ಸಾರಾಂಶ
ಕ್ಯೂಆರ್ ಕೋಡ್ ಬಳಸಿ ಹಣ ದುರ್ಬಳಕೆ ಮಾಡಿಕೊಂಡಿರುವುದು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಸೇರಿದ ನಗರದ ಮಯೂರ ಬಾಲಭವನದ ಕ್ಯಾಂಟೀನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಲ್ವರು ಸಿಬ್ಬಂದಿ ನಿಗಮದ ಕ್ಯೂ ಆರ್. ಕೋಡ್ ಬಳಸದೇ ವೈಯಕ್ತಿಕ ಕ್ಯೂಆರ್ ಕೋಡ್ ಬಳಸಿ ಲಕ್ಷಾಂತರ ರುಪಾಯಿ ದುರುಪಯೋಗ ಮಾಡಿಕೊಂಡಿದ್ದಾರೆ.ಈ ನಾಲ್ವರು ಹಣವನ್ನು ವರ್ಗಾಯಿಸಿಕೊಂಡಿರುವುದು ಬ್ಯಾಂಕ್ ವೈಯಕ್ತಿಕ ಖಾತೆಯಿಂದ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಗೂ ಎಫ್‌ಐಆರ್ ದಾಖಲಿಸುವಂತೆ ನಿಗಮದ ವ್ಯವಸ್ಥಾಪಕರು ಆದೇಶಿಸಿದ್ದಾರೆ.
ಹಣ ದುರುಪಯೋಗ ಗಮನಕ್ಕೆ ಬಂದ ನಂತರ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ಆಂತರಿಕ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು. ತನಿಖೆ ವೇಳೆ ಅವರ ವೈಯಕ್ತಿಕ ಬ್ಯಾಂಕ್ ಖಾತೆ ಪರಿಶೀಲನೆಯಲ್ಲಿ ಯಪಿಐ ಮೂಲಕ ಹಣ ಪಡೆದಿರುವುದು ಕಂಡು ಬಂದಿತ್ತು. ಹೀಗಾಗಿ ಕಾಯಂ ಸಿಬ್ಬಂದಿಯನ್ನು ಅಮಾನತು ಹಾಗೂ ಗುತ್ತಿಗೆ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ.ನಾಲ್ವರಿಂದ ದುರುಪಯೋಗ
ಬಾಲಭವನದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಕೆ.ರಾಮಚಂದ್ರ ನಿಗಮದ ಕ್ಯೂ ಆರ್ ಕೋಡ್ ಬಳಸದೇ ವೈಯಕ್ತಿಕ ಕ್ಯೂಆರ್ ಕೋಡ್ ಬಳಸಿ ₹31,917 ಪಡೆದಿರುವುದು ಪತ್ತೆಯಾಗಿದೆ. ಅದೇ ರೀತಿ ಸಹಾಯಕ ಉಗ್ರಾಣಿಕ ಕೆ.ವೆಂಕಟೇಶ್ ಸಹ ₹48,642 ದುರುಪಯೋಗ ಮಾಡಿಕೊಂಡಿದ್ದು, ಅವರನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.ಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅಬ್ದುಲ್ ವಾಜಿದ್ ₹2,66,215 ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಇವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಇನ್ನು ನಿಗಮದ ಕಾಯಂ ನೌಕರ ಕೋದಂಡರಾಮಯ್ಯ ಎಂಬುವರು ಕಳೆದ ಆರು ತಿಂಗಳಲ್ಲಿ ₹3920 ದುರುಪಯೋಗ ಮಾಡಿಕೊಂಡಿದ್ದಾರೆ.