ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಸಂಪೂರ್ಣ ಬಂದ್: ಮಿಮ್ಸ್‌ನಲ್ಲಿ ವೈದ್ಯಾಧಿಕಾರಿಗಳ ಬೇಜವಾಬ್ದಾರಿತನ

| Published : Aug 18 2024, 01:53 AM IST

ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಸಂಪೂರ್ಣ ಬಂದ್: ಮಿಮ್ಸ್‌ನಲ್ಲಿ ವೈದ್ಯಾಧಿಕಾರಿಗಳ ಬೇಜವಾಬ್ದಾರಿತನ
Share this Article
  • FB
  • TW
  • Linkdin
  • Email

ಸಾರಾಂಶ

ತುರ್ತು ಚಿಕಿತ್ಸೆಯನ್ನು ಹೊರತುಪಡಿಸಿದಂತೆ ಒಪಿಡಿ ಸೇವೆ, ಶಸ್ತ್ರಚಿಕಿತ್ಸೆ ನಡೆಸುವುದರಿಂದಲೂ ವೈದ್ಯರು ದೂರ ಉಳಿದಿದ್ದರು. ಖಾಸಗಿ ನರ್ಸಿಂಗ್ ಹೋಂ, ಕ್ಲಿನಿಕ್‌ಗಳಲ್ಲೂ ಚಿಕಿತ್ಸೆಗೆ ವೈದ್ಯರು ಇರಲಿಲ್ಲ. ಎಲ್ಲಾ ಆಸ್ಪತ್ರೆಗಳೆದುರು ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಒಂದು ದಿನ ಚಿಕಿತ್ಸೆ ಸಿಗುವುದಿಲ್ಲ. ಸಹಕರಿಸಿ ಎಂಬ ನಾಮಫಲಕ ಹಾಕಲಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೊಲ್ಕತ್ತ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣವನ್ನು ಖಂಡಿಸಿ ದೇಶಾದ್ಯಂತ ಆಸ್ಪತ್ರೆಗಳ ಬಂದ್‌ಗೆ ನೀಡಿದ್ದ ಕರೆಗೆ ಮಂಡ್ಯ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ತುರ್ತು ಚಿಕಿತ್ಸೆಯನ್ನು ಹೊರತುಪಡಿಸಿದಂತೆ ಒಪಿಡಿ ಸೇವೆ, ಶಸ್ತ್ರಚಿಕಿತ್ಸೆ ನಡೆಸುವುದರಿಂದಲೂ ವೈದ್ಯರು ದೂರ ಉಳಿದಿದ್ದರು. ಖಾಸಗಿ ನರ್ಸಿಂಗ್ ಹೋಂ, ಕ್ಲಿನಿಕ್‌ಗಳಲ್ಲೂ ಚಿಕಿತ್ಸೆಗೆ ವೈದ್ಯರು ಇರಲಿಲ್ಲ. ಎಲ್ಲಾ ಆಸ್ಪತ್ರೆಗಳೆದುರು ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಒಂದು ದಿನ ಚಿಕಿತ್ಸೆ ಸಿಗುವುದಿಲ್ಲ. ಸಹಕರಿಸಿ ಎಂಬ ನಾಮಫಲಕ ಹಾಕಲಾಗಿತ್ತು.

ಮಿಮ್ಸ್ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ:

ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ವೈದ್ಯರೆಲ್ಲರೂ ಕರ್ತವ್ಯದಿಂದ ದೂರ ಉಳಿದಿದ್ದರು. ಹೊರರೋಗಿಗಳಿಗೆ ನೀಡುವ ಚಿಕಿತ್ಸೆಯನ್ನೂ ಬಂದ್ ಮಾಡಲಾಗಿತ್ತು. ಇದರ ನಡುವೆಯೂ ಹೊರರೋಗಿಗಳಿಗೆ ನೀಡುವ ಚೀಟಿಯನ್ನು ೧೦ ರು. ಹಣ ಪಡೆದು ವಿತರಿಸಲಾಗುತ್ತಿತ್ತು. ವೈದ್ಯರ ಮುಷ್ಕರದ ವಿಷಯ ತಿಳಿಯದೆ ಚಿಕಿತ್ಸೆ ಪಡೆಯಲು ಬಂದಿದ್ದ ನೂರಾರು ರೋಗಿಗಳು ಚೀಟಿ ಪಡೆದು ವಾರ್ಡ್‌ಗಳಿಗೆ ತೆರಳಿ ವೈದ್ಯರ ಬರುವಿಕೆಗಾಗಿ ಕಾದು ಕುಳಿತಿದ್ದರು. ಆದರೆ, ಎಷ್ಟು ಹೊತ್ತಾದರೂ ವೈದ್ಯರು ಬರಲೇ ಇಲ್ಲ. ವಾರ್ಡ್‌ಗಳಲ್ಲಿದ್ದ ಸಿಬ್ಬಂದಿ ಈ ದಿನ ಚಿಕಿತ್ಸೆ ಸಿಗುವುದಿಲ್ಲ. ವೈದ್ಯರು ಬರುವುದಿಲ್ಲವೆಂದು ಹೇಳಿದರು.

ವೈದ್ಯರು ಕರ್ತವ್ಯಕ್ಕೆ ಹಾಜರಾಗುವುದಿಲ್ಲವೆಂದ ಮೇಲೆ ಹೊರರೋಗಿಗಳಿಂದ ಹಣ ಪಡೆದು ಚೀಟಿ ವಿತರಿಸುತ್ತಿರುವುದೇಕೆ? ಮುಷ್ಕರವಿದ್ದ ಮೇಲೆ ಒಪಿಡಿ ಚೀಟಿ ವಿತರಿಸುತ್ತಿರುವುದಾದರೂ ಏಕೆ? ಎಂದು ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳು ವೈದ್ಯರು, ವೈದ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೂರದ ಊರುಗಳಿಂದ ಚಿಕಿತ್ಸೆಗೆ ಬಂದಿದ್ದ ರೋಗಿಗಳು ನೋವಿನ ನಡುವೆಯೂ ಸರತಿ ಸಾಲಿನಲ್ಲಿ ನಿಂತು ಹಣ ಕೊಟ್ಟು ಚೀಟಿ ಪಡೆದುಕೊಂಡಿದ್ದರು. ವೈದ್ಯರು ಬರುವುದಿಲ್ಲವೆಂಬ ವಿಷಯ ತಿಳಿದು ಹಿಡಿಶಾಪ ಹಾಕುತ್ತಲೇ ಆಸ್ಪತ್ರೆಯಿಂದ ನಿರ್ಗಮಿಸಿದರು.

ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳೂ ಬಂದ್:

ದೇಶಾದ್ಯಂತ ಕರೆ ನೀಡಿದ್ದ ವೈದ್ಯರ ಮುಷ್ಕರಕ್ಕೆ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಬೆಂಬಲ ವ್ಯಕ್ತಪಡಿಸಿ ಬಾಗಿಲು ಮುಚ್ಚಿದ್ದವು. ತುರ್ತು ಚಿಕಿತ್ಸೆ ಸೇರಿ ಒಳರೋಗಿಗಳಿಗಷ್ಟೇ ಚಿಕಿತ್ಸೆ ನೀಡಲಾಗುತ್ತಿತ್ತು. ಅದನ್ನು ಹೊರತುಪಡಿಸಿ ಹೊರರೋಗಿಗಳಿಗೆ ಚಿಕಿತ್ಸೆಯನ್ನು ಬಂದ್ ಮಾಡಲಾಗಿತ್ತು. ಖಾಸಗಿ ವೈದ್ಯರು ಆಸ್ಪತ್ರೆಗಳು, ಕ್ಲಿನಿಕ್‌ಗಳ ಕಡೆ ಸುಳಿಯಲೇ ಇಲ್ಲ. ಇದರಿಂದ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯಲು ಬಂದವರು ಪರದಾಡುವಂತಾಯಿತು.

---------

೧೭ಕೆಎಂಎನ್‌ಡಿ-೫

ಮಿಮ್ಸ್ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯಲು ಬಂದವರು ವೈದ್ಯರ ಬರುವಿಕೆಗಾಗಿ ಕಾದು ಕುಳಿತಿದ್ದರು.