ಮಲೆನಾಡ ಮಳೆ ಸಂತ್ರಸ್ತರಿಗೆ ಸ್ಪಂದಿಸದ ಸರ್ಕಾರ: ಜ್ಞಾನೇಂದ್ರ ಕಿಡಿ

| Published : Aug 02 2024, 12:54 AM IST

ಮಲೆನಾಡ ಮಳೆ ಸಂತ್ರಸ್ತರಿಗೆ ಸ್ಪಂದಿಸದ ಸರ್ಕಾರ: ಜ್ಞಾನೇಂದ್ರ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸನಗರ ತಾಲೂಕಿನ ಚಕ್ರಾ ಹಾಗೂ ಸಾವೇಹಕ್ಲು ಎರಡು ಜಲಾಶಯಗಳಿಗೆ ಶಾಸಕ ಆರಗ ಜ್ಞಾನೇಂದ್ರ ಬಾಗಿನ ಸಮರ್ಪಿಸಿದರು.

ಕನ್ನಡಪ್ರಭ ವಾರ್ತೆ ಹೊಸನಗರ

ಮಲೆನಾಡಿಗೆ ಮಲೆನಾಡೇ ಭೀಕರ ಮಳೆಗೆ ಸಿಲುಕಿ ನಲುಗುತ್ತಿರುವಾಗ ರಾಜ್ಯ ಸರ್ಕಾರದ ಮಂತ್ರಿಮಂಡಲ ದೆಹಲಿಯಲ್ಲಿ‌ ಅಲೆಯುತ್ತಿದೆ. ಯಾವುದೇ ಮಂತ್ರಿ ಪ್ರವಾಹ ಪ್ರದೇಶಗಳಿಗೆ ಭೇಟಿ ಕೊಟ್ಟು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಇಲ್ಲಿನ ಜನರಿಗೆ ಬದುಕಿನ ಭರವಸೆಯೇ ಕಳೆದಂತಾಗಿದೆ. ಇಂತಹ ಭ್ರಷ್ಟ ಸರ್ಕಾರ ದಿಂದ ಜನತೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹೊಸನಗರ ತಾಲೂಕಿನಾದ್ಯಂತ ವಿದ್ಯುತ್ ಸರಬರಾಜಿಗೆ ದೊಡ್ಡ ತೊಡಕಾಗಿದೆ ನೂರಾರು ಕಂಬಗಳು ಧರೆಗುರುಳಿವೆ. ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ ಹಾಗೂ ಸಿಬ್ಬಂದಿಗಳ ಕೊರತೆಯಿಂದ ಮರಗಳ ತೆರವು ವಿಳಂಬವಾಗುತ್ತಿದೆ. ಅದರಲ್ಲೂ ಮಲೆನಾಡಿಗೆ ಮಾರಕವಾದ ಅಕೇಶಿಯದ ತೆರವು ಕೂಡಲೇ ಕೈಗೊಳ್ಳದಿದ್ದರೆ ಕ್ಷೇತ್ರದ ಜನತೆಯೊಂದಿಗೆ ಜೊತೆಗೂಡಿ ನಾನೇ ತೆರವುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು

ವಿಧಾನ ಪರಿಷತ್‌ನ ಮುಖ್ಯ ಸಚೇತಕ ಎನ್‌. ರವಿಕುಮಾರ್ ಮಾತನಾಡಿ, ಮಲೆನಾಡಿನ ರೈತಾಷಿ ವರ್ಗ ಈ ಮಳೆಗಾಲದಲ್ಲಿ ಅತೀವ ಸಂಕಷ್ಟಕ್ಕೆ ಗುರಿಯಾಗಿದೆ. ರಾಜ್ಯ ಸರ್ಕಾರ ನೀಡುವ ಪರಿಹಾರಕ್ಕೆ ಯಾವುದೇ ಮಾನದಂಡವಿಲ್ಲ. ಯಡಿಯೂರಪ್ಪನವರ ಕಾಲದಲ್ಲಿ ನೀಡಿದ ಪರಿಹಾರದ ಅಂಶಗಳನ್ನು ಗಮನಿಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ನೆರೆ, ಪ್ರವಾಹ ಪೀಡಿತ ಪ್ರದೇಶಕ್ಕೆ ಆರು ತಂಡಗಳು ಭೇಟಿ ಕೊಟ್ಟು, ಜಿಲ್ಲಾ ಮುಖ್ಯಸ್ಥರಿಗೆ ತಿಳಿಸಲು ಸೂಚಿಸಿದ್ದಾರೆ. ತೊಂದರೆಗೆ ಪರಿಹಾರ ಕೊಡಲು ನಾವು ಪ್ರೇರೇಪಣೆ ಕೊಡಬೇಕು ಮತ್ತು ಸಹಕಾರಿ ಆಗಬೇಕೆಂಬ ಉದ್ದೇಶದಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಮ್ಮನ್ನು ಕಳುಹಿಸಿದ್ದಾರೆ ಎಂದು ತಿಳಿಸಿದರು.

