ಏ.20 ರಿಂದ ‘ಜಿಪಿಎಲ್ ಗೌಡ ಪ್ರೀಮಿಯರ್ ಲೀಗ್’ ಲೆದರ್ ಬಾಲ್ ಟಿ-20 ಕ್ರಿಕೆಟ್

| Published : Mar 21 2025, 12:31 AM IST

ಏ.20 ರಿಂದ ‘ಜಿಪಿಎಲ್ ಗೌಡ ಪ್ರೀಮಿಯರ್ ಲೀಗ್’ ಲೆದರ್ ಬಾಲ್ ಟಿ-20 ಕ್ರಿಕೆಟ್
Share this Article
  • FB
  • TW
  • Linkdin
  • Email

ಸಾರಾಂಶ

ಏ. 20ರಿಂದ ಮೇ 4ರ ವರೆಗೆ ಮಡಿಕೇರಿಯ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಟಿ - 20 ಕ್ರಿಕೆಟ್‌ ಪಂದ್ಯಾವಳಿ ನಡೆಯಲಿದೆ. ಈ ಭಾರಿ ವಿಜೃಂಭಣೆಯಿಂದ ಪಂದ್ಯಾವಳಿ ನಡೆಸಲು ತೀರ್ಮಾನಿಸಲಾಗಿದೆ.

ಮಡಿಕೇರಿ : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏ.20 ರಿಂದ ಮೇ 4ರ ವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ‘ಜಿಪಿಎಲ್ ಗೌಡ ಪ್ರೀಮಿಯರ್ ಲೀಗ್’ ಲೆದರ್ ಬಾಲ್ ಟಿ-20 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಗೌಡ ಯುವ ವೇದಿಕೆ ಶಿಸ್ತು ಸಮಿತಿ ಅಧ್ಯಕ್ಷ ನವೀನ್ ದೇರಳ, ಕೊಡಗು ಗೌಡ ಯುವ ವೇದಿಕೆ ಕಳೆದ ಹಲವಾರು ವರ್ಷಗಳಿಂದ ಗೌಡ ಜನಾಂಗ ಬಾಂಧವರಿಗೆ ಕ್ರೀಡಾಕೂಟ ಮತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು. 2023ರಲ್ಲಿ ಮೊದಲ ಬಾರಿಗೆ ಜನಾಂಗದ ಯುವ ಪೀಳಿಗೆಗೆ ಎಂಟರ್‌ಟೈನ್‌ಮೆಂಟ್ ಕ್ರಿಕೆಟ್‌ನಿಂದ ಪ್ರೊಫೆಶನಲ್ ಕ್ರಿಕೆಟ್‌ಗೆ ಉತ್ತೇಜನ ನೀಡುವ ಸಲುವಾಗಿ ಲೆದರ್‌ಬಾಲ್ ಕ್ರಿಕೆಟನ್ನು ಪರಿಚಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಉತ್ತಮವಾಗಿ ಮೂಡಿಬರುತ್ತಿರುವ ಕ್ರೀಡಾಕೂಟ ಈಗಾಗಲೇ ಜನಮನ ಗೆದ್ದಿದೆ ಹಾಗೂ ಪಟ್ಟಣಕ್ಕೆ ಸೀಮಿತವಾಗಿದ್ದ ಲೆದರ್‌ ಬಾಲ್ ಕ್ರಿಕೆಟ್ ಈಗ ಹಲವಾರು ಗ್ರಾಮಗಳಲ್ಲಿ ಬೇಸಿಕ್ ಸೌಲಭ್ಯಗಳನ್ನು ಒದಗಿಸಿಕೊಂಡು ಯುವ ಪೀಳಿಗೆಗೆ ಪೋತ್ಸಾಹ ನೀಡಲಾಗುತ್ತಿದೆ. ಇದರಿಂದ ಮುಂದೆ ವೃತ್ತಿಪರ ಕ್ರಿಕೆಟ್‌ನಲ್ಲಿ ಉತ್ತಮ ಪ್ರತಿಭೆಗಳು ರೂಪುಗೊಳ್ಳಲು ಯುವ ವೇದಿಕೆ ಕಾರಣವಾಗುತ್ತಿದೆ. ಜನಾಂಗದ ಯುವ ಪೀಳಿಗೆ ಲೆದರ್ ಬಾಲ್ ಕ್ರಿಕೆಟ್ ಅನ್ನು ವೃತ್ತಿಪರವಾಗಿ ಅಳವಡಿಸಿಕೊಂಡಿರುವುದು ಗಮನಾರ್ಹ ಎಂದರು. 2025ರ ಸೀಸನ್-03 ರಲ್ಲಿ ಕಳೆದ ಬಾರಿಯ ದಿ ಎಲೈಟ್ ಎ ಮತ್ತು ಬಿ, ಜಿ ಕಿಂಗ್ ಸಿದ್ದಲಿಂಗಪುರ, ಕಾಫಿ ಕ್ರಿಕೆಟರ್ಸ್‌ ಮಡಿಕೇರಿ, ಕೂರ್ಗ್ ಹಾಕ್ಸ್ ಮಡಿಕೇರಿ, ಎಂಸಿಸಿ ಮಡಿಕೇರಿ, ಪ್ಲೆಂಟರ್ಸ್‌ ಕ್ಲಬ್

ಬಿಳಿಗೇರಿ ಭಾಗವಹಿಸಲಿದ್ದು, ಈ ಬಾರಿ ಲಾ ಕಗ್ಗೋಡ್ಲು, ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕೆವಿಜಿ ವಿದ್ಯಾಸಂಸ್ಥೆಯ ಅಮರ ಸುಳ್ಯ ರಾಯಲ್ಸ್ ತಂಡ ಸೇರಿದಂತೆ ಒಟ್ಟು 10 ಫ್ರಾಂಚೈಸಿಗಳು ಪಾಲ್ಗೊಂಡು ಆಟಗಾರರನ್ನು ಬಿಡ್ಡಿಂಗ್ ಮುಖಾಂತರ ಈಗಾಗಲೇ ಖರೀದಿ ಮಾಡಲಾಗಿದೆ ಎಂದು ಹೇಳಿದರು.

ಪಂದ್ಯಾವಳಿಯ ವಿಜೇತರಿಗೆ ಪ್ರಥಮ ಬಹುಮಾನ 1,25,000 ರು., ದ್ವಿತೀಯ 75,000 ರು., ತೃತೀಯ ಬಹುಮಾನ 45,000 ರು. ನಗದು ಮತ್ತು ಕಳೆದ ಸೀಸನ್‌ನಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಬಿಡುಗಡೆ ಮಾಡಿದ ಗೌಡ ಸಂಸ್ಕೃತಿ ಮತ್ತು ಬಲಿದಾನದ ಪ್ರತೀಕವಾದ ಆಕರ್ಷಕ ಟ್ರೋಫಿ ಹಾಗೂ ಹಲವಾರು ಬಹುಮಾನಗಳನ್ನು ವೈಯಕ್ತಿಕ ನೀಡಲಾಗುವುದು ಎಂದು ತಿಳಿಸಿದರು.

ಕಳೆದ ಎರಡು ವರ್ಷದ ಲೆದರ್ ಬಾಲ್ ಕ್ರೀಡಾಕೂಟಕ್ಕಿಂತ ಈ ಬಾರಿ ವಿಜೃಂಭಣೆಯಿಂದ ಪಂದ್ಯಾವಳಿಯನ್ನು ನಡೆಸಲು ತೀರ್ಮಾನಿಸಲಾಗಿದ್ದು, ಪಂದ್ಯಾವಳಿಯ ನೇರ ಪ್ರಸಾರ ಇರುತ್ತದೆ ಮತ್ತು ಕ್ರೀಡಾಕೂಟದಲ್ಲಿ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ಪೀಳಿಗೆಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಒಕ್ಕಲಿಗ ಜನಾಂಗದ ಕ್ರೀಡಾಕೂಟಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವ ಮೂಲಕ ಜನಾಂಗದ ಅಭಿವೃದ್ಧಿಗೆ ಸಹಕರಿಸುವಂತೆ ಈಗಾಗಲೇ ಮಡಿಕೇರಿ ಮತ್ತು ವಿರಾಜಪೇಟೆ ಶಾಸಕರಿಗೆ ಮನವಿ ಸಲ್ಲಿಸಲಾಗಿದ್ದು, ಸುಮಾರು 1 ಕೋಟಿ ರು. ಯಷ್ಟು ಅನುದಾನ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.ಕಬಡ್ಡಿ :: ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ನ ಕಾರ್ಯದರ್ಶಿ ದುಗ್ಗಳ ಕಪಿಲ್ ಮಾತನಾಡಿ, ಮೇ 3 ರಂದು ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮತ್ತು ಕೊಡಗು ಗೌಡ ಯುವ ವೇದಿಕೆ ಸಹಯೋಗದೊಂದಿಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕುಟುಂಬವಾರು ಹೊನಲು ಬೆಳಕಿನ ಪುರುಷರ ಮುಕ್ತ ಮಡ್ ‘ಕಬಡ್ಡಿ ಪೈಪೋಟಿ’ ನಡೆಯಲಿದ್ದು, ಪಂದ್ಯಾವಳಿಯ ಪ್ರಥಮ ವಿಜೇತ ತಂಡಕ್ಕೆ 25 ಸಾವಿರ ರು., ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 15 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ನಗದು ಬಹುಮಾನ ಸೇರಿದಂತೆ ಆಕರ್ಷಕ ಟ್ರೋಫಿ ನೀಡಲಾಗುವುದು. ಆಸಕ್ತರು 2,500 ರು. ನ್ನು ಪಾವತಿಸಿ ತಂಡದ ನೋಂದಣಿಯನ್ನು ಖಾತರಿಪಡಿಸಿಕೊಳ್ಳಬೇಕು. ಮೊದಲು ಬಂದ 32 ತಂಡಗಳಿಗೆ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ ಹಾಗೂ ನೋಂದಣಿಗಾಗಿ 9731009841, 9972376151, 9980004374, 7019671130 ಸಂಪರ್ಕಿಸಬಹುದಾಗಿದೆ ಎಂದರು.

ಕೊಡಗು-ದಕ್ಷಿಣ ಕನ್ನಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೂಟೇರ ಪುಷ್ಪಾವತಿ ರಮೇಶ್ ಮಾತನಾಡಿ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಮೇ 3 ಹಾಗೂ 4 ರಂದು ಕ್ರಿಕೆಟ್ ಪಂದ್ಯಾವಳಿಯನ್ನು ಕೊಡಗು ಗೌಡ ಯುವ ವೇದಿಕೆಯ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ. ಗೌಡ ಮಹಿಳಾ ತಂಡಗಳಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದ್ದು, ಪ್ರಥಮ ಬಹುಮಾನ 25 ಸಾವಿರ ರು., ದ್ವಿತೀಯ ಬಹುಮಾನ 15 ಸಾವಿರ ಹಾಗೂ ತೃತೀಯ ಬಹುಮಾನ 10 ಸಾವಿರ ರು. ನಗದು ಬಹುಮಾನ ಸೇರಿದಂತೆ ಆಕರ್ಷಕ ಟ್ರೋಫಿ ಮತ್ತು ವೈಯುಕ್ತಿಕ ಬಹುಮಾನಗಳನ್ನು ಕೂಡ ನೀಡಲಾಗುವುದು ಎಂದರು. ಈಗಾಗಲೇ ಕೆಲವು ತಂಡಗಳು ನೋಂದಾಯಿಸಿಕೊಂಡಿದ್ದು, ಗೌಡ ಜನಾಂಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದ ಅವರು, ಆಸಕ್ತರು ತಂಡದ ನೋಂದಣಿಗಾಗಿ 9844963858, 9900992360, 9663254829, ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಉಪಾಧ್ಯಕ್ಷ ಬಾಲಡಿ ಮನೋಜ್, ಕೊಡಗು-ದಕ್ಷಿಣ ಕನ್ನಡ ಮಹಿಳಾ ಒಕ್ಕೂಟದ ಸಂಸ್ಥಾಪಕ ಸಂಚಾಲಕಿ ಪುದಿಯನೆರವನ ರೇವತಿ ರಮೇಶ್‌ ಸುದ್ದಿಗೋಷ್ಠಿಯಲ್ಲಿದ್ದರು.