ರಾಜ್ಯ ವಿಧಾನಮಂಡಲದ ಇತಿಹಾಸದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡದೇ ಇರುವ ಪ್ರಸಂಗ ಈವರೆಗೆ ನಡೆದಿಲ್ಲ. ಆದರೆ ಎರಡು ಬಾರಿ ಭಾಷಣ ಮೊಟಕುಗೊಳಿಸಿದ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ವಿಧಾನಮಂಡಲದ ಇತಿಹಾಸದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡದೇ ಇರುವ ಪ್ರಸಂಗ ಈವರೆಗೆ ನಡೆದಿಲ್ಲ. ಆದರೆ ಎರಡು ಬಾರಿ ಭಾಷಣ ಮೊಟಕುಗೊಳಿಸಿದ ಘಟನೆ ನಡೆದಿದೆ.ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಂದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸುವ ಘಟನೆ ಹಲವಾರು ಬಾರಿ ನಡೆದಿದೆ. ಪ್ರತಿಪಕ್ಷಗಳ ವಿರೋಧ, ಗದ್ದಲದ ನಡುವೆ ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಪೂರ್ಣವಾಗಿ ಓದುತ್ತಾ ಬಂದಿದ್ದಾರೆ. ಆದರೆ ಒಂದು ಬಾರಿ ಅರ್ಧಕ್ಕೆ ಭಾಷಣ ಮೊಟಕು ಮಾಡಿದ್ದರೆ, ಮತ್ತೊಂದು ಬಾರಿ ಭಾಷಣ ಆರಂಭಿಸಿ ಕೆಲ ವಾಕ್ಯವಷ್ಟೇ ಓದಿ ಭಾಷಣ ನಿಲ್ಲಿಸಿ ಸದನದಿಂದ ಹೊರ ನಡೆದ ಘಟನೆ ನಡೆದಿದೆ.
ಅರ್ಧಕ್ಕೆ ಭಾಷಣ ಮೊಟಕು:1998ರಲ್ಲಿ ಜೆಡಿಯು ಪಕ್ಷ ಅಧಿಕಾರದಲ್ಲಿದ್ದು, ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿತ್ತು. ಜಂಟಿ ಅಧಿವೇಶನ ಉದ್ದೇಶಿಸಿ ಆಗಿನ ರಾಜ್ಯಪಾಲ ಖುರ್ಷಿದ್ ಅಲಂ ಖಾನ್ ಅವರು ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ ಅವರು, ರಾಜ್ಯಪಾಲರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿ, ಪರ್ಯಾಯವಾಗಿ ತಾವೇ ಸಿದ್ಧಪಡಿಸಿದ ಭಾಷಣ ಓದಲು ಆರಂಭಿಸಿದರು. ಇದೇ ವೇಳೆ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಕಳಪೆ ಪ್ರದರ್ಶನ ಮಾಡಿರುವುದರಿಂದ ರಾಜ್ಯಪಾಲರಿಂದ ಭಾಷಣ ಮಾಡಿಸುವ ನೈತಿಕತೆ ಹೊಂದಿಲ್ಲ. ಬೀದರ್, ಗುಲ್ಬರ್ಗಾದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಗದ್ದಲದ ವಾತಾವರಣ ಉಂಟಾಯಿತು. ಹೀಗಾಗಿ ರಾಜ್ಯಪಾಲರು ಅರ್ಧಕ್ಕೆ ಭಾಷಣ ಮುಕ್ತಾಯ ಮಾಡಿ ಸದನದಿಂದ ತೆರಳಿದರು.
ಕೆಲವೇ ವಾಕ್ಯಕ್ಕೆ ಸೀಮಿತವಾದ ಭಾಷಣ:2011ರಲ್ಲಿ ಮುಖ್ಯಮಂತ್ರಿಯಾಗಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದರೆ, ರಾಜ್ಯಪಾಲರಾಗಿ ಎಚ್.ಆರ್.ಭಾರದ್ವಾಜ್ ಕಾರ್ಯ ನಿರ್ವಹಿಸುತ್ತಿದ್ದರು. ಆಗ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಬಂಧ ಅಷ್ಟೇನೂ ಸರಿಯಾಗಿರಲಿಲ್ಲ.