ಕೆಲವೆಡೆ ಮನೆ ಬಿದ್ದಿದೆ ಭಾರಿ ಪ್ರದೇಶದಲ್ಲೂ ಬೆಳೆನಾಶ ಸಂಭವಿಸಿದೆ. ಒಂದು ವರ್ಷದ ಹಿಂದೆ ಅನಾವೃಷ್ಟಿ ಇತ್ತು. ಈಗಲೂ ಕೆಲವೆಡೆ ಮುಂದುವರೆದಿದೆ. ಕೆಲವೆಡೆ ಅತಿವೃಷ್ಟಿ ಆಗುತ್ತಿದೆ . ಕಳೆದ ವರ್ಷ ಬರಗಾಲದ ಪರಿಸ್ಥಿತಿ ಇದ್ದರೂ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ; ಇದರಿಂದ ರೈತರಿಗೆ ಅನ್ಯಾಯ ಆಗಿತ್ತು ಎಂದು ಟೀಕಿಸಿದರು.

ಸುದ್ದಿಗೋಷ್ಟಿಯಲ್ಲಿ ಅತಿವೃಷಿ ಅದ್ಯಯನ ತಂಡದ ರಾಜ್ಯ ಬಿಜೆಪಿ ಉಪಾಧ್ಯಕ್ಷ , ಮಾಜಿ ಶಾಸಕ ಹರತಾಳು ಹಾಲಪ್ಪ, ಶಿವಮೊಗ್ಗ ನಗರದ ಶಾಸಕ ಎಸ್‌.ಎನ್‌.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾದ್ಯಕ್ಷ ಮೇಘರಾಜ್, ತಾಲೂಕು ಮಂಡಲ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ, ಶ್ರೀಪತಿರಾವ್ ಹಾಗೂ ಹೊಸನಗರ ಹಾಗೂ ಸಾಗರದ ಕ್ಷೇತ್ರದ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ಅವಳಿ ಜಲಾಶಯಗಳಿಗೆ ಚೊಚ್ಚಲ ಬಾಗಿನ

ಚಕ್ರಾ, ಸಾವೇಹಕ್ಲು ಜಲಾಶಯಗಳಿಂದ ನಾಡಿನ ಬೆಳಕಿಗೆ ಬಹುದೊಡ್ಡ ಕಾಣಿಕೆ ಬಂದಿದೆ. ಮಾತ್ರವಲ್ಲ ಮಾಲೆನಾಡಿನ ಇಕೋ ಟೂರಿಸಂಗೆ ಈಭಾಗದ ಪ್ರದೇಶ ಪ್ರಶಸ್ತವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಅತಿವೃಷ್ಟಿ ಅಧ್ಯಯನ ಪ್ರವಾಸದ ಮಧ್ಯೆ ಚಕ್ರಾ ಹಾಗೂ ಸಾವೇಹಕ್ಲು ಎರಡು ಜಲಾಶಯಗಳಿಗೆ ತೆರಳಿ ಅವರು ಬಾಗಿನ ಸಮರ್ಪಿಸಿದರು. ಎರಡೂ ಜಲಾಶಯ ಪ್ರದೇಶಗಳು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಾಗ. ಪ್ರವಾಸಿಗರಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಹಾಗೂ ಈ ಜಲಾಶಯಕ್ಕೆ ಹೋಗಲು ಮಾಸ್ತಿಕಟ್ಟೆಯಿಂದ ಪಾಸ್ ತರಬೇಕಿದೆ. ಸ್ಥಳೀಯವಾಗಿಯೇ ಪಾಸ್ ನೀಡುವ ಸಂಬಂಧ ಕೆಪಿಸಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು.