ಸಾರಾಂಶ
ಚಿತ್ರದುರ್ಗ: ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಸೌಲಭ್ಯಗಳ ಕಬಳಿಸುವವರ ಮೇಲೆ ಕ್ರಮಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ಉದಾಸೀನ ತೋರುತ್ತಿದೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ವಾಲ್ಮೀಕಿ ನಾಯಕ ನೌಕರರ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು ನಕಲಿ ಪ್ರಮಾಣ ಪತ್ರ ತಡೆಯಲು ಸರ್ಕಾರ ಏನು ಮಾಡುತ್ತಿದೆ ಎಂದು ಕಾದು ಕುಳಿತುಕೊಳ್ಳುವುದರ ಬದಲು ಸಮುದಾಯದ ಜನರು ಎಚ್ಚರಗೊಳ್ಳುವ ಅಗತ್ಯವಿದೆ ಎಂದರು.ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದ್ದು ಉದ್ಘಾಟನೆಗೆ ಗಳಿಗೆಯ ಇಡೀ ದೇಶ ಎದಿರು ನೋಡುತ್ತಿದೆ. ರಾಮನಿಕೆ ಸಿಕ್ಕಷ್ಟು ಪ್ರಾತಿನಿಧ್ಯ ರಾಮಾಯಣ ಬರೆದ ವಾಲ್ಮೀಕಿ, ಬೇಡರ ಕಣ್ಣಪ್ಪ, ಏಕಲವ್ಯಗೆ ಸಿಕ್ಕಿಲ್ಲ. ಸರ್ಕಾರಗಳ ಆಲೋಚನಾ ಕ್ರಮಗಳು ಬದಲಾಗಬೇಕಿದೆ. ರಾಜ್ಯ ಸರ್ಕಾರ ವಾಲ್ಮೀಕಿ ಜಯಂತಿ ಆಚರಿಸಿ ಸುಮ್ಮನಾಗುತ್ತಿದೆ. ಮದಕರಿ ನಾಯಕನ ಹೆಸರಲ್ಲಿ ಥೀಂ ಪಾರ್ಕ್ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಭರವಸೆ ಕೂಡಾ ಈಡೇರಿಲ್ಲವೆಂದು ಶ್ರೀಗಳು ಅಸಮಧಾನ ವ್ಯಕ್ತಪಡಿಸಿದರು.
ಪರಿಶಿಷ್ಟ ಪಂಗಡಕ್ಕೆ ಮೀಸಲು ಪ್ರಮಾಣ ಹೆಚ್ಚಳ ಮಾಡುವ ಸಂಬಂಧ ನಡೆಸಿದ ಹೋರಾಟಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿ ಹೆಚ್ಚಳ ಮಾಡಿತ್ತು. ಆದರೆ ಅದಿನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಕಾನೂನು ತೊಡಕುಗಳ ನಿವಾರಣೆಯಾಗಿಲ್ಲ.ಆದರೆ ಎಂದಿಗೂ ಬೀದಿಗಿಳಿದು ಕೂಗದೆ, ಅರ್ಜಿ ಹಾಕದೇ ಇರುವ ಸಮುದಾಯಗಳಿಗೆ ಶೇ.10 ರಷ್ಟು ಮೀಸಲು ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಶ್ರೀಗಳು ಪ್ರಶ್ನಿಸಿದರು.ನಾಯಕ ಸಮುದಾಯ ಮಧ್ಯಕರ್ನಾಟಕದಲ್ಲಿ ವಿಸ್ತೃತವಾಗಿ ಹರಡಿದೆ. ಕಲ್ಯಾಣ ಕರ್ನಾಟಕಕ್ಕೆ 371 ಜೆ ವಿಶೇಷ ಸ್ಥಾನ ಮಾನ ನೀಡಿದಂತೆ ಮಧ್ಯ ಕರ್ನಾಟಕಕ್ಕೂ ಅಂತಹದ್ದೊಂದು ಸೌಲಭ್ಯ ನೀಡಬೇಕು. ಆಗ ಮಾತ್ರ ಸಮುದಾಯ ಅಭಿವೃದ್ದಿಯಾಗಲು ಸಾಧ್ಯವಿದೆ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ ಚಿತ್ರದುರ್ಗ ಜಿಲ್ಲೆಗೆ 371 ಜೆ ಮಾದರಿಯ ಸ್ಥಾನ ಮಾನ ಸಿಗಲೇಬೇಕು. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ. ಬುಡಕಟ್ಟು ಜನರ ಅಭ್ಯುದಯಕ್ಕೆ ಸಂಬಂಧಿಸಿದಂತೆ ಮೊಳಕಾಲ್ಮುರು ತಾಲೂಕಿನಲ್ಲಿ ಸಮೀಕ್ಷೆನಡೆಯುತ್ತಿದೆ. ಈ ಸಮೀಕ್ಷೆಗಳು ಇತರ ಕಡೆ ನಡೆಯಬೇಕು. ಸಮುದಾಯದ ಮುಖಂಡರಾದ ಎಲ್.ಜಿ.ಹಾವನೂರು ಹಾಗೂ ಹಲ್ಲಿಪುರ ಹನುಮಂತಪ್ಪ ಅವರ ಹೆಸರಿನಡಿ ಪ್ರತಿಭಾವಂತರ ಗುರುತಿಸಬೇಕೆಂದರು.ಶಾಸಕ ಟಿ.ರಘುಮೂರ್ತಿ ಮಾತನಾಡಿ, 371ಜೆ ಮಾದರಿಯ ಮೀಸಲು ಮಧ್ಯ ಕರ್ನಾಟಕಕ್ಕೆ ಬೇಕಿದೆ. ಇದಕ್ಕಾಗಿ ಹೋರಾಟಗಳು ರೂಪುಗೊಳ್ಳಬೇಕಿದ್ದು ಪಕ್ಷಾತೀತ ನಾಯಕತ್ವ ಅಗತ್ಯವಿದೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಆಶಿಸಿದರು.
ಸಚಿವ ಸತೀಶ್‌ಜಾರಕಿಹೊಳಿ ಅವರ ಪುತ್ರ ರಾಹುಲ್‌ಜಾರಕಿಹೊಳಿ ಮಾತನಾಡಿದರು. ಸಂಘದ ಅಧ್ಯಕ್ಷಡಾ.ಎಚ್.ಗುಡದೇಶ್ವರಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಪಿಎಚ್‌ಡಿ ಪದವಿ ಪುರಸ್ಕೃತರನ್ನು ಗೌರವಿಸಲಾಯಿತು. ನಿವೃತ್ತ ಡಿಐಜಿ ಎಂ.ಎನ್.ನಾ ಗರಾಜ್, ಉದ್ಯಮಿ ಪಿ.ವಿ.ಅರುಣ್ ಕುಮಾರ್, ಡಾ.ಎನ್.ಬಿ.ಪ್ರಹ್ಲಾದ್,ಪತ್ರಕರ್ತ ಎಂ.ಎನ್.ಅಹೋಬಲಪತಿ, ಥ್ರೋಬಾಲ್ ಆ ಟಗಾರ ಆರ್.ಹೊಯ್ಸಳ,ಶಿಕ್ಷಕಿ ಕೆ.ಒ.ರತ್ನಮ್ಮ, ಡಾ.ಎಚ್.ಟಿ.ತೇಜಸ್ವಿ, ಡಾ.ಎಸ್.ಕೆ.ಮೋಹನ್, ಮುಖ್ಯಲೆಕ್ಕಾಧಿ ಕಾರಿ ಸಿ.ಜೆ.ಶ್ರೀನಿವಾಸ್,ನಾಟಕ ಅಕಾಡೆಮಿ ಸದಸ್ಯ ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ನಾಯಕ ಸಮಾಜದ ಅಧ್ಯ ಕ್ಷ ಎಚ್.ಜೆ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಬಿ.ಕಾಂತರಾಜ್, ಮದಕರಿ ನಾಯಕ ವಿದ್ಯಾಸಂಸ್ಥೆಯ ಎಸ್.ಸಂದೀಪ್, ನಾಗೇಂದ್ರಬಾಬು, ಡಾ.ಎಚ್.ಪಾಲಾಕ್ಷ,ಕೆ.ಪಿ.ಮಧುಸೂ ದನ್, ಪಾಪಯ್ಯ,ಮಾರಣ್ಣ,ಮಹಾಂತೇಶ್, ನಗರಸಭೆ ಸದಸ್ಯ ದೀಪಕ್, ಡಾ.ಎಸ್.ರಂಗಸ್ವಾಮಿ, ಡಾ.ಸಾಲಿಮಂಜಪ್ಪ, ತಿಪ್ಪೇಸ್ವಾಮಿ, ಪ್ರೊ.ಟಿ.ಎಲ್.ಸುಧಾಕರ್, ಮಂಜುನಾಥ್, ಬಸವರಾಜ.ಟಿ.ಗೊರವರ್, ಅಂಜಿನಪ್ಪ, ಕೆ.ಪಿ.ಸಂಪತ್ ಕುಮಾರ್ ಇದ್ದರು.