ಹೀಗಿರುವಾಗ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಭಾರದ್ವಾಜ್ ಭಾಷಣ ಆರಂಭಿಸುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ. ರಾಜ್ಯಪಾಲರನ್ನು ‘ರಾಜಕೀಯ ಏಜೆಂಟ್’ ಎಂದು ಟೀಕಿಸಿದೆ. ಹೀಗಾಗಿ ಭ್ರಷ್ಟ ಸರ್ಕಾರ ಸಿದ್ಧಪಡಿಸಿರುವ ಭಾಷಣ ಓದಬಾರದು ಎಂದು ಆಗ್ರಹಿಸಿತು. ಸದನದಲ್ಲಿ ಸಾಕಷ್ಟು ಗದ್ದಲದ ವಾತಾವರಣ ಉಂಟಾಗುತ್ತಿದ್ದಂತೆ ಕೆಲ ವಾಕ್ಯ ಮಾತ್ರ ಓದಿದ್ದ ರಾಜ್ಯಪಾಲರು ಹಠಾತ್ತಾಗಿ ಭಾಷಣ ಸ್ಥಗಿತ ಮಾಡಿ ಸದನದಿಂದ ಹೊರ ನಡೆದರು.ಸರ್ಕಾರದ ಭಾಷಣ ಓದುವುದು ಗೌರ್ನರ್ ಕರ್ತವ್ಯ: ರಾಜ್ಯ ಸರ್ಕಾರ ಬರೆದುಕೊಟ್ಟ ಭಾಷಣವನ್ನು ಸದನದಲ್ಲಿ ಓದುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯವಾಗಿದ್ದು, ಒಂದೊಮ್ಮೆ ಸದನಕ್ಕೆ ಬಾರದಿದ್ದರೆ, ಆ ನಡೆಯನ್ನು ಸದನದಲ್ಲೇ ಖಂಡಿಸುವ ಹಾಗೂ ಛೀಮಾರಿ ಹಾಕುವ ಅವಕಾಶ ಸರ್ಕಾರಕ್ಕೆ ಇರುತ್ತದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ತಿಳಿಸಿದ್ದಾರೆ.ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡುವ ವಿಚಾರವಾಗಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಉದ್ಭವಿಸಿರುವ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಪ್ರೊ.ರವಿವರ್ಮ ಕುಮಾರ್, ರಾಜ್ಯಪಾಲರು ಕೇಂದ್ರ ಸರ್ಕಾರದಿಂದ ನಾಮ ನಿರ್ದೇಶನವಾದ ವ್ಯಕ್ತಿಯೇ ಹೊರತು ಚುನಾವಣೆಯಿಂದ ನೇಮಕವಾದ ವ್ಯಕ್ತಿಯಲ್ಲ. ರಾಜ್ಯ ಸರ್ಕಾರದ ನಿರ್ಧಾರಗಳ ಮೇಲೆ ತೀರ್ಮಾನ ಕೈಗೊಳ್ಳಲು ಅವರು ನ್ಯಾಯಾಧೀಶರಲ್ಲ. ಸಚಿವ ಸಂಪುಟ ನೀಡುವ ಸಲಹೆ-ಸೂಚನೆಗಳನ್ನು ರಾಜ್ಯಪಾಲರು ಪಾಲಿಸಲೇಬೇಕು ಎಂದು ತಿಳಿಸಿದರು.ಸಂವಿಧಾನದ ಪರಿಚ್ಛೇದ 376ರ ಪ್ರಕಾರ ಸಚಿವ ಸಂಪುಟ ಸಲಹೆಯಂತೆ ನಡೆದುಕೊಳ್ಳುವುದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರು ಸರ್ಕಾರದ ಆಹ್ವಾನದ ಮೇರೆಗೆ ಸದನಕ್ಕೆ ಬಾರದಿದ್ದರೆ, ಸದನಕ್ಕೆ ಅಪಚಾರ ಮಾಡಿದಂತಾಗುತ್ತದೆ. ಆ ಸಂದರ್ಭದಲ್ಲಿ ನನ್ನ ಪ್ರಕಾರ ಸದನ ಆಯೋಜಿಸಿ, ರಾಜ್ಯಪಾಲರ ನಡತೆ ಬಗ್ಗೆ ಸರ್ಕಾರ ಛೀಮಾರಿ ಹಾಕಬಹುದು.ರಾಜ್ಯಪಾಲರು ಸ್ವತಂತ್ರವಾದ ಅಧಿಕಾರ ಹೊಂದಿರುವುದಿಲ್ಲ. ರಾಜ್ಯ ಸರ್ಕಾರದ ಸಲಹೆಯಂತೆ ನಡೆದುಕೊಳ್ಳುವ ಜವಾಬ್ದಾರಿ ಹೊಂದಿರುತ್ತಾರೆ. ಸಂವಿಧಾನದ ಪರಿಚ್ಛೇದ 375 ಸದನದಲ್ಲಿ ರಾಜ್ಯಪಾಲರು ಭಾಷಣ ಮಾಡಬಹುದು. ಪರಿಚ್ಛೇದ 376 ಅಡಿ ಕಡ್ಡಾಯವಾಗಿ ಸದನದಲ್ಲಿ ಭಾಷಣ ಮಾಡಬೇಕು ಎಂದಿದೆ. ಆದ್ದರಿಂದ ರಾಜ್ಯ ಸರ್ಕಾರ ಬರೆದುಕೊಟ್ಟ ಭಾಷಣವನ್ನು ಸದನದಲ್ಲಿ ಓದುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯ. ಅದರಿಂದ ಹಿಂದೆ ಸರಿಯುವ ಅಧಿಕಾರ ಅವರಿಗೆ ಇಲ್ಲ ಎಂದು ವಿವರಿಸಿದರು.ಸಂಪುಟದ ಸಲಹೆ ಪಾಲಿಸಬೇಕು:
ಮುಖ್ಯಮಂತ್ರಿಗಳ ನೇಮಕ ಮತ್ತು ಸದನವನ್ನು ವಿಸರ್ಜನೆ ಮಾಡುವುದಲ್ಲಿ ರಾಜ್ಯಪಾಲರು ವಿವೇಚನಾಧಿಕಾರ ಹೊಂದಿದ್ದಾರೆ. ಆದರೆ, ಸದನ ರಚನೆಯಾದ ಮೇಲೆ ಸಚಿವ ಸಂಪುಟ ಕೊಡುವ ಪ್ರತಿಯೊಂದು ಸಲಹೆಯನ್ನು ರಾಜ್ಯಪಾಲರು ಕಡ್ಡಾಯವಾಗಿ ಪಾಲಿಸಬೇಕು. ಕೇಂದ್ರ ಸರ್ಕಾರದ ವಿರುದ್ಧ ಹೇಳಿಕೆ ಕೊಡಬೇಕು ಎಂದು ಸಚಿವ ಸಂಪುಟ ಸಲಹೆ-ಸೂಚನೆ ನೀಡಿದರೆ, ಅವರು ಆ ಭಾಷಣ ಓದಬೇಕು. ಏಕೆಂದರೆ, ಅವರು ಕರ್ನಾಟಕದ ರಾಜ್ಯಪಾಲರು ಆಗಿರುತ್ತಾರೆಯೇ ಹೊರತು ಕೇಂದ್ರ ಸರ್ಕಾರದ ಏಜೆಂಟ್ ಅಲ್ಲ. ಕೇಂದ್ರ ಸರ್ಕಾರವನ್ನು ರಕ್ಷಣೆ ಮಾಡಲು ರಾಜ್ಯಪಾಲ ಹುದ್ದೆಗೆ ನೇಮಕಗೊಂಡಿರುವುದಿಲ್ಲ. ಕರ್ನಾಟಕದ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳಲು ಅವರು ಈ ರಾಜ್ಯಕ್ಕೆ ಬಂದಿರುತ್ತಾರೆ. ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುವಂತೆ ನಡೆದುಕೊಂಡಿರುವ ಕೇಂದ್ರ ಸರ್ಕಾರವನ್ನು ಟೀಕಿಸುವ/ವಿಮರ್ಶಿಸುವ ಅಧಿಕಾರ ಸರ್ಕಾರ ಮತ್ತು ಸಚಿವ ಸಂಪುಟಕ್ಕೆ ಇದೆ ಎಂದು ವಿಶ್ಲೇಷಿಸಿದರು.ಸರ್ಕಾರದ ವೈಫಲ್ಯ ಮರೆಮಾಚಲು ಗೌರ್ನರ್ ಭಾಷಣ ಅಸ್ತ್ರ: ಅಭಿವೃದ್ಧಿ ಶೂನ್ಯ ಆಡಳಿತ, ಸಾಲು ಸಾಲು ಭ್ರಷ್ಟಾಚಾರ ಹಗರಣಗಳು ಹಾಗೂ ಆಡಳಿತಾತ್ಮಕ ವೈಫಲ್ಯ ಮರೆಮಾಚಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವ ರಾಜ್ಯಪಾಲರ ಭಾಷಣವನ್ನು ರಾಜಕೀಯ ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.ರಾಜ್ಯಪಾಲರು ಕಾಂಗ್ರೆಸ್ ಸರ್ಕಾರದ ವಕ್ತಾರರಲ್ಲ; ಅವರು ಸಂವಿಧಾನದ ರಕ್ಷಕರು. ಅವರ ಘನತೆಗೆ ಧಕ್ಕೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ಮೇಲೆ ನೇರ ದಾಳಿ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಸಂವಿಧಾನದ ವಿಧಿ 175 ಮತ್ತು 176ರ ಅಡಿ ರಾಜ್ಯಪಾಲರಿಗೆ ವಿಧಾನಸಭೆ ಮತ್ತು ವಿಧಾನಪರಿಷತ್ತನ್ನು ಉದ್ದೇಶಿಸಿ ಭಾಷಣ ಮಾಡುವ ಸ್ಪಷ್ಟ ಅಧಿಕಾರವಿದೆ. ಆದರೆ ಸರ್ಕಾರ ತಯಾರಿಸಿದ ಪಠ್ಯದಲ್ಲಿರುವ ಪ್ರತಿಯೊಂದು ಪದವನ್ನೂ ರಾಜ್ಯಪಾಲರು ಕಡ್ಡಾಯವಾಗಿ ಓದಲೇಬೇಕು ಎಂಬ ನಿಯಮ ಸಂವಿಧಾನದಲ್ಲಿಯೂ ಇಲ್ಲ, ವಿಧಾನಸಭೆ ಅಥವಾ ವಿಧಾನಪರಿಷತ್ತಿನ ನಿಯಮಗಳಲ್ಲಿಯೂ ಇಲ್ಲ ಎಂದು ಅವರು ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.ಸಂವಿಧಾನದ ವಿಧಿ 163ರ ಪ್ರಕಾರ ರಾಜ್ಯಪಾಲರು ಸಾಮಾನ್ಯವಾಗಿ ಸಚಿವ ಸಂಪುಟದ ಸಲಹೆಯಂತೆ ಕಾರ್ಯನಿರ್ವಹಿಸಬೇಕಾದರೂ, ಅವರಿಗೆ ನಿರ್ದಿಷ್ಟ ವಿವೇಚನಾಧಿಕಾರವನ್ನೂ ಸಂವಿಧಾನವೇ ನೀಡಿದೆ. ಸರ್ಕಾರ ತಯಾರಿಸಿದ ಭಾಷಣದಲ್ಲಿ ಅಸಹ್ಯಕರ, ದ್ವೇಷಪೂರಿತ ಅಥವಾ ಸಂವಿಧಾನ ವಿರೋಧಿ ಅಂಶಗಳಿದ್ದರೆ, ಅವನ್ನು ಓದದೇ ಬಿಡುವುದು ರಾಜ್ಯಪಾಲರ ಸಂವಿಧಾನಾತ್ಮಕ ಹಕ್ಕು ಎಂದು ಅವರು ಹೇಳಿದ್ದಾರೆ.ಸರ್ಕಾರದ ಸುಳ್ಳಿನ ಕಂತೆಗೆ ರಾಜ್ಯಪಾಲರು ಧ್ವನಿಯಾಗಬೇಕು ಎಂಬ ಕಡ್ಡಾಯ ನಿಯಮವನ್ನು ಕಾಂಗ್ರೆಸ್ ತನ್ನದೇ ಸಂವಿಧಾನದಲ್ಲಿ ಬರೆದುಕೊಂಡಿದ್ದರೆ ಬೇರೆ ಮಾತು. ಆದರೆ ಭಾರತದ ಸಂವಿಧಾನದಲ್ಲಿ ಅಂತಹ ಯಾವುದೇ ವಿಧಿಯಿಲ್ಲ. ಸರ್ಕಾರ ಇಂದು ದಿವಾಳಿಯ ಅಂಚಿನಲ್ಲಿ ನಿಂತಿದೆ. ಜನರ ಮುಂದೆ ಹೋಗಲು ಮುಖವಿಲ್ಲದೆ, ರಾಜ್ಯಪಾಲರ ಉನ್ನತ ಹಾಗೂ ಗೌರವಾನ್ವಿತ ಹುದ್ದೆಯನ್ನು ರಾಜಕೀಯ ಜಿದ್ದಾಜಿದ್ದಿಗೆ ಎಳೆದು ತರುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅವಮಾನ ಎಂದಿದ್ದಾರೆ.