ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಪಿಯು ಹಂತವನ್ನು ಪ್ರೌಢ ಶಾಲೆಯಲ್ಲಿ ವಿಲೀನಗೊಳಿಸುವುದನ್ನು ವಿರೋಧಿಸಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ಪದವಿ ಪೂರ್ವ ಕಾಲೇಜುಗಳ ಬೋಧಕೇತರ ಸಂಘ ಜಂಟಿಯಾಗಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.ಪಿಯು ಶಿಕ್ಷಣಕ್ಕೆ ದೇಶದಲ್ಲಿಯೇ ಅತ್ಯುತ್ತಮ ಮಾನ್ಯತೆ ಇದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ಇದನ್ನು ಏಕಾಏಕಿ ಪ್ರೌಢ ಶಿಕ್ಷಣ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಸರಿಯಲ್ಲ. ಇದರಿಂದ ಪಿಯು ಗುಣಮಟ್ಟದ ಶಿಕ್ಷಣಕ್ಕೆ ಸಮಸ್ಯೆಯಾಗುತ್ತದೆ. ಕೂಡಲೇ ಇದನ್ನು ಹಿಂಪಡೆಯಬೇಕು ಎಂದರು.ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ವಿಲೀನಗೊಳಿಸಿರುವುದನ್ನು ಕೂಡಲೇ ವಾಪಸ್ ಪಡೆದು, ಈ ಹಿಂದಿನಂತೆಯೇ ಮುಂದುವರೆಸುವಂತೆ ಆಗ್ರಹಿಸಿದ್ದಾರೆ.ಪಿಯು ಶಿಕ್ಷಣವನ್ನು ಇನ್ಮುಂದೆ ಜಿಪಂ ವ್ಯಾಪ್ತಿಯಲ್ಲಿ ತರುವ ಮೂಲಕ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರಲಾಗುತ್ತದೆ. ಇದನ್ನು ಸಹ ಕೈಬಿಡುವಂತೆ ಆಗ್ರಹಿಸಿದ್ದಾರೆ.ಪರೀಕ್ಷಾ ಪದ್ಧತಿಯನ್ನು ಬದಲಾಯಿಸಿರುವುದು ಸಹ ಶಿಕ್ಷಣ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಪಿಯು ಬೋರ್ಡನ್ನು ಈ ಮೊದಲಿನಂತೆಯೇ ಪ್ರತ್ಯೇಕವಾಗಿ ಮುಂದುವರೆಸುವಂತೆ ಆಗ್ರಹಿಸಿದ್ದಾರೆ.ಸರ್ಕಾರ ಮಾಡುತ್ತಿರುವ ಬದಲಾವಣೆಯ ಸಾಧಕ-ಬಾಧಕ ಕುರಿತು ಇದುವರೆಗೂ ಪಿಯು ಉಪನ್ಯಾಸಕರೊಂದಿಗೆ ಹಾಗೂ ಪ್ರಾಚಾರ್ಯರೊಂದಿಗೆ ಸೌಜನ್ಯಕ್ಕೂ ಚರ್ಚೆ ಮಾಡಿಲ್ಲ. ವಾಸ್ತವಿಕ ಸಮಸ್ಯೆಗಳನ್ನು ಅರಿಯುವ ಗೋಜಿಗೆ ಹೋಗಿಲ್ಲ. ಆಗುವ ಅನಾಹುತಗಳ ಬಗ್ಗೆ ಪರಾಮರ್ಷೆ ಮಾಡುವುದಕ್ಕೂ ಮುಂದಾಗಿಲ್ಲ. ಕೂಡಲೇ ಚರ್ಚೆ ಮಾಡುವ ಮೂಲಕ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.ಪ್ರಾಚಾರ್ಯರ ಸಂಘದ ಅಧ್ಯಕ್ಷ ಅನಿಲಕುಮಾರ, ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರಗೌಡ, ಬೋಧಕೇತರ ಸಂಘದ ಅಧ್ಯಕ್ಷ ರುದ್ರೇಶ ಮೊದಲಾದವರು ಇದ್ದರು.