ಸಾರಾಂಶ
ಹುಬ್ಬಳ್ಳಿ:
ನಾವು ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಸ್ಪಷ್ಟಪಡಿಸಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನದಲ್ಲಿ ರಾಜ್ಯಪಾಲರಿಗೆ ಅನೇಕ ಜವಾಬ್ದಾರಿ, ಗೌರವ ಕೊಟ್ಟಿದ್ದೇವೆ. ಒಂದು ಸರ್ಕಾರಕ್ಕೆ ಕಿರುಕುಳ ಕೊಡಬೇಕು. ಅನಾವಶ್ಯಕವಾಗಿ ಪತ್ರ ವ್ಯವಹಾರ ಮಾಡುವಂಥದ್ದನ್ನು ರಾಜ್ಯಪಾಲರು ಮಾಡಬಾರದು. ಯಾವುದೇ ಉತ್ತರ ಕೊಡಬೇಕಾದಾಗ ಅಧಿಕಾರಿಗಳಿಗೆ ಸಮಸ್ಯೆ ಆಗುತ್ತೆ. ಹೀಗಾಗಿ ಸಚಿವ ಸಂಪುಟ ಎದುರು ಬಂದ ನಂತರ ಹೋಗುವಂಥ ತೀರ್ಮಾನ ಕೈಗೊಂಡಿದ್ದೇವೆ ಅಷ್ಟೇ ಎಂದರು.
ರಾಜ್ಯಪಾಲರು ರಾಜಕೀಯವಾಗಿ ಕೆಲಸ ಮಾಡಬಾರದು. ಸಂವಿಧಾನ ಎತ್ತಿ ಹಿಡಿದು ನಡೆದುಕೊಳ್ಳಬೇಕು. ಸರ್ಕಾರ ಜೊತೆ ಕೈ ಜೋಡಿಸಬೇಕು. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಪಾಲರು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.ಸಿಎಂ ರಾಜೀನಾಮೆಗೆ ಕೋಳಿವಾಡ ಆಗ್ರಹಿಸಿರುವ ಕುರಿತು, ಅವರೀಗ ರಾಜಕೀಯ ಕ್ಷೇತ್ರದಲ್ಲಿಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿದೆ ಎಂದರು.
ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದಲ್ಲಿರುವುದರಿಂದ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಆದರೆ ಸಿಎಂ ಯಾವುದೇ ಅಧಿಕಾರ ದುರುಪಯೋಗ ಮಾಡಿಲ್ಲ. ಕಾನೂನು ಪ್ರಕಾರ ವಿಚಾರಣೆ ನಡೆಯಲಿ. ಅವರು ಹೋರಾಟ ಮಾಡಲಿ. ನಾವು ರಾಜ್ಯವನ್ನು ಕಟ್ಟುವ ಕೆಲಸ ಮಾಡುತ್ತೇವೆ. ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಯಾವ ಸರ್ಕಾರ ಉಳಿಯಬಾರದು, ಸರ್ಕಾರ ನಡೆಸಲು ಬಿಡದಂತೆ ಅದು ನಡೆಯುತ್ತಿದೆ ಎಂದರು.ಮುಡಾ ಅಸ್ತ್ರ ವ್ಯವಸ್ಥಿತವಾದ ಸಂಚು. ಸಂಚು ಮಾಡುವುದರಲ್ಲಿ ಬಿಜೆಪಿಗರು ನಿಸ್ಸೀಮರು ಎಂದ ಗುಂಡೂರಾವ್, ಬಿಜೆಪಿ ಎರಡನೇ ಹಂತದ ಹೋರಾಟ ಮಾಡಲಿ. ವಿರೋಧ ಪಕ್ಷದಲ್ಲಿದ್ದಾಗ ಹೋರಾಟ ಮಾಡಬೇಕು ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ರಿಪೋರ್ಟ್‌ಗಳಿವೆ. ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಕುಮಾರಸ್ವಾಮಿ ಬಾವಮೈದುನನಿಗೆ ಯಡಿಯೂರಪ್ಪ ಸಿಎಂ ಇದ್ದಾಗ ಖುದ್ದಾಗಿ ಸಹಿ ಮಾಡಿ, ಡಿನೋಟಿಫೈ ಮಾಡಿದ್ದಾರೆ. ಈ ಪ್ರಕರಣದಲ್ಲಿ ಯಡಿಯೂರಪ್ಪ, ಕುಮಾರಸ್ವಾಮಿ, ವಿಜಯೇಂದ್ರ, ಬೊಮ್ಮಾಯಿ ಎಲ್ಲರಿಗೂ ತಕ್ಕ ಉತ್ತರ ಸಿಗುತ್ತದೆ ಎಂದರು.ಸಿದ್ದರಾಮಯ್ಯ ವಿಚಾರವನ್ನು ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಳಸಿಕೊಂಡರೆ ಯಾವುದೇ ಪ್ರಯೋಜನವಿಲ್ಲ. ಹರಿಯಾಣ, ಮಹಾರಾಷ್ಟ್ರದಲ್ಲಿ ಇದರ ಪರಿಣಾಮ ಬೀರುವುದಿಲ್ಲ. ಬಿಜೆಪಿಗೆ ಪಾರ್ಲಿಮೆಂಟ್‌ನಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು.