ಗೂಂಡಾ ಕಾಯ್ದೆ ಲೋಪ ತಡೆಗೆ 10 ಅಂಶಗಳ ಸುತ್ತೋಲೆ

| Published : Jan 25 2024, 02:01 AM IST

ಸಾರಾಂಶ

ಗಂಭೀರ, ವಿಶೇಷ ಅಪರಾಧಗಳಿಗೆ ಮಾತ್ರ ಗೂಂಡಾ ಕಾಯ್ದೆ ಅನ್ವಯವಾಗಲಿದೆ. ಕೇಸು ಹಾಕುವಾಗ ಜನರ ಹಕ್ಕಿಗೆ ಭಂಗ ಬರಕೂಡದು. ತಪ್ಪಿದರೆ ಎಸ್ಪಿ, ಡೀಸಿ, ಆಯುಕ್ತರೇ ಹೊಣೆಗಾರರು ಎಂದು ಗೂಂಡಾ ಕಾಯ್ದೆ ಲೋಪ ತಡೆಗೆ ಹೊರಡಿಸಿದ 10 ಅಂಶಗಳ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಗೂಂಡಾ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸುವಾಗ ಮತ್ತು ನಿರ್ವಹಿಸುವಾಗ ನಾಗರಿಕರ ಸಂವಿಧಾನಾತ್ಮಕ ಹಕ್ಕುಗಳ ಮೊಟಕು, ಗೂಂಡಾ ಕಾಯ್ದೆಯಡಿ ಬರದ ಪ್ರಕರಣಗಳನ್ನೂ ಸೇರಿಸುವುದು ಸೇರಿದಂತೆ ಹಲವು ರೀತಿಯ ಲೋಪಗಳಾಗುತ್ತಿದ್ದು, ಇಂತಹ ತಪ್ಪುಗಳು ಮರುಕಳಿಸದಂತೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಎಚ್ಚರ ವಹಿಸಲು ಗೃಹ ಇಲಾಖೆಯು 10 ಅಂಶಗಳ ಸುತ್ತೋಲೆ ಹೊರಡಿಸಿದೆ.

ಕಳ್ಳ ಬಟ್ಟಿ, ಸರಾಯಿ ವ್ಯವಹಾರ, ಜೂಜು, ಗೂಂಡಾ ಚಟುವಟಿಕೆ, ಅನೈತಿಕ ವ್ಯವಹಾರ, ಕೊಳಚೆ ಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವುದು, ವಿಡಿಯೋ ಚೌರ್ಯ ಸೇರಿದಂತೆ ಗೂಂಡಾ ಕಾಯ್ದೆಯಡಿ ಬರುವ ಗಂಭೀರ ಮತ್ತು ವಿಶೇಷ ಅಪರಾಧ ಪ್ರಕರಣಗಳಲ್ಲಿ ಮಾತ್ರ ಈ ಅಸ್ತ್ರ ಪ್ರಯೋಗಿಸಬೇಕು. ಗೂಂಡಾ ಕಾಯ್ದೆಯಡಿ ದೂರು ದಾಖಲಿಸುವಾಗ ಸಾಮಾನ್ಯವಾಗಿ ವೈಯಕ್ತಿಕ ಹಿತಾಸಕ್ತಿ ಅಥವಾ ಯಾರದ್ದೋ ಮರ್ಜಿಗೆ ಒಳಗಾಗಿ ಜಾರಿಗೊಳಿಸಬಾರದು. ಈ ಕಾಯ್ದೆಯನ್ನು ಕೊನೆಯ ಅಸ್ತ್ರವಾಗಿ ಉಪಯೋಗಿಸಬೇಕಿರುವುದರಿಂದ ಒಬ್ಬ ನಾಗರಿಕನ ಸಂವಿಧಾನಾತ್ಮಕ ಹಕ್ಕನ್ನು ಮೊಟಕುಗೊಳಿಸಲು ಯಾರಿಂದಾದರೂ ಪ್ರಯತ್ನ ನಡೆದಿದೆಯೇ ಎಂಬ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ತಪ್ಪಿದರೆ ಜಿಲ್ಲಾಧಿಕಾರಿಗಳು, ಪೊಲೀಸ್‌ ಆಯುಕ್ತರುಗಳೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದೆ.

