ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿಯವರು ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು. ಆದ್ದರಿಂದ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ರಾಜ್ಯ ಪೌರಾಡಳಿತ - ಹಜ್ ಸಚಿವ ರಹೀಮ್ ಖಾನ್ ಹೇಳಿದರು.
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯದಲ್ಲಿ ಬಿಜೆಪಿ ರಾಜ್ಯಪಾಲರನ್ನು ಮುಂದಿಟ್ಟುಕೊಂಡು ಆಟವಾಡುತ್ತಿದೆ. ದೆಹಲಿ, ಜಾರ್ಖಂಡ್‌ನಲ್ಲೂ ಇದೇ ರೀತಿಯಲ್ಲಿ ಹುನ್ನಾರ ನಡೆಸುತ್ತಿದ್ದಾರೆ. ಆದರೆ ಸೋಮವಾರ ಹೈಕೋರ್ಟ್‌ನಿಂದ ನಮ್ಮ ಪರ ತೀರ್ಮಾನ ಬರುತ್ತದೆ ಎಂಬ ವಿಶ್ವಾಸ ಇದೆ ಎಂದು ರಾಜ್ಯ ಪೌರಾಡಳಿತ - ಹಜ್ ಸಚಿವ ರಹೀಮ್ ಖಾನ್ ಹೇಳಿದರು.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿಯವರು ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು. ಆದ್ದರಿಂದ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದರು.ಈ ಆರೋಪ, ಹಗರಣವೆಲ್ಲ ಬಿಜೆಪಿ ಮಾಡಿರುವ ಪ್ರಿಪ್ಲಾನ್. ಕರ್ನಾಟಕದಲ್ಲಿ ಮೊದಲು ರಾಜ್ಯಪಾಲರನ್ನೇ ಬದಲು ಮಾಡಬೇಕು ಎಂಬುದು ನಮ್ಮ ಒತ್ತಾಯ, ರಾಜ್ಯಪಾಲರು ಸರಿಯಾಗಿ ಅಧ್ಯಯನ ಮಾಡದೆ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಹೈಕೋರ್ಟ್ ತೀರ್ಪಿನ ಮೇಲೆ ಕಾಂಗ್ರೆಸ್ ದೃಷ್ಟಿಯಿಟ್ಟಿದೆ. ಸೋಮವಾರದ ನಂತರ ಸರ್ಕಾರದ ಮತ್ತು ಪಕ್ಷದ ತೀರ್ಮಾನ ಹೇಳುತ್ತೇವೆ ಎಂದವರು ಹೇಳಿದರು.