ಸರ್ಕಾರಿ ನೌಕರರ ಚುನಾವಣೆ: ಚಿದ್ರಿ, ಗಂದಗೆ ಪ್ಯಾನಲ್‌ ಮಧ್ಯ ಬಿರುಸಿನ ಸ್ಪರ್ಧೆ

| Published : Nov 17 2024, 01:18 AM IST

ಸರ್ಕಾರಿ ನೌಕರರ ಚುನಾವಣೆ: ಚಿದ್ರಿ, ಗಂದಗೆ ಪ್ಯಾನಲ್‌ ಮಧ್ಯ ಬಿರುಸಿನ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಚುನಾವಣೆಯ ಮತದಾನ ಪ್ರಕ್ರಿಯೆ ಬಹುತೇಕ ಮುಗಿದು ಮತ ಎಣಿಕೆ ಜಯಗಳಿಸಿದವರ ಘೋಷಣೆ ಒಂದೊಂದಾಗಿ ನಡೆಯುತ್ತಿದ್ದು, ತಡರಾತ್ರಿಯ ವರೆಗೆ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಚುನಾವಣಾಧಿಕಾರಿಗಳಾದ ಬಸವರಾಜ ಸ್ವಾಮಿ ಅವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಬೀದರ್‌

ಸರ್ಕಾರಿ ನೌಕರರ ಸಂಘದ ನಿರ್ದೇಶಕರುಗಳು, ತಾಲೂಕು ಅಧ್ಯಕ್ಷರುಗಳ ಹಾಗೂ ರಾಜ್ಯ ಪರಿಷತ್‌ ಸ್ಥಾನಗಳು ಸೇರಿದಂತೆ ಮತ್ತಿತರಕ್ಕೆ ಶನಿವಾರ ಭರಪೂರ ಮತದಾನ ಪ್ರಕ್ರಿಯೆ ನಡೆದು ಹಾಲಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹಾಗೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸೋಮಶೇಖರ ಬಿರಾದರ ಚಿದ್ರಿ ಅವರ ಬಣದ ನಡುವೆ ತುರುಸಿನ ಸ್ಪರ್ಧೆ ಕಂಡುಬಂದಿದೆ.ಒಟ್ಟು 66 ಸ್ಥಾನಗಳ ಪೈಕಿ 36 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದ್ದು ಇನ್ನುಳಿದ 30 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಶನಿವಾರ ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆದು ತದನಂತರ ಮತ ಎಣಿಕೆ ಆರಂಭವಾಗಿದೆ. ಮೊದಲ ಸುತ್ತಿನಲ್ಲಿ ಹೊರಬಿದ್ದ 10 ಜನರ ಆಯ್ಕೆಯ ಘೋಷಣೆಯಲ್ಲಿ 8 ಜನ ಸೋಮಶೇಖರ ಬಿರಾದರ ಪ್ಯಾನಲ್‌ ಪರವಾದವರು ಎಂಬ ಮಾತುಗಳು ಗಂದಗೆ ಪ್ಯಾನಲ್‌ ಅವರನ್ನು ಚಿಂತೆಗೀಡು ಮಾಡಿತ್ತು. ಇನ್ನು ಮತ ಎಣಿಕೆ ಪ್ರಕ್ರಿಯೆ ಮದ್ಯ ರಾತ್ರಿಯ ವರೆಗೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.ಅದೇನೇ ಇದ್ದರೂ ತಾಲೂಕು ಅಧ್ಯಕ್ಷರುಗಳು ಹಾಗೂ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿರುವವರು ಮತ್ತು ಇದೀಗ ಆಯ್ಕೆಯಾಗಿ ಘೋಷಣೆಯಾಗುವವರು ಯಾವ ಪ್ಯಾನಲ್‌ನತ್ತ ತಮ್ಮ ಒಲವು ತೋರುತ್ತಾರೆ, ಯಾರನ್ನು ಅಧ್ಯಕ್ಷರನ್ನಾಗಿಸುತ್ತಾರೆ ಎಂಬುವದು ಮುಂದಿನ ದಿನಗಳಲ್ಲಿ ನಡೆಯುವ ಬೆಳವಣಿಗೆಗಳ ಮೇಲೆ ನಿಂತಿದ್ದು ಜಿಲ್ಲಾಧ್ಯಕ್ಷರ ಆಯ್ಕೆಯ ಚುನಾವಣೆ ಡಿಸೆಂಬರ್‌ 16ರಂದು ನಡೆಯಲಿದೆ.ಶೇ. 93ರಷ್ಟು ಮತದಾನ

