ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ

| Published : May 31 2024, 02:15 AM IST

ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ಮೊಳಕಾಲ್ಮೂರು ಪಟ್ಟಣದ ಜೂನಿಯರ್ ಕಾಲೇಜ್ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯಕ್ಕೆ ಜಿಪಂ ಸಿಇಒ ಸೋಮಶೇಖರ್ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಎಸ್. ಜೆ.ಸೋಮಶೇಖರ್ ಭೇಟಿ ನೀಡಿದರು.

ತಾಲೂಕಿನ ತಮ್ಮೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಬೊಮ್ಮದೇವರಹಳ್ಳಿ ಕೆರೆ ಹಾಗೂ ಕೊನಾಪುರ ಗ್ರಾಮದಲ್ಲಿ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ನರೇಗಾ ಕೂಲಿಕಾರರ ಜೊತೆ ಯೋಜನೆಯಿಂದಾಗುವ ಉಪಯೋಗಗಳ ಕುರಿತು ಚರ್ಚಿಸಿದರು.

ನಂತರ ರಾಂಪುರ ಗ್ರಾಪಂ ಕೂಸಿನ ಮನೆಗೆ ಭೇಟಿ ನೀಡಿ, ಸ್ವಚ್ಛತೆ ಮತ್ತು ಮಕ್ಕಳ ಆಹಾರ ಮತ್ತು ರಿಜಿಸ್ಟರ್ ಗಳ ನಿರ್ವಹಣೆ ಬಗ್ಗೆ ಪರಿಶೀಲಿದ ಅವರು, ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರು ನೀಡಬೇಕೆಂದು ಅಲ್ಲಿನ ಕಾರ್ಯಕರ್ತೆರಿಗೆ ಸೂಚಿಸಿದರು.

ಅಲ್ಲದೆ ಕೆರೆಕೊಂಡಾಪುರ ಗ್ರಾಮದಲ್ಲಿ ಜೆಜೆಎಮ್ ಕಾಮಗಾರಿ ವೀಕ್ಷಣೆ ಮಾಡಿ, ಕೊಂಡ್ಲಹಳ್ಳಿಯ ಕಂಬಳಿ ನೇಯುವ ಬಗ್ಗೆ ಹಾಗೂ ನೇಕಾರಿಕೆ ಮತ್ತು ನೇಕಾರರ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಮೊಳಕಾಲ್ಮೂರು ಪಟ್ಟಣದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಅಡುಗೆ ಕೋಣೆ, ಊಟದ ಕೋಣೆ, ದಾಸ್ತಾನು ಹಾಗೂ ವಿದ್ಯಾರ್ಥಿಗಳ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ವಿದ್ಯಾರ್ಥಿಗಳಿಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿ ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ದೊಡ್ಡ ದೊಡ್ಡ ಅಧಿಕಾರಿಗಳಾಗಿ ಹೆಸರು ಗಳಿಸಬೇಕು ಎಂದು ತಿಳಿಸಿದರು.

ನಂತರ ದೂರು ಪೆಟ್ಟಿಗೆ ಮತ್ತು ಹಾಜರಾತಿ ಪುಸ್ತಕ ಪರಿಶೀಲಿಸಿ ಪ್ರತಿನಿತ್ಯ ಹಾಜರಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ವಿದ್ಯಾರ್ಥಿ ನಿಲಯದ ಸುತ್ತಲೂ ಸಿಸಿ ಕ್ಯಾಮೆರಾಗಳನ್ನು ಸುಸ್ಥಿತಿಯಲ್ಲಿ ಇಡುವಂತೆ ನಿಲಯ ಪಾಲಕರಾದ ಹಾಲೇಶಗೆ ಸೂಚಿಸಿದರು.

ಸ್ಥಳದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾಲತಿ ಅವರಿಗೆ ಪ್ರತಿ ವಾರಕ್ಕೊಮ್ಮೆ ವಿದ್ಯಾರ್ಥಿ ನಿಲಯಗಳಿಗೆ ಕಡ್ಡಾಯ ಭೇಟಿ ನೀಡಿ ಪರಿಶೀಲಿಸಬೇಕು ಖಡಕ್ಕಾಗಿ ಹೇಳಿದರು.

ಈ ವೇಳೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಡಿ. ಎಸ್. ತಿಮ್ಮಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಜಗದೀಶ್ ಹೆಬ್ಬಳಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಾಲತಿ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾಸೀರ್, ನಿಲಯ ಪಾಲಕರಾದ ಹಾಲೇಶ, ವಿಶ್ವನಾಥ, ತಾಪಂ ವ್ಯವಸ್ಥಾಪಕ ನಂದೀಶ್ ಇದ್ದರು.

----

ಬಾಕ್ಸ್ ಸುದ್ದಿ ವಿದ್ಯಾರ್ಥಿಗಳೊಂದಿಗೆ ಸಹ ಭೋಜನ

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ ಮೊಳಕಾಲ್ಮೂರು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಪಂಕ್ತಿಯಲ್ಲಿ ಕಳಿತು ಭೋಜನ ಸೇವಿಸಿ ಸರಳತೆ ಮೆರೆದರು. ಇವರಿಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಸಾತ್ ನೀಡಿದರು.