ರಾಜ್ಯದ ಕಾಂಗ್ರೆಸ್ ಸರ್ಕಾರ ವಕ್ಫ್ ಮೂಲಕ ಜಿಲ್ಲೆಯ ರೈತರ ಆಸ್ತಿ ಕಬಳಿಸುವ ಹುನ್ನಾರ ನಡೆಸುತ್ತಿದ್ದು, ಇದೊಂದು ದುರಂತ ಎಂದು ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದ ಕಾಂಗ್ರೆಸ್ ಸರ್ಕಾರ ವಕ್ಫ್ ಮೂಲಕ ಜಿಲ್ಲೆಯ ರೈತರ ಆಸ್ತಿ ಕಬಳಿಸುವ ಹುನ್ನಾರ ನಡೆಸುತ್ತಿದ್ದು, ಇದೊಂದು ದುರಂತ ಎಂದು ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ.

ವಿಜಯಪುರ ಜಿಲ್ಲೆಯ ವಕ್ಫ್‌ ಸಮಸ್ಯೆ ಕುರಿತು ಕಾರಜೋಳ ನೇತೃತ್ವದಲ್ಲಿ ಬಿಜೆಪಿ ರಚಿಸಿರುವ ಸಮಿತಿ ಮಂಗಳವಾರ ಜಿಲ್ಲೆಯ ನಾನಾ ಕಡೆ ಭೇಟಿ ನೀಡಿತು. ಬಳಿಕ, ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರಜೋಳ ಮಾತನಾಡಿದರು. ಪ್ರಧಾನಿ ಮೋದಿ ಅವರು ಲೋಕಸಭೆಯಲ್ಲಿ ವಕ್ಫ್ ಕಾಯಿದೆ ತಿದ್ದುಪಡಿ ಮಸೂದೆ ಮಂಡಿಸಿದ್ದಕ್ಕೆ ಕಾಂಗ್ರೆಸ್ ನವರು ವಿರೋಧಿಸಿದರು. ಅದರ ಗಂಭೀರ ಅಧ್ಯಯನ ಮಾಡಿ ಮುಂದಿನ ಅಧಿವೇಶನದಲ್ಲಿ ಮಂಡನೆಗೆ ಸಿದ್ಧತೆ ನಡೆದಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ವಕ್ಫ್ ಮೂಲಕ ರೈತರ ಜಮೀನನ್ನು ಕಬಳಿಸುವ ಹುನ್ನಾರ ಮಾಡುತ್ತಿರುವುದು ಹಕ್ಕುಚ್ಯುತಿಯಾಗಲಿದೆ ಎಂದು ಆರೋಪಿಸಿದರು.

ಸಚಿವ ಜಮೀರ್ ಅಹ್ಮದ್ ಸಭೆ ನಡೆಸಿದ್ದಾರೆ. ಸಿಎಂ ಸೂಚನೆ ಮೇರೆಗೆ ವಕ್ಫ್ ಅದಾಲತ್ ನಡೆಸಲಾಗುತ್ತಿದೆ. ತಾವು ಸೂಚಿಸಿದಂತೆ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದು, ಪ್ರೊಸಿಡಿಂಗ್ ದಾಖಲಾಗಿದೆ. 4,370 ಆಸ್ತಿಗಳ 14,201 ಎಕರೆಗೆ ಸಂಬಂಧಿಸಿದಂತೆ ಪ್ರಕರಣಗಳಿವೆ. ರೈತರ ಆಸ್ತಿಯನ್ನು ವಕ್ಫ್ ಹೆಸರಲ್ಲಿ ನುಂಗುವ ಹುನ್ನಾರ ನಡೆದಿದೆ. ಇಂದು ರೈತರು ಆಸ್ತಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕೆಲವರಿಗೆ ನೋಟಿಸ್, ಪಹಣಿಯ ಕಲಂ 11ರಲ್ಲಿ ವಕ್ಫ್ ಎಂದು ನಮೂದು ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದಾಗ, ಸಾವಿರಾರು ರೈತರ ಖಾತೆಗಳನ್ನು ಬದಲಾವಣೆ ಮಾಡಲು ಸೂಚನೆ ನೀಡಿರುವುದು ಕಂಡು ಬಂದಿದೆ. ಕಾಂಗ್ರೆಸ್‌ನ ಈ ದುರುದ್ದೇಶ ಈಡೇರಿಸಲು ನಾವು ಬಿಡಲ್ಲ ಎಂದು ಹೇಳಿದರು.

ರಾಜ್ಯದ ಎಲ್ಲ ರೈತರು ಎಚ್ಚೆತ್ತುಕೊಂಡು ಪಹಣಿ ಪರಿಶೀಲಿಸಿಕೊಳ್ಳಬೇಕು. ರೈತರ ಪಹಣಿಯಲ್ಲಿ ವಕ್ಫ್‌ ಎಂದು ಸೇರಿಸಿದ್ದನ್ನು ಸರ್ಕಾರ ಮುಂದಿನ 15 ದಿನಗಳಲ್ಲಿ ಸರಿಪಡಿಸದಿದ್ದರೆ ರೈತರೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಕ್ಫ್‌ ಆಸ್ತಿ ಎಂದು ನಮೂದು ಮಾಡಿದ ಪ್ರಕರಣದ ಮೇಲೆ ಯತ್ನಾಳರು ಧ್ವನಿ ಎತ್ತಿದ್ದಾರೆ. ಅದಕ್ಕೆ ಕೇಂದ್ರದವರು ಮಾಹಿತಿ ಕಲೆ ಹಾಕಿ ವರದಿ ನೀಡುವಂತೆ ಹೇಳಿದ್ದು, ಅದಕ್ಕಾಗಿ ನಾವು ಬಂದಿದ್ದೇವೆ. ರೈತರು, ಮಠದ ಆಸ್ತಿ, ಮಸೀದಿಗೆ ಹೋಗಲು ಬಿಡಲ್ಲ. ಯತ್ನಾಳರು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರಿಂದ ಅವರ ಪರವಾಗಿ ಬಂದಿದ್ದೇವೆ. ಇಲ್ಲಿನ ಸಮಗ್ರ ವರದಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸೋಮೇಶ್ವರ ದೇವಸ್ಥಾನವನ್ನು ಸಹ ವಕ್ಫ್‌ ಮಾಡಲು ಹುನ್ನಾರ: ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದ ಸರ್ವೇ ನಂ. 220ರ 57 ಎಕರೆ (ಸುಮಾರು 10 ರೈತರ ಜಮೀನು) ಗ್ರಾಮ ಹಾಗೂ ಗ್ರಾಮದ ಐತಿಹಾಸಿಕ ಚಾಲುಕ್ಯರ ಕಾಲದ ಶ್ರೀ ಸೋಮೇಶ್ವರ ದೇವಸ್ಥಾನ ಸಹ ವಕ್ಫ್ ಎಂದು ಮಾಡಲು ಹುನ್ನಾರ ನಡೆದಿದೆ. ಚಾಲುಕ್ಯರ ಕಾಲದ ದೇವಸ್ಥಾನ ವಕ್ಫ್ ಜಮೀನು ಆಗಲು ಹೇಗೆ ಸಾಧ್ಯ?. ಅಲ್ಲದೆ, ಸಿಂದಗಿಯ ವಿರಕ್ತಮಠ, ಯರಗಲ್, ಕಕ್ಕಳಮೇಲಿ ಮಠದ ಆಸ್ತಿ ಕೂಡ ವಕ್ಫ್‌ ಎಂದು ದಾಖಲಾಗಿರುವುದು ಕಂಡು ಬಂದಿದೆ. 2019ರಲ್ಲಿಯೇ ಸಿಂದಗಿ ವಿರಕ್ತಮಠದ ಆಸ್ತಿ ಬದಲಾವಣೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ವಕ್ಫ್ ಆಸ್ತಿ ಎಂದು ಸರ್ಕಾರ ಹೇಳುತ್ತಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಹಕಾರದಿಂದಲೇ ಈ ರೀತಿಯ ಕೃತ್ಯಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.