯಪ್ಪ ಅವರಿಗೆ ೧೦ ಮತಗಳು ಹಾಗೂ ಸಮೀಪದ ಪ್ರತಿಸ್ಪರ್ಧಿ ಲಕ್ಷ್ಮಿಯವರಿಗೆ ೯ ಮತಗಳು ಲಭ್ಯವಾದ ಹಿನ್ನೆಲೆಯಲ್ಲಿ ಕೆ. ಕಲ್ಗುಡಿಯಪ್ಪ ಅವರನ್ನು ಚುನಾವಣಾಧಿಕಾರಿ ಜಿ.ಅನಿಲ್‌ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.

ಉಪಾಧ್ಯಕ್ಷ ಹುದ್ದೆಗೆ ೨೩ನೇ ವಾರ್ಡಿನ ಸದಸ್ಯೆ ಜ್ಯೋತಿ ಹಾಗೂ ೧೯ನೇ ವಾರ್ಡಿನ ಸದಸ್ಯೆ ಪ್ರೇಮಾ ಸ್ಪರ್ಧಿಸಿದ್ದರು. ಜ್ಯೋತಿ ಅವರಿಗೆ ಸಂಸದ ಈ. ತುಕಾರಾಂ ಅವರ ಮತ ಸೇರಿ ಒಟ್ಟು ೧೦ ಮತಗಳು ಹಾಗೂ ಪ್ರೇಮಾ ಅವರಿಗೆ ೯ ಮತಗಳು ಲಭ್ಯವಾದ ಹಿನ್ನೆಲೆಯಲ್ಲಿ ೧೦ ಮತಗಳನ್ನು ಪಡೆದ ಜ್ಯೋತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಗಳು ಘೋಷಿಸಿದರು. ಪುರಸಭೆ ಮುಖ್ಯಾಧಿಕಾರಿ ಸತೀಶ್ ಗುಡ್ಡೆ ಉಪಸ್ಥಿತರಿದ್ದರು.

ಮಾಜಿ ವಿಪ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಏಕಾಂಬ್ರಪ್ಪ, ಮುಖಂಡರಾದ ಚಿನ್ನಬಸಪ್ಪ, ಗುರುಪಾದಪ್ಪ, ಎಸ್. ಸಿರಾಜ್ ಹುಸೇನ್, ನೂರ್ ಅಹಮ್ಮದ್, ಯು. ಪಂಪಾಪತಿ, ಸತ್ಯನಾರಾಯಣ ಮುಂತಾದವರು ಉಪಸ್ಥಿತರಿದ್ದರು.