ರಾಜ್ಯ ಸರ್ಕಾರಿ ನೌಕರರ ಸಂಘದ ಬೀದರ್ ಜಿಲ್ಲಾ ಶಾಖೆಯ ಚುನಾವಣೆಯಲ್ಲಿ ಬೀದರ್ ಜಿಲ್ಲಾ ಕೇಂದ್ರದಲ್ಲಿನ ಒಟ್ಟು 2913 ಮತದಾರರ ಪೈಕಿ 2716 ಮತದಾರರು ಮತ ಚಲಾಯಿಸಿದ್ದು ಶೇ. 93ರಷ್ಟು ಮತದಾನ ದಾಖಲಾಗಿದೆ.ಹುಲಸೂರು ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ನಾಗರಾಜ ಹಾವಣ್ಣಹುಲಸೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹುಲಸೂರು ತಾಲೂಕು ಶಾಖೆಯ 2024- 2029ನೇ ಸಾಲಿನ ವಿವಿಧ ಸ್ಥಾನಕ್ಕೆ ಚುನಾವಣೆ ಜರುಗಿ ಅಧ್ಯಕ್ಷರಾಗಿ ನಾಗರಾಜ ಹಾವಣ್ಣ ಅಧ್ಯಕ್ಷರಾಗಿ ಆಯ್ಕೆಯಾದರು.

ತಾಲೂಕು ಯೋಜನಾ ಶಾಖೆಯ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್‌ ಸ್ಥಾನಗಳ ಚುನಾವಣೆ ಶನಿವಾರ ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಾಲಹಳ್ಳಿ ರಸ್ತೆಯ ಶಾಲೆಯಲ್ಲಿ ಶೇ.100ರಷ್ಟು ಮತದಾನ ಜರುಗಿತು.

ಯೋಜನಾ ಶಾಖೆಯ ಅಧ್ಯಕ್ಷ ಸ್ಥಾನಕ್ಕಾಗಿ ನಾಗರಾಜ ಹಾವಣ್ಣ ಹಾಗೂ ವಿಜಯಕುಮಾರ್‌ ಪಟ್ನೆ ಸ್ಪರ್ಧಿಸಿದ್ದರು ಆದರೆ ಇಲ್ಲಿ ವಿಜಯಕುಮಾರ್‌ ಪಟ್ನೆ 6 ಮತಗಳು ಹಾಗೂ ನಾಗರಾಜ ಹಾವಣ್ಣ ಅವರು 9 ಮತಗಳು ಪಡೆದು 3 ಮತಗಳ ಅಂತರದಿಂದ ಜಯಗಳಿಸಿದರು. ಖಜಾಂಚಿ ಸ್ಥಾನಕ್ಕಾಗಿ ರಾಜಕುಮಾರ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಅದೇ ರೀತಿ ರಾಜ್ಯ ಪರಿಷತ್ ಸ್ಥಾನಕ್ಕಾಗಿ ಭೀಮಾಶಂಕರ ಆದೇಪ್ಪ ಹಾಗೂ ಡಾ. ರಾ‍ವಸಾಬ್‌ ಪಾಟೀಲ್‌ ಸ್ಪರ್ಧೆ ಮಾಡಿದ್ದು, ಡಾ. ರಾವಸಾಬ್‌ ಪಾಟೀಲ್‌ ಅವರು 7 ಮತಗಳನ್ನು ಪಡೆದಿದ್ದು, ಭೀಮಾಶಂಕರ ಆದೇಪ್ಪ ಅವರು 8 ಮತಗಳನ್ನು ಪಡೆಯುವ ಮೂಲಕ ರಾಜ್ಯ ಪರಿಷತ್ತಿನಲ್ಲಿ ಭೀಮಾಶಂಕರ ಆದೇಪ್ಪ ಅವರು 1 ಮತದ ಅಂತರದಿಂದ ಜಯ ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ರವಿಶಂಕರ ಬಿರಾದಾರ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳಾದ ಹಬೀಬಸಾಬ್‌ ಅವರು ತಿಳಿಸಿರುತ್ತಾರೆ.

ಓಂಕಾರ ಪಟ್ನೆ, ಸೂರ್ಯಕಾಂತ ಚಿಲ್ಲಾಬಟ್ಟೆ, ರಾಮಲಿಂಗ ಸಾಯಂಗಾಂವೆ, ವಿದ್ಯಾಸಾಗರ ಬನಸೂಡೆ, ಸಂತೋಷ ಮೋರೆ, ಜಗದೀಶ, ಸಂಗಮೇಶ ಕುಡಂಬಲೆ ಸೇರಿದಂತೆ ಹಲವರು ಹರ್ಷವ್ಯಕ್ತಪಡಿಸಿದರು.ಬಾಲ್ಕಿ: ಚಂದ್ರಶೇಖರ ಬನ್ನಾಳೆಗೆ ಅಧ್ಯಕ್ಷ ಪಟ್ಟ

ಭಾಲ್ಕಿ: ತಾಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷ ರಾಜಪ್ಪ ಪಾಟೀಲ್‌ ನೇತೃತ್ವದ ಡಾ. ಅಬ್ದುಲ್‌ ಕಲಾಂ ಪ್ಯಾನಲ್‌ ಭರ್ಜರಿ ಜಯ ಗಳಿಸಿದೆ.

ತಾಲೂಕು ಅಧ್ಯಕ್ಷರಾಗಿ ತಾ.ಪಂನ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ, ಖಜಾಂಚಿಯಾಗಿ ಸುನೀಲ ಬಿರಾದಾರ್‌ ಮತ್ತು ರಾಜ್ಯ ಪರಿಷತ್‌ ಸದಸ್ಯರಾಗಿ ಬಸವರಾಜ ಬಂಗಾರೆ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಎಸ್‌ ಪಾಟೀಲ್‌ ತಿಳಿಸಿದ್ದಾರೆ.ಪಟ್ಟಣದ ತಾಲೂಕು ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಶನಿವಾರ ತಾಲೂಕು ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್‌ ಸ್ಥಾನಕ್ಕೆ ಚುನಾವಣೆ ನಡೆಯಿತು. ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ಬನ್ನಾಳೆ, ನಿರಂಜಪ್ಪ ಪಾತ್ರೆ, ಖಜಾಂಚಿ ಸ್ಥಾನಕ್ಕೆ ಸುನೀಲ ಬಿರಾದಾರ, ಮುರಾರಿ ಮತ್ತು ರಾಜ್ಯ ಪರಿಷತ್‌ ಸ್ಥಾನಕ್ಕೆ ಬಸವರಾಜ ಬಂಗಾರೆ, ಸ್ವಾಮಿ ವಿವೇಕಾನಂದ ನಾಮಪತ್ರ ಸಲ್ಲಿಸಿದ್ದರು.

32 ಸದಸ್ಯರ ಬಲ ಹೊಂದಿರುವ ಸರ್ಕಾರಿ ನೌಕರರ ಸಂಘದಲ್ಲಿ ಚಂದ್ರಶೇಖರ ಬನ್ನಾಳೆ 20, ಸುನೀಲ ಬಿರಾದಾರ ಮತ್ತು ಬಸವರಾಜ ಬಂಗಾರೆ ತಲಾ 20 ಮತಗಳು ಪಡೆದು ಗೆಲುವು ಸಾಧಿಸಿದ್ದರು.ಈ ಸಂದರ್ಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ರಾಜಪ್ಪ ಪಾಟೀಲ್‌, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಲ್ಮಂಡಗೆ, ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ಪ್ರಮುಖರಾದ ವಿಲಾಸ ಮೋರೆ, ಸಂಗಮೇಶ ಹುಣಜೆ ಮದಕಟ್ಟಿ ಸೇರಿದತೆ ಮತ್ತಿತರರು ಇದ್ದರು.

ವಿಜಯೋತ್ಸವ :ರಾಜಪ್ಪ ಪಾಟೀಲ್‌ ನೇತೃತ್ವದ ಪ್ಯಾನಲ್‌ಗೆ ಗೆಲುವು ಖಚಿತವಾಗುತ್ತಿದ್ದಂತೆಯೇ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಬೆಂಬಲಿಗರು ನೂತನ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್‌ನ ಸದಸ್ಯರಿಗೆ ಸನ್ಮಾನಿಸಿ, ಪಟ್ಟಣದ ಎಲ್ಲ ಮಹಾತ್ಮರ ವೃತ್ತಗಳಿಗೆ ಭೇಟಿ ನೀಡಿ ಮಾಲಾರ್ಪಣೆ ಸಲ್ಲಿಸಿ, ಗೌರವ ಸಮರ್ಪಿಸಿದರು.