ಇತ್ತೀಚಿನ ಕೆಲವು ಗೂಂಡಾ ಪ್ರಕರಣಗಳಲ್ಲಿ ನಮೂದಿಸಿರುವ ಮೊಕದ್ದಮೆಗಳು ಆ ಕಾಯ್ದೆಯಡಿ ಪರಿಗಣಿಸಲು ಅರ್ಹವಿಲ್ಲೆಂದು ಸರ್ಕಾರ ಮತ್ತು ಹೈಕೋರ್ಟ್‌ ಸಲಹಾ ಮಂಡಳಿ ಸಭೆಯ ಹಂತದಲ್ಲಿ ಕಂಡುಬಂದಿವೆ. ಹಾಗಾಗಿ ಕೂಲಂಕಷವಾಗಿ ಪರಿಶೀಲಿಸಿ ಗೂಂಡಾ ಕಾಯ್ದೆಯಡಿ ಬರುವ ಪ್ರಕರಣಗಳನ್ನು ಮಾತ್ರ ದಾಖಲಿಸಬೇಕು. ಗೂಂಡಾ ಪ್ರಸ್ತಾವನೆಗಳಿಗೆ ಸರ್ಕಾರವು ಬಂಧನ ಆದೇಶ ಹೊರಡಿಸಿದ 12 ದಿನಗಳ ಒಳಗಾಗಿ ಅನುಮೋದನೆ ಪಡೆಯಬೇಕಿರುತ್ತದೆ. ಆದರೆ, ಅನೇಕ ಪ್ರಕರಣಗಳಲ್ಲಿ ಬಂಧನ ಆದೇಶ ಹೊರಡಿಸಿದ ನಂತರ ತಡವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿರುವುದು ಕಂಡುಬಂದಿದೆ. ಹಾಗಾಗಿ ಬಂಧನ ಆದೇಶದ ದಿನದಿಂದ 3 ದಿನಗಳೊಳಗಾಗಿ ಠಾಣಾಧಿಕಾರಿಗಳ ಮೂಲಕವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಮತ್ತು ಪ್ರಕರಣದ ಸಂಪೂರ್ಣ ಜವಾಬ್ದಾರಿಯನ್ನು ಅವರೇ ನಿರ್ವಹಿಸಬೇಕು ಎಂದು ತಿಳಿಸಿದೆ.

ಗೂಂಡಾ ಕಾಯ್ದೆಯಡಿ ಬಂಧನ ಆಜ್ಞೆ ಹೊರಡಿಸುವ ಮೊದಲು ಯಾವುದೇ ಮಾಹಿತಿ ಕೊರತೆ ಇಲ್ಲದಂತೆ ನೋಡಿಕೊಳ್ಳಬೇಕು. ಬಂಧನದ ನೋಟಿಸ್‌ ನೀಡುವಾಗ ಆರೋಪಿಗೆ ಕನ್ನಡ, ಇಂಗ್ಲಿಷ್‌ ಅರ್ಥವಾಗದಿದ್ದರೆ ಅವನಿಗೆ ಅರ್ಥವಾಗುವ ಅಥವಾ ಅವನ ಮಾತೃಭಾಷೆಯಲ್ಲೇ ನೋಟಿಸ್‌ ನೀಡಬೇಕು ಎಂಬುದು ಸೇರಿದಂತೆ ಹತ್ತು ಸೂಚನೆಗಳನ್ನು ನೀಡಲಾಗಿದೆ. ಈ ಕಾಯ್ದೆಯಡಿ ಹೊರಡಿಸುವ ಬಂಧನ ಆದೇಶಗಳನ್ನು ಹೈಕೋರ್ಟ್‌ ಸಲಹಾ ಮಂಡಳಿ ಮುಂದೆ ಪ್ರಕರಣ ಸಮರ್ಥಿಸಿಕೊಳ್ಳುವಲ್ಲಿ ನಿಯೋಜಿತ ಅಧಿಕಾರಿಗಳು ವಿಫಲವಾಗುತ್ತಿರುವುದು ಕಂಡುಬಂದಿದೆ. ಹಾಗಾಗಿ ಪ್ರಕರಣವನ್ನು ಸಂಪೂರ್ಣ ಅರ್ಥ ಮಾಡಿಕೊಂಡು ವಿಡಿಯೋ, ಚಿತ್ರಗಳು, ಸಿಡಿಆರ್‌ಗಳನ್ನು ಪ್ರದರ್ಶಿಸಲು ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ.