ಸಾರಾಂಶ
ಹುಬ್ಬಳ್ಳಿ: ಬೆಳಗಾವಿಯ ಸುವರ್ಣಸೌಧದ ಎದುರಿಗೆ 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ನಡೆಸುತ್ತಿದ್ದ ಶಾಂತಿಯುತ ಹೋರಾಟದ ಕಣವನ್ನು ಕಾಂಗ್ರೆಸ್ ಸರ್ಕಾರ ರಣರಂಗವಾಗಿಸಿದೆ ಎಂದು ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಾವು ಶಾಂತಿಯುತ ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲೇ ಸರ್ಕಾರವು ನಮ್ಮ ಹೋರಾಟವನ್ನು ಹತ್ತಿಕ್ಕಲು ಏಕಾಏಕಿ ಲಾಠಿಚಾರ್ಜ್ ನಡೆಸಿರುವುದು ಪ್ರಜಾತಂತ್ರದ ಕಗ್ಗೊಲೆ. ಹೋರಾಟಗಾರರ ಮೇಲೆ ಬಿದ್ದ ಲಾಠಿ ಏಟು ಇಡೀ ಲಿಂಗಾಯತ ಸಮುದಾಯದ ಆತ್ಮಸಾಕ್ಷಿ ಹಾಗೂ ಸ್ವಾಭಿಮಾನಕ್ಕೆ ಕಾಂಗ್ರೆಸ್ ಸರ್ಕಾರ ಕೊಟ್ಟ ಕೊಡಲಿಪೆಟ್ಟು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ 34 ಜನ ಲಿಂಗಾಯತ ಶಾಸಕರಿದ್ದರೂ ಈ ದಮನಕಾರಿಯ ನೀತಿಯ ವಿರುದ್ಧ ಒಬ್ಬರು ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಿಲ್ಲ. ಇವರೆಲ್ಲ ಮುಂದೆ ಯಾವ ಮುಖ ಹೊತ್ತು ಲಿಂಗಾಯತ ಸಮಾಜದ ಮುಂದೆ ಹೋಗಿ, ಕಾಂಗ್ರೆಸ್ ಪರ ಮತ ಕೇಳುತ್ತಾರೆ?. ಸಮುದಾಯದ ಬೆಂಬಲದಿಂದಲೇ ಇಂದು ಅಧಿಕಾರ ಅನುಭವಿಸುತ್ತಿರುವವರು, ಅಧಿಕಾರಕ್ಕಿಂತ ಸಮಾಜದ ಹಿತಾಸಕ್ತಿಯೇ ಮುಖ್ಯ ಎಂಬುದನ್ನು ಮರೆಯಬಾರದು ಎಂದ ತಿಳಿಸಿದ್ದಾರೆ.