ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯರಾಜ್ಯ ಸರ್ಕಾರ ರೈತರಿಗಾಗಿರುವ ನಷ್ಟವನ್ನು ಪರಿಣಾಮಕಾರಿಯಾಗಿ ಭರಿಸಿಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಆರೋಪಿಸಿದರು.
ನಗರದ ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ೧೫ನೇ ವಾರದ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲಾ ರೈತ ಹಿರತಕ್ಷಣಾ ಸಮಿತಿಯಿಂದ ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ಕುರಿತು ನಾವು ನಿರಂತರ ಧರಣಿ, ಉಪವಾಸ ಸತ್ಯಾಗ್ರಹ, ರಸ್ತೆ ತಡೆ, ಮುಂತಾದ ಹೋರಾಟ ನಡೆಸಿಕೊಂಡು ರಾಜ್ಯಸರ್ಕಾರದ ಗಮನ ಸೆಳೆದರೂ ಕೂಡ ಆಳುವವರು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ತೀವ್ರವಾಗಿ ಖಂಡಿಸಿದರು.ಕೆಆರ್‌ಎಸ್ ಜಲಾಶಯದಲ್ಲಿ ತಮಿಳುನಾಡಿಗೆಂದೇ ನೀರನ್ನು ಸಂಗ್ರಹಿಸಿ ಅವರು ಕೇಳಿದಾಗ ಕದ್ದು ಮುಚ್ಚಿ ನೀರು ಬಿಡುವ ಸರ್ಕಾರದ ನಡೆ ಖಂಡನೀಯ. ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿರುವ ಜಿಲ್ಲೆಯ ರೈತರ ಬೆಳೆಗಳಿಗೆ ನೀರು ಬಿಡಿ ಎಂದು ಸಾಕಷ್ಟು ಮನವಿ ಮಾಡಿದರೂ, ನಾಲೆಗಳ ಮೂಲಕ ನೀರು ಹರಿಸದೇ ರೈತರ ಬೆಳೆ ನಾಶ ಮಾಡಲಾಗಿದೆ. ಸರ್ಕಾರದ ಈ ಧೋರಣೆಯನ್ನು ಖಂಡಿಸುತ್ತೇವೆ ಎಂದರು.
ಕಳೆದ ಸಾಲಿನ ಬೆಳೆ ನಷ್ಟ, ಈಗ ಆಗಿರುವ ಬೆಳೆ ನಷ್ಟ ಮತ್ತು ಮುಂದೆ ಬೆಳೆ ಒಡ್ಡಲಾಗದಿರುವ ನಷ್ಟಕ್ಕೂ ಸರ್ಕಾರ ಸೂಕ್ತ ಪರಿಹಾರ ಭರಿಸಿಕೊಡಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿ ಹೊತ್ತು ಮಾತನಾಡಬೇಕಿದೆ. ಇದು ರೈತರ ಬದುಕಿನ ಪ್ರಶ್ನೆ ಎಂಬುದನ್ನು ಸಚಿವರು ಮರೆಯಬಾರದು ಎಂದು ಕಿಡಿಕಾರಿದರು.ಜಿಲ್ಲೆಯಾದ್ಯಂತ ಈಗ ಕೆರೆ-ಕಟ್ಟೆಗಳ ಹೂಳು ತೆಗೆಯಲಾಗುತ್ತಿದೆ. ಆದರೆ, ಹೂಳು ತೆಗೆಯುತ್ತಿರುವ ರೀತಿ ಅವೈಜ್ಞಾನಿಕವಾಗಿದ್ದು, ಹಳ್ಳ ಗುಂಡಿಗಳಿಂದ ಕೂಡಿದೆ. ಸಮತಟ್ಟಾಗಿ ಹೂಳು ತೆಗೆಯುವುದರಿಂದ ನೀರು ತುಂಬಿದಾಗ ಯಾವುದೇ ಅಪಾಯ ಸಂಭವಿಸುವುದಿಲ್ಲ. ಈ ಬಗ್ಗೆ ಜಿಲ್ಲಾಕಾರಿಗಳು ಕೂಡಲೇ ಸುತ್ತೋಲೆಯೊಂದನ್ನು ಹೊರಡಿಸಿ ಹೂಳು ತೆಗೆಯುವವರು ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರಸ್ತುತ ಸುರಿದಿರುವ ೨ ಸುತ್ತಿನ ಮಳೆಯಿಂದ ರೈತರ ಬೆಳೆಗಳಿಗೆ ಯಾವುದೇ ಪ್ರಯೋಜನವಾಗಿಲ್ಲ. ಆದರೆ, ಕೆಲವರು ಮಂಡ್ಯದಲ್ಲಿ ಮಳೆಯಾಗುತ್ತಿದೆ. ಇನ್ನೇನು ಸಮಸ್ಯೆ ಇಲ್ಲ ಎಂದುಕೊಂಡಿದ್ದಾರೆ. ಅವರು ವಾಸ್ತವವನ್ನು ಪರಿಗಣಿಸಿ ಮಾತನಾಡಬೇಕು ಎಂದ ಅವರು, ಸರ್ಕಾರ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಕರವೇ, ದಸಂಸ, ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘ, ಜಯಕರ್ನಾಟಕ ಪರಿಷತ್, ಮಹಿಳಾ ಸಂಘಟನೆ, ಮಂಡ್ಯ ವಿವಿ ವಿದ್ಯಾರ್ಥಿನಿಯರು ಪಾಲ್ಗೊಂಡು ಬಸ್ ಪ್ರಯಾಣಿಕರಿಗೆ ಕರಪತ್ರ ವಿತರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಮುಖಂಡರಾದ ಕೆ. ಬೋರಯ್ಯ, ಇಂಡುವಾಳು ಚಂದ್ರಶೇಖರ್, ಕೃಷ್ಣಪ್ರಕಾಶ್, ಮುದ್ದೇಗೌಡ, ಕರವೇ ಕೆ.ಟಿ. ಶಂಕರೇಗೌಡ, ಎಸ್. ನಾರಾಯಣ್, ಬೋರಲಿಂಗೇಗೌಡ, ನಾರಾಯಣಸ್ವಾಮಿ, ಕನ್ನಡ ಸೇನೆ ಮಂಜುನಾಥ್, ಎ.ಎಲ್. ಬಸವೇಗೌಡ, ಇಂಡುವಾಳು ಬಸವರಾಜು, ಎಂ.ಎಲ್. ತುಳಸೀಧರ್, ಫಯಾಜ್, ಮಹೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.