ಸಾರಾಂಶ
ಬೆಂಗಳೂರು : ರಾಜ್ಯ ಸರ್ಕಾರದೊಂದಿಗಿನ ರಾಜ್ಯಪಾಲರ ಶೀತಲ ಸಮರ ಮುಂದುವರಿದಿದ್ದು, ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ತಿದ್ದುಪಡಿ ವಿಧೇಯಕಗಳನ್ನು ಎರಡನೇ ಬಾರಿಗೆ ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.
ಸಹಕಾರ ಕ್ಷೇತ್ರದ ಚುನಾವಣೆಗಳಲ್ಲಿ ಬದಲಾವಣೆ ತರುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ‘ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ, 2024’ ಮತ್ತು ‘ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, 2024’ ರೂಪಿಸಿ, ಕಳೆದ ವರ್ಷದ ಬೇಸಿಗೆ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅನುಮೋದನೆ ಪಡೆದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು. ಆದರೆ, ಈ ಎರಡೂ ತಿದ್ದುಪಡಿ ಮಸೂದೆಗಳಿಗೆ ಸಂಬಂಧಿಸಿದಂತೆ ಕಳೆದ ಆರು ತಿಂಗಳ ಹಿಂದೆ ರಾಜ್ಯಪಾಲರು ಸ್ಪಷ್ಟೀಕರಣ ಕೇಳಿ ಸರ್ಕಾರಕ್ಕೆ ಹಿಂದಿರುಗಿಸಿದ್ದರು. ಅದಕ್ಕೆ ಸರ್ಕಾರದಿಂದ ಸ್ಪಷ್ಟನೆ ನೀಡಲಾಗಿತ್ತಾದರೂ, ಆ ಸ್ಪಷ್ಟೀಕರಣ ತೃಪ್ತಿಕರವಾಗಿಲ್ಲ ಮತ್ತು ಒಪ್ಪಲೂ ಸಾಧ್ಯವಿಲ್ಲವೆಂದು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಹೀಗೆ ವಾಪಸು ಕಳುಹಿಸುವುದರ ಜತೆಗೆ ಪ್ರಸ್ತಾವಿತ ತಿದ್ದುಪಡಿಯನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಸಲಹೆಯನ್ನೂ ನೀಡಿದ್ದಾರೆ.
ಕಾಯ್ದೆಗಳಿಗೆ ತಿದ್ದುಪಡಿ ತರುವ ಉದ್ದೇಶ ಮನವರಿಕೆಯಾಗಿಲ್ಲ. ಅಲ್ಲದೆ, ಸ್ಪಷ್ಟೀಕರಣದಲ್ಲಿ ನೀಡಿದ ಕಾರಣಗಳು ತೃಪ್ತಿಕರವಾಗಿಲ್ಲ. ಹೀಗಾಗಿ ಇಡೀ ತಿದ್ದುಪಡಿಯನ್ನೇ ಮರುಪರಿಶೀಲನೆ ನಡೆಸುವಂತೆ ಸೂಚಿಸಿರುವ ರಾಜ್ಯಪಾಲರು, ತಾವು ಅವಲೋಕಿಸಿದ ಅಂಶಗಳಂತೆ ಮಾರ್ಪಾಡು ಮಾಡಿ ತಿದ್ದುಪಡಿ ಬಿಲ್ ಸಲ್ಲಿಸುವಂತೆಯೂ ತಿಳಿಸಿದ್ದಾರೆ.
ಚುನಾಯಿತ ಪ್ರತಿನಿಧಿಗಳ ಹಕ್ಕುಚ್ಯುತಿ : ಕರ್ನಾಟಕ ಸಹಕಾರಿ ಸಂಘಗಳ (ತಿದ್ದುಪಡಿ) ವಿಧೇಯಕ 2024ರಲ್ಲಿ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲಾಗಿದೆ. ಅಲ್ಲದೆ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಹಕ್ಕು ನೀಡುವ ಕುರಿತು ಪ್ರಸ್ತಾಪಿಸಲಾಗಿದೆ. ಆದರೆ, ನಾಮನಿರ್ದೇಶಿತರಿಗೆ ಮತದಾನದ ಹಕ್ಕು ನೀಡುವುದು ಸರಿಯಾದ ಕ್ರಮವಲ್ಲ. ಅದರಿಂದ ನಾಮನಿರ್ದೇಶಿತರಿಗೆ ಸಂಘದ ನಿಯಂತ್ರಣಕ್ಕೆ ಅವಕಾಶ ನೀಡಿದಂತಾಗಲಿದೆ. ಅಲ್ಲದೆ, ಈ ಕ್ರಮದಿಂದ ಚುನಾಯಿತ ಸದಸ್ಯರ ಹಕ್ಕುಗಳನ್ನು ಕಸಿದುಕೊಳ್ಳುವಂತಾಗಲಿದೆ. ಇದು ಸಹಕಾರಿ ಕ್ಷೇತ್ರದ ಸ್ವಾಯತ್ತೆಯನ್ನು ದುರ್ಬಲಗೊಳಿಸಲು ಕಾರಣವಾಗಲಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣಾ ಪ್ರಾಧಿಕಾರ ರದ್ದು ಸರಿಯಲ್ಲ: ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ - 2024ಕ್ಕೂ ಆಕ್ಷೇಪಿಸಿರುವ ರಾಜ್ಯಪಾಲರು, ತಿದ್ದುಪಡಿ ಮೂಲಕ ಸಹಕಾರಿ ಚುನಾವಣಾ ಪ್ರಾಧಿಕಾರ ರದ್ದು ಮಾಡಲು ಪ್ರಸ್ತಾಪಿಸಲಾಗಿದೆ. ಅದನ್ನು ಪ್ರಶ್ನಿಸಿರುವ ರಾಜ್ಯಪಾಲರು, ಸಹಕಾರ ಸಂಘಗಳ ಚುನಾವಣೆ ಸ್ವತಂತ್ರ ಮತ್ತು ನ್ಯಾಯಯುತವಾಗಿ ನಡೆಸಲು ಪ್ರಾಧಿಕಾರ ಅತ್ಯಗತ್ಯ. ಆರ್ಥಿಕ ಹೊರೆಯ ಕಾರಣ ನೀಡಿ ಸಹಕಾರಿ ಚುನಾವಣಾ ಪ್ರಾಧಿಕಾರವನ್ನೇ ರದ್ದುಗೊಳಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಈ ಅಂಶಗಳ ಕುರಿತಂತೆ ಮರುಪರಿಶೀಲನೆ ನಡೆಸಬೇಕು ಎಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ.